ಶ್ರೀರಾಮ ಮಂದಿರಕ್ಕಾಗಿನ ನ್ಯಾಯಾಲಯದ ಹೋರಾಟ ಶ್ರೀರಾಮನೇ ನೀಡಿದ ಅನುಭೂತಿ! – ವಕೀಲ ಶ್ರೀಧರ ಪೋತರಾಜು, ಸರ್ವೋಚ್ಚ ನ್ಯಾಯಾಲಯ

  • ಸತ್ರ: ಮಂದಿರ ರಕ್ಷಣಾ ಚರ್ಚಾಗೋಷ್ಠಿ

  • ‘ಮಂದಿರ ರಕ್ಷಣಾ ಚರ್ಚಾಗೋಷ್ಠಿ’ಯಲ್ಲಿ ದೈವೀ ಅನುಭವ ಕೇಳಿ ಧರ್ಮಪ್ರೇಮಿಗಳು ಮಂತ್ರಮುಗ್ಧರಾದರೂ!

ಎಡದಿಂದ ಶ್ರೀ. ಸುನೀಲ್ ಘನವಟ್, ವೇದಪ್ರಚಾರರತ್ನ ವೇದಕುಲಪತಿ ಶ್ರೀ. ಜಿ.ಕೆ. ಸೀತಾರಾಮನ್, ಸುದ್ದಿ ನಿರೂಪಕಿ ಶ್ವೇತಾ ತ್ರಿಪಾಠಿ, ವಕೀಲ ಶ್ರೀಧರ ಪೋತರಾಜು, ಶ್ರೀ. ಪ್ರಮೋದ ಮುತಾಲಿಕ್

ಭಾರತ್ ಮಂಡಪಂ, ದೆಹಲಿ (ವಾರ್ತೆ.) – ಶ್ರೀರಾಮ ಮಂದಿರಕ್ಕಾಗಿ ಹಿಂದೂಗಳು ನ್ಯಾಯಾಲಯದ ಹೊರಗೆ ನೀಡಿದ ಹೋರಾಟ ಅಪೂರ್ವವಾದದ್ದು; ಆದರೆ ನಾವು ವಕೀಲರು ಆ ವಿಷಯದಲ್ಲಿ ನ್ಯಾಯಾಲಯದಲ್ಲಿ ನೀಡಿದ ಹೋರಾಟವೆಂದರೆ, ಶ್ರೀರಾಮನೇ ನಮ್ಮೆಲ್ಲರಿಗೂ ನೀಡಿದ ತನ್ನ ಅಸ್ತಿತ್ವದ ಅನುಭೂತಿಯಾಗಿದೆ. ಶ್ರೀರಾಮನ ಕೃಪೆಯಿಂದಾಗಿಯೇ ಋಷಿ ಸಮಾನ ಹಿರಿಯ ವಕೀಲ ಕೇಶವ ಪರಾಶರನ್ ಅವರು ೯೨ನೇ ವಯಸ್ಸಿನಲ್ಲಿಯೂ ಈ ಹೋರಾಟವನ್ನು ಹುರುಪಿನಿಂದ ಮಾಡಿದರು. ಅವರಲ್ಲಿ ಅಸಾಧ್ಯವಾದ ಶ್ರದ್ಧೆಯನ್ನು ಮೂಡಿಸಿದವನೂ ಶ್ರೀರಾಮನೇ! ನಾನು ೨೦೧೭ರಲ್ಲಿ ವಕೀಲ ಪರಾಶರನ್ ಅವರಿಗೆ ಜೊತೆಗೂಡಿದೆ; ಆದರೆ ಈ ಸಂಪೂರ್ಣ ಮೊಕದ್ದಮೆಯಿಂದ, ‘ಜೀವನದಲ್ಲಿ ‘ಕಾಕತಾಳೀಯ’ ಎಂಬುದು ಇರುವುದಿಲ್ಲ, ಕೇವಲ ದೈವೀ ಕೃಪೆ ಮಾತ್ರ ಇರುತ್ತದೆ,’ ಎಂಬುದು ನನ್ನ ದೃಢ ಅಭಿಪ್ರಾಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಶ್ರೀಧರ ಪೋತರಾಜು ಅವರು ಭಾವಪೂರ್ಣವಾಗಿ ಪ್ರತಿಪಾದಿಸಿದರು.

‘ಭಾರತ್ ಮಂಡಪಂ’ನಲ್ಲಿ ನಡೆಯುತ್ತಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಡಿಸೆಂಬರ್ ೧೩ರಂದು ಆಯೋಜಿಸಿದ್ದ ‘ಮಂದಿರ ರಕ್ಷಣಾ ಚರ್ಚಾಗೋಷ್ಠಿ’ಯಲ್ಲಿ ಅವರು ಮಾತನಾಡುತ್ತಿದ್ದರು. ಈ ಚರ್ಚಾಗೋಷ್ಠಿಯಲ್ಲಿ ತಂಜಾವೂರು, ತಮಿಳುನಾಡಿನ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದೈವೀ ಅಂಶಗಳನ್ನು ಸಂರಕ್ಷಿಸುವ ಕುಟುಂಬದ ವೇದಪ್ರಚಾರರತ್ನ ವೇದಕುಲಪತಿ ಶ್ರೀ. ಜಿ.ಕೆ. ಸೀತಾರಾಮನ್, ಕರ್ನಾಟಕದ ಶ್ರೀರಾಮ ಸೇನೆಯ ಸಂಸ್ಥಾಪಕ ಶ್ರೀ. ಪ್ರಮೋದ್ ಮುತಾಲಿಕ್ ಮತ್ತು ಮಂದಿರ ಮಹಾಸಂಘದ ವತಿಯಿಂದ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಸಂಯೋಜಕ ಶ್ರೀ. ಸುನೀಲ್ ಘನವಟ್ ಭಾಗವಹಿಸಿದ್ದರು. ಖ್ಯಾತ ಸುದ್ದಿ ನಿರೂಪಕಿ ಶ್ವೇತಾ ತ್ರಿಪಾಠಿ ಅವರು ಈ ಸಂದರ್ಭದಲ್ಲಿ ಸೂತ್ರಸಂಚಾಲನೆ ಮಾಡಿದರು.

ಚರ್ಚಾಗೋಷ್ಠಿಯ ಪ್ರಾರಂಭದಲ್ಲಿ ಸನಾತನ ಸಂಸ್ಥೆಯ ವಕೀಲ ಪೂ. ಸುರೇಶ್ ಕುಲಕರ್ಣಿ ಅವರು ಉಪಸ್ಥಿತರಿರುವವರನ್ನು ಸನ್ಮಾನಿಸಿದರು. ನಂತರ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದೈವೀ ಅಂಶಗಳ ಕುರಿತು ಮಾಹಿತಿಯುಳ್ಳ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಈ ಸಮಯದಲ್ಲಿ ವಕೀಲ ಶ್ರೀಧರ್ ಪೋತರಾಜು ಮತ್ತು ಶ್ರೀ. ಜಿ.ಕೆ. ಸೀತಾರಾಮನ್ ಅವರು ಹೇಳಿದ ಅನುಭೂತಿಗಳನ್ನು ಕೇಳಿ ಧರ್ಮಪ್ರೇಮಿಗಳು ಮಂತ್ರಮುಗ್ಧರಾದರು.

ಈಗ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕೆಲಸ ಮಾಡಬೇಕು! – ವೇದಪ್ರಚಾರರತ್ನ ವೇದಕುಲಪತಿ ಶ್ರೀ. ಜಿ.ಕೆ. ಸೀತಾರಾಮನ್, ತಂಜಾವೂರು, ತಮಿಳುನಾಡು

ನನ್ನ ಹಲವಾರು ಪೀಳಿಗೆಯವರು ಈ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಅಂಶಗಳನ್ನು ಸಂರಕ್ಷಿಸಿ, ನಿತ್ಯಪೂಜೆ ಮಾಡಿದರು. ಇದು ಏನೆಂದು ನನಗೂ ತಿಳಿದಿರಲಿಲ್ಲ, ಆದರೂ ನಾನು ೧೮ ವರ್ಷ ಅವುಗಳ ಪೂಜೆ ಮಾಡುತ್ತಾ ಬಂದೆ. ಆ ನಂತರ ಈ ಅಂಶಗಳಲ್ಲಿನ ಕಾಂತೀಯ ಶಕ್ತಿಯ ಕುರಿತು ಸಂಶೋಧನೆ ಮಾಡಲು ನಾನು ಈ ಅಂಶಗಳನ್ನು ಅನೇಕ ಪ್ರಯೋಗಾಲಯಗಳಿಗೆ ಕಳುಹಿಸಿದ್ದೆನು; ಆದರೆ ನನ್ನ ಗುರೂರೂಪ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಅವರು ನನ್ನನ್ನು ತಡೆದರು. ಅವರು, ‘ಇವು ಸೋಮನಾಥ ಜ್ಯೋತಿರ್ಲಿಂಗದ ಅಂಶಗಳಾಗಿವೆ’ ಎಂದು ಹೇಳಿದರು. ಜನವರಿ ೩೦, ೨೦೨೬ರಿಂದ ‘ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಜೀ ಅವರ ಮಾರ್ಗದರ್ಶನದ ಮೇರೆಗೆ ಈ ಅಂಶಗಳ ಭಾರತದಾದ್ಯಂತ ದರ್ಶನ ಯಾತ್ರೆಯು ರಾಮೇಶ್ವರಂನಿಂದ ಪ್ರಾರಂಭವಾಗುವುದು. ನಾನು ಕಳೆದ ೩೦ ವರ್ಷಗಳಿಂದ ೩೬೦ ವಿದ್ಯಾರ್ಥಿಗಳಿಗೆ ವೇದಗಳನ್ನು ಕಲಿಸಿದ್ದೇನೆ. ಈಗ ನನ್ನ ಪತ್ನಿ ನಿವೃತ್ತರಾಗಿರುವುದರಿಂದ ನಾನು ಈಗ ನಿತ್ಯ ಅಗ್ನಿಹೋತ್ರ ಮುಂತಾದ ವಿಧಿಗಳಿಂದ ಮುಕ್ತನಾಗಿದ್ದೇನೆ. ಮಗ ವೇದಪಾಠಶಾಲೆಯ ಕಾರ್ಯವನ್ನು ನೋಡಿಕೊಳ್ಳುತ್ತಿರುವುದರಿಂದ ನಾನು ಈಗ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯ ಕಾರ್ಯದಲ್ಲಿ ಭಾಗಿಯಾಗಬೇಕಿದೆ. ಈ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಬಯಸುವವರು ನಮ್ಮನ್ನು ಸಂಪರ್ಕಿಸಬಹುದು, ನಾವು ಅವರ ಬಳಿಗೆ ಬಂದು ಅದನ್ನು ನೀಡುವ ವ್ಯವಸ್ಥೆ ಮಾಡುತ್ತೇವೆ, ಎಂದು ಹೇಳಿದರು.

ಮಂದಿರಗಳ ರಕ್ಷಣೆಗಾಗಿ ಆಡಳಿತಗಾರರೂ ಸಹಕರಿಸಬೇಕು! – ಪ್ರಮೋದ್ ಮುತಾಲಿಕ್, ಸಂಸ್ಥಾಪಕರು, ಶ್ರೀರಾಮ ಸೇನೆ

ಚಿಕ್ಕಮಗಳೂರಿನಿಂದ ೩೦ ಕಿಲೋಮೀಟರ್ ದೂರದಲ್ಲಿರುವ ಸ್ಥಳವೇ ದತ್ತಪೀಠ! ಈ ಸ್ಥಳದಲ್ಲಿ ಶ್ರೀ ಗುರು ದತ್ತಾತ್ರೇಯನು ಸಾಧನೆ ಮಾಡಿದ್ದರು; ಆದರೆ ಟಿಪ್ಪು ಸುಲ್ತಾನನು ಅಲ್ಲಿ ಬಾಬಾ ಬುಡನ್ ದರ್ಗಾವನ್ನು ಸ್ಥಾಪಿಸಿದನು. ಆ ನಂತರ ಅಲ್ಲಿನ ನೂರಾರು ಎಕರೆ ಪ್ರದೇಶವು ಮಜಾರ್, ಸಮಾಧಿ, ಗೋರಿ, ದರ್ಗಾ, ಗೋಮಾಂಸ ಭಕ್ಷಣೆಯಿಂದಾಗಿ ಇಸ್ಲಾಮೀಕರಣಗೊಂಡಿತ್ತು; ಆದರೆ ಕಳೆದ ೩೦ ವರ್ಷಗಳಿಂದ ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ನಡೆಸಿದ ಆಂದೋಲನಗಳು ಮತ್ತು ನೀಡಿದ ನ್ಯಾಯಾಲಯದ ಹೋರಾಟದಿಂದಾಗಿ ೯೦ ಪ್ರತಿಶತ ಪ್ರದೇಶವು ದತ್ತಭಕ್ತರದ್ದಾಗಿದೆ. ಈಗ ಕೇವಲ ಶುಕ್ರವಾರದಂದು ನಮಾಜ್ ಮಾಡಲು ಮೌಲ್ವಿ ಬರುತ್ತಾನೆ. ಅದು ಸಹ ಶೀಘ್ರದಲ್ಲಿಯೇ ನ್ಯಾಯಾಲಯದ ಆದೇಶದಿಂದ ನಿಲ್ಲುವುದು. ಮಂದಿರಗಳು ಹಿಂದೂಗಳ ಜೀವನವಾಗಿವೆ. ಆದ್ದರಿಂದ ಅವುಗಳ ರಕ್ಷಣೆಗಾಗಿ ಇಂದಿನ ಆಡಳಿತಗಾರರು ಸಹ ಸಹಾಯ ಮಾಡಬೇಕು! ವಲ್ಲಭಭಾಯಿ ಪಟೇಲ್ ಅವರು ಒಂದು ಸರಕಾರಿ ಆದೇಶ ಹೊರಡಿಸಿ ಮತಾಂಧರು ಕೆಡವಿದ ಶ್ರೀ ಸೋಮನಾಥ ಮಂದಿರವನ್ನು ಪುನಃ ಕಟ್ಟಿಸಬಹುದಾದರೆ, ಅದೇ ಮಾದರಿಯಲ್ಲಿ ಇಂದು ಎಲ್ಲಾ ಮಂದಿರಗಳ ರಕ್ಷಣೆಯಾಗಬೇಕು. ಹಿಂದೂಗಳು ಇನ್ನು ಮುಂದೆ ಮತಾಂಧರನ್ನು ಎದುರಿಸಲು ಹೋರಾಟ ಮಾಡಲು ಸಿದ್ಧತೆಯನ್ನು ಇಟ್ಟುಕೊಳ್ಳಬೇಕು, ಎಂದು ನಾನು ಮನವಿ ಮಾಡುತ್ತೇನೆ, ಎಂದು ಹೇಳಿದರು.

ಮಂದಿರ ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ‘ಮಂದಿರ ಮಹಾಸಂಘ’! – ಸುನೀಲ ಘನವಟ್, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

ಮಂದಿರದಲ್ಲಿನ ಪರಂಪರೆಗಳ ರಕ್ಷಣೆ, ಮಂದಿರಗಳ ರಕ್ಷಣೆ, ಮಂದಿರ-ಮಂದಿರಗಳಲ್ಲಿ ಸಮನ್ವಯ, ಮಂದಿರಗಳ ಸಂಘಟನೆ, ಮಂದಿರಗಳೇ ಧರ್ಮಶಿಕ್ಷಣದ ಕೇಂದ್ರಗಳು ಈ ಪಂಚಸೂತ್ರಗಳಿಗನುಸಾರವಾಗಿ ‘ಮಂದಿರ ಮಹಾಸಂಘ’ದ ಕಾರ್ಯವು ನಡೆಯುತ್ತಿದೆ. ಕಳೆದ ೩ ವರ್ಷಗಳಲ್ಲಿ ಮಂದಿರ ಮಹಾಸಂಘದ ಮಾಧ್ಯಮದಿಂದ ೧೫ ಸಾವಿರ ಮಂದಿರಗಳ ಪ್ರತಿನಿಧಿಗಳ ಸಂಘಟನೆಯಾಗಿದ್ದು, ೨ ಸಾವಿರ ೩೦೦ಕ್ಕೂ ಹೆಚ್ಚು ಮಂದಿರಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮುಂಬಯಿನ ಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದ ನಂತರ ಅದರ ಪರಿಣಾಮವಾಗಿ ಕೇವಲ ದೇಶದಲ್ಲಿ ಮಾತ್ರವಲ್ಲ, ಆಸ್ಟ್ರೇಲಿಯಾದಂತಹ ದೇಶದಲ್ಲಿಯೂ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ೨೦೦೮ರಲ್ಲಿ ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್ ಸರಕಾರವು ೪.೫ ಲಕ್ಷ ಮಂದಿರಗಳನ್ನು ಸ್ವಾಧೀನಪಡಿಸಿಕೊಳ್ಳಲು ಕಾನೂನನ್ನು ಸಿದ್ಧಪಡಿಸಿತ್ತು; ಆದರೆ ಮಹಾಸಂಘವು ಸಂಘಟಿತವಾಗಿ ಮಾಡಿದ ವಿರೋಧದಿಂದಾಗಿ ಆ ಕಾನೂನನ್ನು ಮೂಲೆಗುಂಪು ಮಾಡಬೇಕಾಯಿತು. ಇಂದಿಗೂ ಕಾಂಗ್ರೆಸ್ ಸರಕಾರವು ಮಂದಿರಗಳ ಮೇಲೆ ತೆರಿಗೆ ವಿಧಿಸಲು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಕಾನೂನನ್ನು ಅಂಗೀಕರಿಸಿತ್ತು; ಆದರೆ ಮಹಾಸಂಘದ ವಿರೋಧದಿಂದಾಗಿ ರಾಜ್ಯಪಾಲರು ಅದರ ಮೇಲೆ ಸಹಿ ಹಾಕಲಿಲ್ಲ. ಮಂದಿರಗಳು ಧರ್ಮಶಿಕ್ಷಣದ ಕೇಂದ್ರಗಳಾಗಲು ಮಾಡಿದ ಪ್ರಯತ್ನಗಳಿಂದಾಗಿ ಪ್ರತಿ ವಾರ ೨೦ ಸಾವಿರ ಹಿಂದೂಗಳು ಆರತಿಗಾಗಿ ಒಟ್ಟು ಸೇರುತ್ತಾರೆ. ಒಟ್ಟಿನಲ್ಲಿ, ಮಂದಿರಗಳು ಹಿಂದೂಗಳ ಆಧಾರಶಿಲೆಯಾಗಿವೆ. ಆದ್ದರಿಂದ ಅವುಗಳನ್ನು ರಕ್ಷಿಸಲು ಒಂದಾಗುವುದು ನಮ್ಮ ಧರ್ಮ ಕರ್ತವ್ಯವಾಗಿದೆ, ಎಂದು ಹೇಳಿದರು.

ವಕೀಲ ಶ್ರೀಧರ ಪೋತರಾಜು ಅವರು ಹೇಳಿದ ವೈಶಿಷ್ಟ್ಯಪೂರ್ಣ ಅಂಶಗಳು

1. ಮೊಕದ್ದಮೆಯ ಸತತ ೪೦ ದಿನಗಳ ವಿಚಾರಣೆ ನಡೆಯುತ್ತಿದ್ದಾಗ, ವಕೀಲ ಪರಾಶರನ್ ಅವರಿಗೆ ವಯಸ್ಸಿನ ಕಾರಣದಿಂದ ನಡೆಯಲು ಆಗುತ್ತಿರಲಿಲ್ಲ. ನಾವು ಅವರನ್ನು ಗಾಲಿ ಚಕ್ರದ ಕುರ್ಚಿಯಲ್ಲಿ ಕರೆದೊಯ್ಯುತ್ತಿದ್ದೆವು. ಅವರಿಗೆ ಕೃತಕ ಹಲ್ಲುಗಳು, ಕಿವಿಯಲ್ಲಿ ಕೇಳುವ ಯಂತ್ರವನ್ನು ಅಳವಡಿಸಲಾಗಿತ್ತು. ಮಂಡಿ ನೋವಿನ ತೊಂದರೆ ಇದ್ದರೂ ಅವರು ಛಲ ಬಿಡಲಿಲ್ಲ.

2. ವಕೀಲ ಪರಾಶರನ್ ಅವರು, ತಮ್ಮ ಒಂದು ಭುಜದ ಮೇಲೆ ಶ್ರೀಕೃಷ್ಣ ಮತ್ತು ಮತ್ತೊಂದು ಭುಜದ ಮೇಲೆ ಶ್ರೀರಾಮನು ಕುಳಿತು ‘ಅವರೇ ನ್ಯಾಯಾಲಯದಲ್ಲಿ ಎಲ್ಲವನ್ನೂ ಸೂಚಿಸುತ್ತಿದ್ದಾರೆ’ ಎಂದು ತಮಗೆ ಅನಿಸುತ್ತಿತ್ತು ಎಂದು ಹೇಳುತ್ತಿದ್ದರು.

3. ವಿರೋಧ ಪಕ್ಷವು ‘ಒಮ್ಮೆ ಕಟ್ಟಿದ ಮಸೀದಿಯು ಶಾಶ್ವತವಾಗಿ ಮಸೀದಿಯಾಗಿಯೇ ಇರುತ್ತದೆ’ ಎಂದು ಹೇಳಿದಾಗ, ಅದನ್ನು ಹೇಗೆ ಪ್ರತಿವಾದಿಸಬೇಕು ಎಂದು ನಾವು ಗೊಂದಲಕ್ಕೊಳಗಾಗಿದ್ದೆವು; ಆದರೆ ಆಗ ವಕೀಲ ಪರಾಶರನ್ ಅವರು, ‘ಒಮ್ಮೆ ಕಟ್ಟಿದ ಮಂದಿರವು ಯಾವಾಗಲೂ ಮಂದಿರವಾಗಿಯೇ ಇರುತ್ತದೆ!’, ಎಂದು ಖಚಿತವಾಗಿ ಹೇಳಿದರು.

4. ಮೊಕದ್ದಮೆಯ ಸಮಯದಲ್ಲಿ ಜೊತೆಗಿದ್ದ ಸಹ-ವಕೀಲರಾದ ಯೋಗೇಶ್ವರನ್ ಮತ್ತು ಭಕ್ತಿವರ್ಧನ್ ಸಿಂಗ್ ಅವರು ಬರುವ ಪ್ರತಿಯೊಂದು ಪ್ರಶ್ನೆಗೆ ಯಾವ ಗ್ರಂಥದಲ್ಲಿ ಕೈ ಹಾಕುತ್ತಿದ್ದರೋ, ಅಲ್ಲಿ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ನೀಡುವ ಪುರಾವೆಗಳು ಸಿಗುತ್ತಿದ್ದವು.

5. ಈ ಮೊಕದ್ದಮೆಯಲ್ಲಿ ಇದ್ದಕ್ಕಿದ್ದಂತೆ ಪುರಾತತ್ವ ಇಲಾಖೆಯು ‘ಗ್ರೌಂಡ್ ಪೆನಿಟ್ರೇಟಿಂಗ್ ರಡಾರ್’ (ಭೂಮಿಯ ಕೆಳಗಿನ ಭಾಗವನ್ನು ರಡಾರ್ ಮೂಲಕ ಪರಿಶೀಲನೆ ಮಾಡುವುದು) ಪರೀಕ್ಷೆಯನ್ನು ಮಾಡುವ ಬೇಡಿಕೆಯನ್ನು ಇಟ್ಟಿತು. ಅದರಿಂದಲೂ ‘ಅಲ್ಲಿ ಭೂಮಿಯ ಕೆಳಗೆ ಮಂದಿರವಿತ್ತು’ ಎಂಬುದು ಸಾಬೀತಾಯಿತು. ಈ ಮೊಕದ್ದಮೆಯಲ್ಲಿನ ಪ್ರತಿಯೊಂದು ವಿಷಯವನ್ನೂ ರಾಮನೇ ನಡೆಸುತ್ತಿದ್ದನು.

6. ಈ ಮೊಕದ್ದಮೆಯು ಹಿಂದೂಗಳ ಅಸ್ತಿತ್ವದ ಪ್ರಶ್ನೆಯಾಗಿತ್ತು. ‘ಸನಾತನ ಸಂಸ್ಕೃತಿಯು ಜೀವಂತವಾಗಿದೆ’ ಎಂಬುದನ್ನು ಸಾಬೀತುಪಡಿಸುವ ಹೋರಾಟವಾಗಿತ್ತು.

(ಇವರ ಸವಿಸ್ತಾರವಾದ ಭಾಷಣವನ್ನು ಶೀಘ್ರದಲ್ಲಿಯೇ ಪ್ರಕಟಿಸುತ್ತಿದ್ದೇವೆ. – ಸಂಪಾದಕರು)