`ಆಪರೇಷನ್ ಸಿಂದೂರ್` ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಸೇನೆಯ 118 ನೆಲೆಗಳನ್ನು ಧ್ವಂಸಗೊಳಿಸಿತ್ತು

ಪಾಕಿಸ್ತಾನವು ಗಡಿಯಲ್ಲಿನ 72 ಭಯೋತ್ಪಾದಕ ನೆಲೆಗಳನ್ನು ಒಳಭಾಗಕ್ಕೆ ಸ್ಥಳಾಂತರಿಸಿತು.

ಜಮ್ಮು (ಜಮ್ಮು-ಕಾಶ್ಮೀರ) – ‘ಆಪರೇಷನ್ ಸಿಂದೂರ್’  ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಅಂತರರಾಷ್ಟ್ರೀಯ ಗಡಿಯ ಬಳಿಯಿದ್ದ ಪಾಕಿಸ್ತಾನಿ ಸೇನೆಯ 118 ನೆಲೆಗಳನ್ನು  ಧ್ವಂಸಗೊಳಿಸಿತ್ತು. ಇದರಿಂದಾಗಿ ಪಾಕಿಸ್ತಾನ ಸೇನೆಯ ಕಣ್ಗಾವಲು ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆ ಕುಸಿದಿದೆ. ಈ ಆಘಾತದಿಂದಾಗಿ ಪಾಕಿಸ್ತಾನಕ್ಕೆ 72 ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳನ್ನು  ಒಳಭಾಗಕ್ಕೆ ಸ್ಥಳಾಂತರಿಸಬೇಕಾಯಿತು. ಭಾರತದ ಈ ಕ್ರಮದಿಂದಾಗಿ ಪಾಕಿಸ್ತಾನಕ್ಕೆ ಕಾರ್ಯತಂತ್ರದಿಂದ  ಹಿಂದೆ ಸರಿಯಬೇಕಾಯಿತು ಎನ್ನುವುದು ಸ್ಪಷ್ಟವಾಗುತ್ತದೆಯೆನ್ನುವ ಮಾಹಿತಿಯನ್ನು ಗಡಿ ಭದ್ರತಾ ಪಡೆಯ  ಜಮ್ಮು ಪ್ರಾಂತ್ಯದ ಮಹಾನಿರೀಕ್ಷಕ ಶಶಾಂಕ ಆನಂದ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ಇನ್ನೂ ಸಕ್ರಿಯವಾಗಿರುವ ಭಯೋತ್ಪಾದಕ ನೆಲೆಗಳು

ಮಹಾನಿರೀಕ್ಷಕ ಶಶಾಂಕ ಆನಂದ ಅವರ ಪ್ರಕಾರ, ಭಾರತೀಯ ಸೇನೆಯು ಪಾಕಿಸ್ತಾನದ ಸಿಯಾಲಕೋಟ್ ಪ್ರದೇಶದ 3 ಪ್ರಮುಖ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ್ದರೂ, ಸಿಯಾಲಕೋಟ್ ಮತ್ತು ಜಫರವಾಲ್ ಪ್ರದೇಶಗಳಲ್ಲಿ ಈಗಲೂ 40 ರಿಂದ 50 ಕಿಲೋಮೀಟರ ಒಳಗೆ ಇನ್ನೂ 12 ನೆಲೆಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ, 60 ಕ್ಕೂ ಹೆಚ್ಚು ನೆಲೆಗಳು ಇನ್ನೂ ಒಳಗಿನ ಪ್ರದೇಶದಲ್ಲಿವೆಯೆನ್ನುವ ಮಾಹಿತಿ ಲಭ್ಯವಾಗಿದೆ. ಈ ಸ್ಥಳಗಳಲ್ಲಿ ಚಲನವಲನಗಳು ಬದಲಾವಣೆಯ ಸ್ವರೂಪದ್ದಾಗಿರುತ್ತವೆ ಮತ್ತು ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಲು  ಸಿದ್ಧರಾದಾಗ ಆ ನೆಲೆಗಳನ್ನು ಸಕ್ರಿಯಗೊಳಿಸಲಾಗುತ್ತದೆ.

ಭಾರತವು ‘ಆಪರೇಷನ್ ಸಿಂದೂರ 2’ ಗಾಗಿ ಸಿದ್ಧ

ಮಹಾನಿರೀಕ್ಷಕ ಶಶಾಂಕ ಆನಂದ ಅವರು ಮಾತನಾಡಿ, ಭಾರತೀಯ ಸೇನೆ ಮತ್ತು ಗಡಿ ಭದ್ರತಾ ದಳವು ನಿರಂತರವಾಗಿ ಗುಪ್ತ ಮಾಹಿತಿಯ ಆಧಾರದ ಮೇಲೆ ಕಣ್ಗಾವಲು ಇರಿಸಲಾಗಿದೆ ಹಾಗೂ ಪಾಕಿಸ್ತಾನದ ಪ್ರತಿಯೊಂದು ಚಲನವಲನದ ಮೇಲೆ ಸೂಕ್ಷ್ಮ ಗಮನವಿದೆ. ಪಾಕಿಸ್ತಾನ ಅಥವಾ ಅವರ ಬೆಂಬಲಿತ ಭಯೋತ್ಪಾದಕರು ಮತ್ತೆ ಯಾವುದೇ ಚಲನವಲನಗಳನ್ನು ಮಾಡಿದರೆ, ಭಾರತವು ‘ಆಪರೇಷನ ಸಿಂದೂರ 2’ ಅನ್ನು ಪ್ರಾರಂಭಿಸಲು ವಿಳಂಬ ಮಾಡುವುದಿಲ್ಲ. ಸೈನಿಕರು ಮತ್ತು ಅಧಿಕಾರಿಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದಾರೆ ಮತ್ತು ಹಿಂದಿಗಿಂತಲೂ ಹೆಚ್ಚು ಕಠಿಣ ಮತ್ತು ನಿಖರವಾದ ಉತ್ತರವನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನಕ್ಕೆ ದೊಡ್ಡ ಹಾನಿ ಮಾಡುವ ಸಾಮರ್ಥ್ಯ ಸೇನೆಗಿದೆ

ಮಹಾನಿರೀಕ್ಷಕ ಆನಂದ ಅವರು ಮಾತನಾಡಿ, 1965, 1971 ಮತ್ತು 1999 ರ ಕಾರ್ಗಿಲ್ ಯುದ್ಧ ಅಥವಾ ‘ಆಪರೇಷನ್ ಸಿಂದೂರ್ ’ನ ಅನುಭವವನ್ನು ಗಮನಿಸಿದರೆ, ಗಡಿ ಭದ್ರತಾ ದಳವು ಎಲ್ಲಾ ರೀತಿಯ ಸಂಘರ್ಷಗಳ ತರಬೇತಿ ಹೊಂದಿದೆ. ಸಾಂಪ್ರದಾಯಿಕವಾಗಲಿ ಅಥವಾ ಮಿಶ್ರ ಸ್ವರೂಪದ ಯುದ್ಧವಾಗಲಿ, ನಾವು ಸಿದ್ಧರಿದ್ದೇವೆ. ಅಗತ್ಯ ಬಿದ್ದರೆ, ಈ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನಕ್ಕೆ ಮಾಡಿದ ಹಾನಿಗಿಂತ ಹೆಚ್ಚಿನ ಆಘಾತ ನೀಡುವ ಸಾಮರ್ಥ್ಯ ನಮ್ಮಲ್ಲಿ ಇದೆ. ಸರಕಾರವು ಯಾವ ನೀತಿಯನ್ನು  ನಿರ್ಧರಿಸುತ್ತದೆಯೋ, ಅದಕ್ಕೆ ಅನುಗುಣವಾಗಿ ನಮ್ಮ ಪಾತ್ರವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುವುದು ಎಂದು ತಿಳಿಸಿದರು