ಇತರ ವಿಮಾನಯಾನ ಸಂಸ್ಥೆಗಳು ನಿಗದಿತ ಮಿತಿಗಿಂತ ಹೆಚ್ಚು ಬಾಡಿಗೆ ವಿಧಿಸಬಾರದು! – ಕೇಂದ್ರ ಸರಕಾರ

‘ಇಂಡಿಗೋ’ ಸ್ಥಿತಿ ಶೋಚನೀಯ: ಇಲ್ಲಿಯವರೆಗೆ ೨೦೦೦ ವಿಮಾನಗಳ ಹಾರಾಟ ರದ್ದು

ನವದೆಹಲಿ – ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ’ದ ನೂರಾರು ವಿಮಾನಗಳ ಹಾರಾಟವು ಡಿಸೆಂಬರ್ ೬ ರಂದು ಸಹ ರದ್ದಾಯಿತು. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ತೀವ್ರ ತೊಂದರೆಯನ್ನು ಅನುಭವಿಸಿದರು. ಕಳೆದ ೪ ದಿನಗಳಲ್ಲಿ ರದ್ದಾದ ವಿಮಾನಗಳ ಹಾರಾಟದ ಸಂಖ್ಯೆ ೨೦೦೦ ಕ್ಕೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ೩ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ತೊಂದರೆಯಾಗಿದೆ. ಅನೇಕ ಪ್ರಯಾಣಿಕರ ವಸ್ತುಗಳು ಸಹ ಕಾಣೆಯಾಗಿರುವುದು ಕಂಡುಬಂದಿದೆ. ಇಂಡಿಗೋದ ವಿಮಾನಗಳ ಹಾರಾಟದ ಸ್ಥಿತಿಯು ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿ ಮುಂದುವರೆಯುವ ಸಾಧ್ಯತೆಯಿದೆ. ವಿಮಾನ ಸೇವೆಗಳು ಸಾಮಾನ್ಯ ಸ್ಥಿತಿಗೆ ಮರಳಲು ಡಿಸೆಂಬರ್ ೧೫ ರವರೆಗೆ ಸಮಯ ಬೇಕಾಗಬಹುದು ಎಂದು ಇಂಡಿಗೋ ಹೇಳಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಅವರ ಟಿಕೆಟ್ ಹಣವನ್ನು ಹಿಂದಿರುಗಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ. ಈ ನಡುವೆ ಇತರ ವಿಮಾನಯಾನ ಸಂಸ್ಥೆಗಳು ಈ ಪರಿಸ್ಥಿತಿಯ ಲಾಭ ಪಡೆದು ಬಾಡಿಗೆಯನ್ನು ಹೆಚ್ಚಿಸಿದ ಕಾರಣ, ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಬಾಡಿಗೆ ಹೆಚ್ಚಿಸದಂತೆ ಆದೇಶಿಸಿದೆ.

ಇದು ಇಂಡಿಗೋದ್ದೇ ತಪ್ಪು! – ಕೇಂದ್ರ ಸಚಿವ ನಾಯ್ಡು

ಈ ಸಂಬಂಧ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು, ಹೊಸ ನಿಯಮಗಳು ನವೆಂಬರ್ ೧ ರಿಂದ ಜಾರಿಗೆ ಬಂದಿವೆ; ಆದರೆ ಬೇರೆ ಯಾವುದೇ ವಿಮಾನಯಾನ ಸಂಸ್ಥೆಗೆ ಸಮಸ್ಯೆ ಉಂಟಾಗಿಲ್ಲ. ಇದರಿಂದ ಇಂಡಿಗೋದ್ದೇ ತಪ್ಪು ಎಂದು ಸ್ಪಷ್ಟವಾಗುತ್ತದೆ. ಈ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು. ‘ಇಂಡಿಗೋ’ದ ಪರಿಸ್ಥಿತಿಯಿಂದಾಗಿ ಕೆಲವು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದನ್ನು ಒಂದು ದಿನದ ನಂತರ ನಾಗರಿಕ ವಿಮಾನಯಾನ ಸಚಿವಾಲಯವು ಗಮನಿಸಿದೆ. ಸಚಿವಾಲಯವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅಧಿಕೃತ ನಿರ್ದೇಶನಗಳನ್ನು ಹೊರಡಿಸಿದ್ದು, ಬಾಡಿಗೆ ವಿಧಿಸುವ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಈ ಮಿತಿ ಅನ್ವಯವಾಗುತ್ತದೆ. ಈ ನಿರ್ದೇಶನದ ಉದ್ದೇಶವು ಬಾಡಿಗೆ ವಿಧಿಸುವಿಕೆಯಲ್ಲಿ ಶಿಸ್ತು ಕಾಪಾಡುವುದು, ತೊಂದರೆಯಲ್ಲಿರುವ ಪ್ರಯಾಣಿಕರ ಶೋಷಣೆಯನ್ನು ತಡೆಯುವುದು ಮತ್ತು ಈ ಅವಧಿಯಲ್ಲಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ರೋಗಿಗಳು ಆರ್ಥಿಕ ತೊಂದರೆಗಳನ್ನು ಎದುರಿಸದಿರುವುದನ್ನು ಖಚಿತಪಡಿಸುವುದಾಗಿದೆ.

ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ!

ಇಂಡಿಗೋದಿಂದಾಗಿ ನಿರ್ಮಾಣವಾದ ಪರಿಸ್ಥಿತಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಕಾನೂನು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸುವುದು ಮತ್ತು ವಿಳಂಬ ಮಾಡುವುದು, ಮಾನವೀಯ ಬಿಕ್ಕಟ್ಟು ಮತ್ತು ಪ್ರಯಾಣಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಇತರ ವಿಮಾನಯಾನ ಸಂಸ್ಥೆಗಳು ನಿಗದಿತ ಮಿತಿಗಿಂತ ಹೆಚ್ಚು ಬಾಡಿಗೆಯನ್ನು ವಿಧಿಸಿದರೆ, ಅದನ್ನು ಅಪರಾಧವೆಂದು ಪರಿಗಣಿಸಬೇಕು! ಇದಕ್ಕಾಗಿ ಕೇಂದ್ರ ಸರಕಾರವು ಕಾನೂನು ಜಾರಿಗೆ ತರುವುದು ಅವಶ್ಯಕ, ಇಲ್ಲದಿದ್ದರೆ ಜನರು ಲೂಟಿಯಾಗುವುದನ್ನು ತಪ್ಪಿಸಲಾಗದು!