ಶ್ವೇತಭವನದ ಹೊರಗೆ ಅಫ್ಘಾನ್ ಪ್ರಜೆಯಿಂದ ಗುಂಡಿನ ದಾಳಿ: ಇಬ್ಬರು  ಭದ್ರತಾ ಸಿಬ್ಬಂದಿಗೆ ಗಾಯ America Firing Afghan

ವಾಷಿಂಗ್ಟನ (ಅಮೆರಿಕ) – ಅಮೆರಿಕದ ಅಧ್ಯಕ್ಷರ ನಿವಾಸಸ್ಥಾನವಾಗಿರುವ ಶ್ವೇತಭವನದ ಹೊರಗೆ ನ್ಯಾಷನಲ್ ಗಾರ್ಡ್ಸ್ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ನವೆಂಬರ್ 26 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 2.15 ಕ್ಕೆ ಸಂಭವಿಸಿದೆ. ಗುಂಡಿನ ದಾಳಿ ನಡೆಸಿದ ರೆಹಮಾನ್ಉಲ್ಲಾ ಲಕನವಾಲ್ ನನ್ನು ಬಂಧಿಸಲಾಗಿದೆ. ಈ 29 ವರ್ಷದ ಆರೋಪಿ ಅಫ್ಘಾನಿಸ್ತಾನದ ಪ್ರಜೆಯಾಗಿದ್ದು, 2021 ರಲ್ಲಿ ‘ಆಪರೇಷನ್ ಆ್ಯಲೀಸ್ ವೆಲ್ಕಮ್’ ಅಡಿಯಲ್ಲಿ ಅಮೆರಿಕಕ್ಕೆ ಬಂದಿದ್ದನು. ರೆಹಮಾನ್ಉಲ್ಲಾ ಲಕನವಾಲ್ ನ ವೀಸಾ (ಒಂದು ದೇಶವನ್ನು ಪ್ರವೇಶಿಸಲು, ತೊರೆಯಲು ಅಥವಾ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮುದ್ರಾಂಕಿತ ಪತ್ರ) ಅವಧಿ ಮುಗಿದಿತ್ತು ಮತ್ತು ಅವನು ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿದ್ದನು.

1. ಗುಂಡಿನ ದಾಳಿ ನಡೆಸುವ ಮೊದಲು ಲಕನವಾಲ್ ಫಾರಾಗುಟ ವೆಸ್ಟ್ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವನು ಮೂಲೆಯಲ್ಲಿ ಹೋಗಿ ಮೊದಲು ಮಹಿಳಾ ನ್ಯಾಷನಲ್ ಗಾರ್ಡ್ ಸಿಬ್ಬಂದಿಯ ಎದೆಗೆ ಮತ್ತು ನಂತರ ತಲೆಗೆ ಗುಂಡು ಹಾರಿಸಿದನು. ಅದರ ನಂತರ ಅವನು ಎರಡನೇ ಗಾರ್ಡ್ ಮೇಲೆ ಗುಂಡು ಹಾರಿಸಿದನು. ಆಗ ಸಮೀಪದಲ್ಲಿದ್ದ ಮೂರನೇ ಗಾರ್ಡ್ ಲಕನವಾಲ್ನನ್ನು ಕೆಳಗೆ ಬೀಳಿಸಿದನು. ಅಷ್ಟರೊಳಗೆ ಅವನು ಅನೇಕ ಸುತ್ತು ಗುಂಡು ಹಾರಿಸಿದ್ದನು.

2. ಅಧಿಕಾರಿಗಳ ಪ್ರಕಾರ, ಲಕನವಾಲ್ ಈ ಕೃತ್ಯವನ್ನು ಏಕಾಂಗಿಯಾಗಿ ಮಾಡಿದ್ದು, ಈ ದಾಳಿಯ ಹಿಂದಿನ ಅವನ ಉದ್ದೇಶ ಇದುವರೆಗೂ ಬಹಿರಂಗಗೊಂಡಿಲ್ಲ.

ಅಫ್ಘಾನ್ ಪ್ರಜೆಗಳ ಪ್ರವೇಶ ನಿಷೇಧ

ನ್ಯಾಷನಲ್ ಗಾರ್ಡ್ ಸೈನಿಕರ ಮೇಲಿನ ಈ ದಾಳಿಯ ನಂತರ, ಅಮೆರಿಕವು ದೇಶಕ್ಕೆ ಆಗಮಿಸುವ ಅಫ್ಘಾನ್ ಪ್ರಜೆಗಳ ಪ್ರವೇಶವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.

ಪ್ರತಿಯೊಬ್ಬ ಅಫ್ಘಾನ್ ಪ್ರಜೆಯ ವಿಚಾರಣೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತನಾಡಿ, ಹಿಂದಿನ ಆಡಳಿತವು ವಿಶ್ವದಾದ್ಯಂತದ 2 ಕೋಟಿ ಗುರುತು ಸಿಗದ ವ್ಯಕ್ತಿಗಳನ್ನು ಪರಿಶೀಲಿಸದೆ ದೇಶಕ್ಕೆ ಪ್ರವೇಶ ನೀಡಿದೆ ಎಂದು ತಿಳಿಸಿದರು. ಅಫ್ಘಾನಿಸ್ತಾನದಿಂದ ಬರುವ ಪ್ರತಿಯೊಬ್ಬರನ್ನು ಈಗ ಮರು-ಪರಿಶೀಲನೆ ಮಾಡಲಾಗುವುದು ಮತ್ತು ಅಮೆರಿಕಕ್ಕೆ ಪ್ರಯೋಜನಕಾರಿಯಲ್ಲದ ಅಥವಾ ಅಮೆರಿಕವನ್ನು ಪ್ರೀತಿಸದ ಎಲ್ಲಾ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಮೆರಿಕ ಎಂದಿಗೂ ಭಯೋತ್ಪಾದನೆಗೆ ತಲೆಬಾಗುವುದಿಲ್ಲ ಎಂದು ಹೇಳಿದರು.