ಬ್ರಿಟನ್‌ನ ವಸ್ತುಸಂಗ್ರಹಾಲಯಗಳಿಂದ ಹಿಡಿದು ಆಹಾರದವರೆಗೆ ಎಲ್ಲವೂ ಭಾರತದ್ದು! – Britain’s Museums to its Food Belongs to India

ಭಾರತೀಯ ಮೂಲದ ಬ್ರಿಟಿಷ್ ಚಿಂತಕ ಸುಹೇಲ್ ಸೇಠ್ ಅವರ ಹೇಳಿಕೆ

ಲಂಡನ್ (ಬ್ರಿಟನ್) – ಭಾರತವು ಬ್ರಿಟನ್‌ಗೆ ಕೇವಲ ಇತಿಹಾಸವನ್ನು ಮಾತ್ರವಲ್ಲದೆ, ಆಧುನಿಕ ನಾಯಕತ್ವವನ್ನೂ ನೀಡಿದೆ. ನಾವು ನಿಮಗೆ ರಿಷಿ ಸುನಕ್ ಅವರ ರೂಪದಲ್ಲಿ ಅತ್ಯುತ್ತಮ ಪ್ರಧಾನಿಯೊಬ್ಬರನ್ನು ನೀಡಿದ್ದೇವೆ ಮತ್ತು ಮುಂದೆಯೂ ನೀಡುತ್ತಾ ಇರುತ್ತೇವೆ ಎಂದು ಭಾರತೀಯ ಮೂಲದ ಬ್ರಿಟಿಷ್ ಚಿಂತಕ ಸುಹೇಲ್ ಸೇಠ್ ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಬ್ರಿಟಿಷ್ ಸಂಸದರು ಸಹ ಹಾಜರಿದ್ದರು.

ಸುಹೇಲ್ ಸೇಠ್ ಅವರು ನೀಡಿದ ಹೇಳಿಕೆಗಳು

೧. ಸ್ವತಂತ್ರ ಭಾರತದಿಂದ ಇಂದಿನ ಆತ್ಮವಿಶ್ವಾಸವುಳ್ಳ ಮತ್ತು ಜಾಗತಿಕ ಮಟ್ಟದಲ್ಲಿ ಸಕ್ರಿಯವಾಗಿರುವ ಭಾರತದವರೆಗಿನ ಪಯಣವು ಅತ್ಯಂತ ಮಹತ್ವದ್ದಾಗಿದೆ ಮತ್ತು ಪ್ರೇರಣಾದಾಯಕವಾಗಿದೆ.

೨. ಬ್ರಿಟನ್‌ನ ಅನೇಕ ವಸ್ತುಸಂಗ್ರಹಾಲಯಗಳು, ಶಿಕ್ಷಣ ವ್ಯವಸ್ಥೆ ಮತ್ತು ಅಷ್ಟೇ ಏಕೆ, ಆಹಾರ ಸಂಸ್ಕೃತಿಯು ಸಹ ಭಾರತದ ಪ್ರಭಾವದಿಂದ ದೂರ ಉಳಿದಿಲ್ಲ. ಬ್ರಿಟಿಷ್ ಜೀವನಶೈಲಿಯ ಮೇಲೆ ಭಾರತದ ಸ್ಪಷ್ಟ ಮುದ್ರೆ ಇದೆ ಮತ್ತು ಅದು ದಿನನಿತ್ಯವೂ ಗೋಚರಿಸುತ್ತದೆ. ಬ್ರಿಟನ್‌ನ ರಾಷ್ಟ್ರೀಯ ಆಹಾರವು ಭಾರತೀಯ ರುಚಿಯನ್ನು ಆಧರಿಸಿದೆ. ಟಾಟಾಯಂತಹ ಭಾರತೀಯ ಉದ್ದಿಮೆ ಸಮೂಹಗಳು ಬ್ರಿಟನ್‌ನಲ್ಲಿ ದೊಡ್ಡ ಉದ್ಯೋಗ ಸೃಷ್ಟಿಕರ್ತರಾಗಿದ್ದಾರೆ.

೩. ಭಾರತವು ಈಗ ೧೯೪೭ ರ ಭಾರತವಲ್ಲ, ೧೯೯೧ ರ ಭಾರತವೂ ಅಲ್ಲ, ಬದಲಾಗಿ ೨೦೩೦ ರತ್ತ ಸಾಗುತ್ತಿರುವ ಸಶಕ್ತ, ಆತ್ಮವಿಶ್ವಾಸಿ ಮತ್ತು ಸಂಸ್ಕೃತಿ ಸಂಪನ್ನ ರಾಷ್ಟ್ರವಾಗಿದೆ.

೪. ಭಾರತೀಯರು ಜಗತ್ತಿನಾದ್ಯಂತ ತಮ್ಮ ಅಸ್ಮಿತೆಯನ್ನು ಸಾಬೀತುಪಡಿಸಿದ್ದಾರೆ, ಅವರ ಬಳಿ ಭಾರತೀಯ ಪಾಸ್‌ಪೋರ್ಟ್ ಇರಲಿ ಅಥವಾ ಇಲ್ಲದಿರಲಿ.

೫. ಭಾರತ ಕೇವಲ ರಾಷ್ಟ್ರ, ಗಣರಾಜ್ಯ ಅಥವಾ ಪ್ರಜಾಪ್ರಭುತ್ವ ಮಾತ್ರವಲ್ಲ, ಅದೊಂದು ಪ್ರಾಚೀನ ಸಂಸ್ಕೃತಿಯಾಗಿದೆ. ಭಾರತವು ಅನೇಕ ವರ್ಷಗಳಿಂದ ಜಗತ್ತಿಗೆ ಸಂಸ್ಕೃತಿಯನ್ನು ಕಲಿಸಿದೆ. ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಾಡಿನ ವಾರಸುದಾರರು. ಬ್ರಿಟನ್‌ಗಾಗಿ ಯುದ್ಧಭೂಮಿಯಲ್ಲಿ ಹೋರಾಡಿದ ಆ ಅನಾಮಧೇಯ ವೀರರ ವಂಶಸ್ಥರು ಸಹ ನಾವೇ ಆಗಿದ್ದೇವೆ, ಎಂದು ಹೇಳಿದರು.