ತುಳಜಾಪುರ ದೇವಸ್ಥಾನದಲ್ಲಿನ ಪ್ರಾಚೀನ ಬ್ರಹ್ಮದೇವನ ವಿಗ್ರಹ ಭಗ್ನವಾದ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಅದರ ವರದಿಯನ್ನು ತಕ್ಷಣ ಕಳುಹಿಸಿ!

ಧಾರಾಶಿವ: ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಯ ಬಳಿಕ, ಜಿಲ್ಲಾಧಿಕಾರಿಗೆ ತಕ್ಷಣ ಆದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರತಾಪ ಸರನಾಯಿಕ್ !

(ಬಲದಿಂದ) ಸಚಿವ ಶ್ರೀ. ಪ್ರತಾಪ ಸರನಾಯಿಕ ಅವರಿಗೆ ಮನವಿ ಸಲ್ಲಿಸುತ್ತಿರುವ ಶ್ರೀ. ಸುನೀಲ್ ಘನವಟ್ ಮತ್ತು ಪಕ್ಕದಲ್ಲಿ ಶ್ರೀ. ಅತುಲ್ ಅರ್ವೆನ್ಲಾ

ನಾಗ್ಪುರ, ಡಿಸೆಂಬರ್ 11 (ವಾರ್ತೆ) – ಶ್ರೀಕ್ಷೇತ್ರ ತುಳಜಾಪುರ ದೇವಸ್ಥಾನದಲ್ಲಿನ ಪ್ರಾಚೀನ ಬ್ರಹ್ಮದೇವನ ವಿಗ್ರಹ ಭಗ್ನವಾದ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಮತ್ತು ಶ್ರೀ ತುಳಜಾಪುರ ತೀರ್ಥಕ್ಷೇತ್ರ ಅಭಿವೃದ್ಧಿ ಯೋಜನೆಯಲ್ಲಿ ದೇವಸ್ಥಾನದ ರಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಯೋಜನೆಯಲ್ಲಿ ಕುಲಾಚಾರ (ವಂಶದ ಆಚರಣೆಗಳು), ವಂಶಪರಂಪರೆ ಮತ್ತು ಇತರ ಧಾರ್ಮಿಕ ಕಾರ್ಯಗಳಿಗಾಗಿ ಜಾಗವನ್ನಿಡಬೇಕೆಂಬ ಬೇಡಿಕೆಯ ಮನವಿಯನ್ನು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಡಿಸೆಂಬರ್ 10 ರಂದು ವಿಧಾನಭವನದಲ್ಲಿ ಧಾರಾಶಿವ ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀ. ಪ್ರತಾಪ ಸರನಾಯಿಕ ಅವರಿಗೆ ಸಲ್ಲಿಸಲಾಯಿತು. ಶ್ರೀ. ಪ್ರತಾಪ ಸರನಾಯಿಕ್ ಅವರು ತಕ್ಷಣವೇ ಧಾರಾಶಿವ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಅದರ ವರದಿಯನ್ನು ತಕ್ಷಣವೇ ಅವರಿಗೆ ಸಲ್ಲಿಸಬೇಕೆಂದು ಆದೇಶಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನೀಲ ಘನವಟ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀಯುತರಾದ ಅತುಲ ಅರ್ವೆನ್ಲಾ ಮತ್ತು ಅಭಿಜಿತ ಪೋಲ್ಕೆ ಉಪಸ್ಥಿತರಿದ್ದರು.

ಮನವಿಯಲ್ಲಿ, ಶ್ರೀ ತುಳಜಾಪುರ ತೀರ್ಥಕ್ಷೇತ್ರ ಅಭಿವೃದ್ಧಿ ಯೋಜನೆಯ ಕೆಲಸ ಪ್ರಾರಂಭವಾಗುವ ಮೊದಲೇ, ದೇವಸ್ಥಾನದ ಆವರಣದಲ್ಲಿರುವ ಅನೇಕ ಉಪದೇವತೆಗಳ ವಿಗ್ರಹಗಳನ್ನು ಸ್ಥಳಾಂತರಿಸಲಾಗಿದೆ. ದೇವಸ್ಥಾನದ ರಚನೆಯನ್ನು ಬದಲಾಯಿಸುವಾಗ ಯಾವುದೇ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳದ ಕಾರಣ, ಪ್ರಾಚೀನ ಶ್ರೀ ಬ್ರಹ್ಮದೇವನ ವಿಗ್ರಹವು ನಿರ್ಲಕ್ಷ್ಯದಿಂದಾಗಿ ಎರಡು ಭಾಗವಾಗಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಬಗ್ಗೆ ಅನೇಕ ಸ್ಥಳೀಯ ಸಂಘಟನೆಗಳು ಮತ್ತು ನಾಗರಿಕರು ದೂರು ನೀಡಿದರೂ, ಕಳೆದ ಎರಡೂವರೆ ತಿಂಗಳಿಂದ ತಪ್ಪಿತಸ್ಥ ಸರಕಾರಿ ಅಧಿಕಾರಿಗಳ ವಿರುದ್ಧ ಇನ್ನೂ ಏಕೆ ಮೊಕದ್ದಮೆ ದಾಖಲಿಸಲಾಗಿಲ್ಲ? ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹಾಗೆಯೇ, ಈ ಯೋಜನೆಯನ್ನು ಧಾರ್ಮಿಕ ದೃಷ್ಟಿಕೋನದಿಂದ ಪರಿಶೀಲಿಸಲು ಧರ್ಮಶಾಸ್ತ್ರದ ವಿದ್ವಾಂಸರು, ಧರ್ಮಾಚಾರ್ಯರು ಮತ್ತು ಶಂಕರಾಚಾರ್ಯ ಪೀಠಗಳ ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮುಖ್ಯ ಪ್ರವೇಶದ್ವಾರವನ್ನು ಮೊದಲಿನಂತೆಯೇ ಇಡಬೇಕು. ಹಿಂಬದಿಯಿಂದ ಹೊಸ ದ್ವಾರವನ್ನು ನಿರ್ಮಿಸಿ ದೇವಸ್ಥಾನದ ರಚನೆಯನ್ನು ಬದಲಾಯಿಸಬಾರದೆಂದು ಮಹಾರಾಷ್ಟ್ರ ಮಂದಿರ ಮಹಾಸಂಘದ ವತಿಯಿಂದ ಬೇಡಿಕೆ ಸಲ್ಲಿಸಲಾಗಿದೆ.