ನನ್ನ ಪತ್ನಿ ಸ್ವಲ್ಪಮಟ್ಟಿಗೆ ಭಾರತೀಯ ಮೂಲದವರಾಗಿದ್ದಾರೆ; ನೊಬೆಲ್ ಪ್ರಶಸ್ತಿ ವಿಜೇತ ಚಂದ್ರಶೇಖರ ಅವರ ಹೆಸರನ್ನು ನಮ್ಮ ಮಗುವಿಗೆ ಇಟ್ಟಿದ್ದೇವೆ: ಪ್ರಸಿದ್ಧ ಅಮೆರಿಕನ್ ಉದ್ಯಮಿ ಎಲಾನ್ ಮಸ್ಕ್

ನ್ಯೂಯಾರ್ಕ್ (ಅಮೆರಿಕ) – ನನ್ನ ಪತ್ನಿ ಶಿವೊನ್ ಜಿಲಿಸ್ ಸ್ವಲ್ಪಮಟ್ಟಿಗೆ ಭಾರತೀಯ ಮೂಲದವಳು. ನನ್ನ ಮಗನ ಹೆಸರನ್ನು ಕೂಡ ನೊಬೆಲ್ ಪ್ರಶಸ್ತಿ ವಿಜೇತ ಖಗೋಳ ಭೌತವಿಜ್ಞಾನಿ ಚಂದ್ರಶೇಖರ ಅವರ ಹೆಸರಿನಿಂದ ‘ಶೇಖರ’ ಎಂದು ಇಡಲಾಗಿದೆ ಎಂದು ಅಮೆರಿಕದ ಪ್ರಸಿದ್ಧ ಉದ್ಯಮಿ ಎಲಾನ್ ಮಸ್ಕ್ ಮಾಹಿತಿ ನೀಡಿದರು. ಅವರು ನಿಖಿಲ್ ಕಾಮತ ಅವರ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಮಸ್ಕ್ ಅವರ ಪತ್ನಿ ಶಿವೊನ್ ಜಿಲಿಸ್ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಜ್ಞರಾಗಿದ್ದಾರೆ. ಅವರು 2017 ರಿಂದ ನ್ಯೂರಾಲಿಂಕ್ ಸಂಸ್ಥೆಯಲ್ಲಿ ಮಹಾನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಶಿವೊನ್ ಜಿಲಿಸ್ ಅವರು ಭಾರತದಲ್ಲಿ ಕೆಲವು ಕಾಲ ವಾಸವಾಗಿದ್ದರೇ?’ ಎಂದು ಕೇಳಿದಾಗ, ಮಸ್ಕ್ ಅವರು ಮಾತನಾಡುತ್ತಾ, ಚಿಕ್ಕ ಮಗುವಾಗಿದ್ದಾಗಲೇ ಅವಳನ್ನು ದತ್ತು ನೀಡಲಾಯಿತು. ಆನಂತರ ಅವಳು ಕೆನಡಾದಲ್ಲಿ ಬೆಳೆದಳು. ಅವಳ ತಂದೆ ಬಹುಶಃ ಭಾರತೀಯ ಮೂಲದವರಾಗಿದ್ದರು; ಆದ್ದರಿಂದ ಅವರ ಅರ್ಧದಷ್ಟು ಪರಂಪರೆ ಭಾರತೀಯವಾಗಿದೆ ಎಂದು ಹೇಳಿದರು.

ಅಮೆರಿಕ ಭಾರತೀಯ ಪ್ರತಿಭೆಯಿಂದ ಅಪಾರ ಪ್ರಯೋಜನ ಪಡೆದಿದೆ!

ಎಲಾನ್ ಮಸ್ಕ್ ಅವರು ತಮ್ಮ ಮಾತು ಮುಂದುವರಿಸಿ, ಅಮೆರಿಕಕ್ಕೆ ಭಾರತೀಯ ಪ್ರತಿಭೆಯಿಂದ ಅಪಾರ ಪ್ರಯೋಜನವಾಗಿದೆ; ಆದರೆ ಈಗ ಈ ಪ್ರವೃತ್ತಿ ಬದಲಾಗುತ್ತಿರುವಂತೆ ಕಾಣುತ್ತಿದೆ. ಬದಲಾಗುತ್ತಿರುವ ವೀಸಾ ನೀತಿಗಳು ಮತ್ತು ಅನಿಶ್ಚಿತ ವಲಸೆ ವಾತಾವರಣದಿಂದಾಗಿ ಈ ಮಾರ್ಗವು ಅಡೆ-ತಡೆಗಳಿಂದ ತುಂಬಿದೆ. ಹೆಚ್ಚುತ್ತಿರುವ ನಿರ್ಬಂಧಗಳು ಮತ್ತು ಅನಿರೀಕ್ಷಿತ ನಿಯಮಗಳಿಂದಾಗಿ, ಸಾವಿರಾರು ಭಾರತೀಯರಿಗೆ ‘ಅಮೆರಿಕನ್ ಆಗುವ ಕನಸು’ ತಲುಪುವುದು ಹೆಚ್ಚು ಕಷ್ಟಕರವಾಗಿದೆ. ಕೆಲವು ಸಂಸ್ಥೆಗಳು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದರೂ, ‘ಎಚ್-1ಬಿ’ ವೀಸಾವನ್ನು ನಿಲ್ಲಿಸಬಾರದು. ಕೌಶಲ್ಯಪೂರ್ಣ ಭಾರತೀಯ ಕಾರ್ಮಿಕರು ಅಮೆರಿಕದ ನವೋದ್ಯಮ ಕ್ಷೇತ್ರದಲ್ಲಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

ಸುಬ್ರಹ್ಮಣ್ಯಂ ಚಂದ್ರಶೇಖರ ಅವರ ಪರಿಚಯ

ಸುಬ್ರಹ್ಮಣ್ಯಂ ಚಂದ್ರಶೇಖರ (ಜನನ: 1910 – ಮರಣ: 1990) ಅವರು ಹಿಂದೂಸ್ತಾನಿ ಮೂಲದ ಅಮೆರಿಕನ್ ವಿಜ್ಞಾನಿಯಾಗಿದ್ದರು. ಆಧುನಿಕ ಖಗೋಳಶಾಸ್ತ್ರದಲ್ಲಿ ಅವರ ಕೆಲಸವು ಮೂಲಭೂತ ಮತ್ತು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗುತ್ತದೆ. ನಕ್ಷತ್ರಗಳು ಹೇಗೆ ಹುಟ್ಟುತ್ತವೆ ಎಂಬುದನ್ನು ಚಂದ್ರಶೇಖರ ಅವರು ಕಂಡುಹಿಡಿದರು. 1983 ರಲ್ಲಿ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಲಭಿಸಿತ್ತು.