SRSmahotsav Delhi 2025 : ‘ಸ್ವರಾಜ್ಯ ಮತ್ತು ಸಂಸ್ಕೃತಿ’ ಅಧಿವೇಶನದಲ್ಲಿ ಭಾರತದ ಪ್ರಾಚೀನ ಇತಿಹಾಸ ಹಾಗೂ ದೇಶದ ಮುಂದಿರುವ ಸಮಸ್ಯೆಗಳ ಕುರಿತು ಗಣ್ಯರಿಂದ ಮೌಲಿಕ ವಿಚಾರ ಮಂಡನೆ!

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ಭಾರತ ಮಂಡಪಂ – ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಮೊದಲ ಉದ್ಘಾಟನಾ ಅಧಿವೇಶನದ ನಂತರ ‘ಸ್ವರಾಜ್ಯ ಮತ್ತು ಸಂಸ್ಕೃತಿ’ ವಿಷಯದ ಕುರಿತು ಉದ್ಭೋದನಾ ಸತ್ರ ಪ್ರಾರಂಭವಾಯಿತು. ಈ ಸತ್ರದಲ್ಲಿ, ವೇದಿಕೆಯ ಮೇಲೆ ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ವೇದವೀರ ಆರ್ಯ, ಭಾಜಪ ವಕ್ತಾರರಾದ ಶ್ರೀ. ಪ್ರದೀಪ ಭಂಡಾರಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ಸಂತ ಪೂ. ಪ್ರದೀಪ ಖೇಮಕಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ, ಪೂ. ಪ್ರದೀಪ ಖೇಮಕಾ ಅವರು ಈ ಮಹೋತ್ಸವದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ನೀಡಿದ ಸಂದೇಶವನ್ನು ವಾಚನ ಮಾಡಿದರು. ತದನಂತರ, ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಅವರು ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ವೇದವೀರ ಆರ್ಯ ಅವರನ್ನು ಸನ್ಮಾನಿಸಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ಭಾಜಪ ವಕ್ತಾರರಾದ ಶ್ರೀ. ಪ್ರದೀಪ ಭಂಡಾರಿ ಅವರನ್ನು ಸನ್ಮಾನಿಸಿದರು. ನಂತರ, ಡಾ. ವೇದವೀರ ಆರ್ಯ ಅವರು ಬರೆದ ‘ಕ್ರೋನಾಲಜಿ ಆ್ಯಂಡ್ ಒರಿಜಿನ್ಸ್ ಆಫ್ ಇಂಡೋ-ಯುರೋಪಿಯನ್ ಸಿವಿಲೈಸೇಷನ್’ (ಇಂಡೋ-ಯುರೋಪಿಯನ್ ಸಂಸ್ಕೃತಿಯ ಕಾಲಕ್ರಮ ಮತ್ತು ಉಗಮ) ಎಂಬ ಪುಸ್ತಕವನ್ನು ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರ ಹಸ್ತದಿಂದ ಪ್ರಕಾಶನ ಮಾಡಲಾಯಿತು. ಡಾ. ವೇದವೀರ ಆರ್ಯ ಅವರು ಪ್ರಾಚೀನ ಭಾರತೀಯ ಇತಿಹಾಸ ಮತ್ತು ವೈದಿಕ ಜ್ಞಾನದ ತಜ್ಞರಾಗಿದ್ದಾರೆ. ಅವರು ಭಾರತದ ಅಸ್ಮಿತೆಯೊಂದಿಗೆ (ಗುರುತಿನೊಂದಿಗೆ) ಸಂಬಂಧಿಸಿದ ಅನೇಕ ಮಹತ್ವಪೂರ್ಣ ಸಂಗತಿಗಳು ಮತ್ತು ದಾಖಲೆಗಳ ಆಧಾರದ ಮೇಲೆ, ಭಾರತೀಯ ಇತಿಹಾಸದಲ್ಲಿರುವ ವಿಕೃತಿ ಕಥೆಗಳನ್ನು ಈ ಪುಸ್ತಕದಲ್ಲಿ ಖಂಡಿಸಿದ್ದಾರೆ.

ಶ್ರೀರಾಮನು ಸ್ಥಾಪಿಸಿದ ಆದರ್ಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸಬೇಕು! – ಡಾ. ವೇದವೀರ ಆರ್ಯ, ಜಂಟಿ ಕಾರ್ಯದರ್ಶಿ, ರಕ್ಷಣಾ ಇಲಾಖೆ

ಇತಿಹಾಸವು ರಾಷ್ಟ್ರದ ಅಡಿಪಾಯವಾಗಿರುತ್ತದೆ. ಇತಿಹಾಸದಿಂದಲೇ ರಾಷ್ಟ್ರದ ರಕ್ಷಣೆ ಮತ್ತು ಸಂವರ್ಧನೆ ಸಾಧ್ಯವಾಗುತ್ತದೆ. ಸನಾತನ ರಾಷ್ಟ್ರದ ಸಂಕಲ್ಪನೆಯು ಇತಿಹಾಸದಿಂದ ನಿರ್ಮಾಣವಾಯಿತು. ಇತಿಹಾಸವು ಯಾವುದೇ ರಾಷ್ಟ್ರದ ವ್ಯಕ್ತಿತ್ವವಾಗಿರುತ್ತದೆ. ವಿಶ್ವದ ನಿರ್ಮಿತಿಯ ಕಾರ್ಯದಲ್ಲಿ ಸನಾತನದ ಸಂತ-ಮಹಾತ್ಮರ ಕೊಡುಗೆ ಬಹಳ ದೊಡ್ಡದಾಗಿದೆ. ಸನಾತನ ಧರ್ಮದ ಈ ಕೊಡುಗೆಯನ್ನು ಇಂದಿನ ಪೀಳಿಗೆಗೆ ಕಲಿಸುತ್ತಿಲ್ಲ. ಕಾಲಗಣನೆಯಿಲ್ಲದ ಇತಿಹಾಸದ ಲೇಖನವು ಅಪೂರ್ಣವಾಗಿದೆ. ಇಂದಿನ ಇತಿಹಾಸದಲ್ಲಿ ವೇದ, ರಾಮಾಯಣ, ಮಹಾಭಾರತ, ಪುರಾಣಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಭಗವಾನ ಶ್ರೀರಾಮನ ಚರಿತ್ರೆಯನ್ನು ಭಾರತೀಯ ಇತಿಹಾಸದಲ್ಲಿ ಸೇರಿಸಬೇಕು. ಶ್ರೀರಾಮನು ಸ್ಥಾಪಿಸಿದ ಆದರ್ಶಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸಬೇಕು. ಕಾಲಗಣನೆಯ ಆಧಾರದ ಮೇಲೆ ಇತಿಹಾಸವನ್ನು ಸ್ಥಾಪಿಸುವುದರಿಂದ ಮಾತ್ರ ಸನಾತನ ರಾಷ್ಟ್ರದ ನಿರ್ಮಾಣ ಸಾಧ್ಯವಿದೆ. ಭಾರತೀಯ ಪರಂಪರೆಯಲ್ಲಿ ಜ್ಞಾನ, ವಿಜ್ಞಾನ, ತತ್ವಶಾಸ್ತ್ರಗಳ ಸಾಧನೆಯು ಅಂತರ್ಗತವಾಗಿದೆ. ವೇದಗಳಿಂದ ಮಹಾಭಾರತದವರೆಗೆ ಅವುಗಳಲ್ಲಿ ಸೇರಿಸಲಾದ ಘಟನೆಗಳು ಖಗೋಳಶಾಸ್ತ್ರವನ್ನು ಆಧರಿಸಿವೆ. ನಾವು ನಮ್ಮ ಗ್ರಂಥಗಳಿಂದ, ಸಂಸ್ಕೃತಿಯಿಂದ ದೂರವಾಗಿದ್ದೇವೆ. ಭಾರತಭೂಮಿಯೇ ಪ್ರಥಮ ಸಂಸ್ಕೃತಿಯ (ಸಭ್ಯತೆಯ) ಉಗಮಸ್ಥಾನವಾಗಿದೆ. ಇಂಡೋ-ಯುರೋಪಿಯನ್ ಸಂಸ್ಕೃತಿಯ ಉಗಮಸ್ಥಾನ ಭಾರತವಾಗಿದೆ. ಇತಿಹಾಸದ ಕಾಲಗಣನೆಯನ್ನು ಸ್ಥಾಪಿಸಿ, ಅದರ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಇತಿಹಾಸ, ಬಾಹ್ಯಾಕಾಶ ವಿಜ್ಞಾನ, ಗಣಿತ, ವಿಜ್ಞಾನವನ್ನು ಕಲಿಸಬೇಕು. ಖಗೋಳಶಾಸ್ತ್ರ ಮತ್ತು ಕೃಷಿ ಆಧಾರಿತ ಸಮಾಜದ ನಿರ್ಮಾಣವು ಪ್ರಥಮವಾಗಿ ಭಾರತದಲ್ಲಿ ಆಯಿತು. ಭಾರತದ ಭೂತಕಾಲದ ವೈಭವವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಮತ್ತು ಅದರ ಮೂಲಕವೇ ಸನಾತನ ರಾಷ್ಟ್ರದ ನಿರ್ಮಾಣದ ಕಾರ್ಯವು ನಡೆಯಲಿದೆ.