ಜಗತ್ತಿನ ಪ್ರತಿ 5 ಜನರಲ್ಲಿ 4 ಜನರು ಈಗ ನಗರಗಳಲ್ಲಿ ವಾಸ ! ವಿಶ್ವಸಂಸ್ಥೆಯ ವರದಿ – World Now Live In Cities

  • ತಂತ್ರಜ್ಞಾನ ಮತ್ತು ಉತ್ತಮ ಜೀವನಶೈಲಿಗಾಗಿ ಜನರ ಒಲವು ನಗರಗಳ ಕಡೆಗೆ, ಹಳ್ಳಿಗಳು ಬಿಕೋ ಎನ್ನುತ್ತಿವೆ!

  • ಹೆಚ್ಚುತ್ತಿರುವ ನಗರೀಕರಣದಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ!

ನ್ಯೂಯಾರ್ಕ್ (ಅಮೆರಿಕ) – ವಿಶ್ವಸಂಸ್ಥೆಯು ಜಗತ್ತಿನಲ್ಲಿ ಹೆಚ್ಚುತ್ತಿರುವ ನಗರೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸುವ ‘ಜಾಗತಿಕ ನಗರೀಕರಣ ಪ್ರಾಸ್ಪೆಕ್ಟಸ್ 2025’ ಎಂಬ ವರದಿಯನ್ನು ಪ್ರಕಟಿಸಿದೆ. ಇದರ ಪ್ರಕಾರ, ಜಗತ್ತಿನ ಪ್ರತಿ 5 ಜನರಲ್ಲಿ 4 ಜನರು ಈಗ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದರರ್ಥ ಶೇ. 80 ಕ್ಕಿಂತ ಹೆಚ್ಚು ಜನರು ಈಗ ನಗರಗಳಲ್ಲಿ ವಾಸಿಸುತ್ತಿದ್ದಾರೆ. 8 ವರ್ಷಗಳ ಹಿಂದೆ ಈ ಪ್ರಮಾಣ ಕೇವಲ ಶೇ. 55 ಇತ್ತು. ಒಂದು ಕಾಲದಲ್ಲಿ ಮಾನವ ಸಂಸ್ಕೃತಿಯ ವೈಶಿಷ್ಟ್ಯವಾಗಿದ್ದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳು ಈಗ ಬಿಕೋ ಎನ್ನುತ್ತಿವೆ. ಜನರು ನಗರಗಳ ಕಡೆಗಿನ ಸೆಳೆತವೆಂದರೆ ಕೇವಲ ವಾಸದ ಸ್ಥಳಗಳ ಬದಲಾವಣೆಯಾಗಿದೆ ಎಂದು ಆಗುವುದಿಲ್ಲ, ಬದಲಾಗಿ ಇದು ಸಮಾಜ, ಆರ್ಥಿಕತೆ ಮತ್ತು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ವರದಿಯ ಕೆಲವು ಅಂಕಿ-ಅಂಶಗಳು ಹೀಗಿವೆ!

1. ಜಗತ್ತಿನ ಶೇ. 80 ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ.

2. ಇದರಲ್ಲಿ ಶೇ. 45 ರಷ್ಟು ಜನರು ನಗರಗಳಲ್ಲಿ ಮತ್ತು ಶೇ. 36 ರಷ್ಟು ಜನರು ಅರೆ-ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

3. ಈ ವರದಿಯನ್ನು ಪ್ಯಾಟ್ರಿಕ್ ಗೆರ್ಲ್ಯಾಂಡ್ ಅವರ ನೇತೃತ್ವದಲ್ಲಿ ಅನೇಕ ಸಂಶೋಧಕರ ಸಹಕಾರದೊಂದಿಗೆ ಸಿದ್ಧಪಡಿಸಲಾಗಿದೆ.

4. 2050 ರ ವೇಳೆಗೆ ಜಗತ್ತಿನ ಶೇ. 83ರಷ್ಟು ಜನಸಂಖ್ಯೆಯು ನಗರಗಳಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ.

5. ಪೂರ್ವ ಮತ್ತು ದಕ್ಷಿಣ ಏಷ್ಯಾದಲ್ಲಿ, ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ ಜನರು ಹಳ್ಳಿಗಳನ್ನು ಬಿಟ್ಟು ನಗರಗಳಿಗೆ ಹೋಗುತ್ತಿದ್ದಾರೆ. ಉತ್ತಮ ಶಿಕ್ಷಣ, ಉದ್ಯೋಗಗಳು ಅಥವಾ ಉತ್ತಮ ಸಾಮಾಜಿಕ ಜೀವನವನ್ನು ನಡೆಸಲು ಈ ಬದಲಾವಣೆಗಳು ಕಂಡುಬರುತ್ತಿವೆ.

ಬೆಳೆಯುತ್ತಿರುವ ನಗರಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ!

ನಗರೀಕರಣದ ಪರಿಣಾಮ ಕೇವಲ ಜನಸಂಖ್ಯೆಯ ಮೇಲೆ ಮಾತ್ರವಲ್ಲ, ಜನರ ಆರೋಗ್ಯದ ಮೇಲೂ ಆಗುತ್ತಿದೆ. ‘ಕಿಂಗ್ಸ್ ಕಾಲೇಜ್ ಲಂಡನ್’ನ ತಜ್ಞ ಆಂಡ್ರಿಯಾ ಮೆಶೆಲಿ ಅವರ ಪ್ರಕಾರ, ನಗರಗಳಲ್ಲಿನ ವಾಯು ಮಾಲಿನ್ಯ ಮತ್ತು ಹೆಚ್ಚುತ್ತಿರುವ ತಾಪಮಾನ ಜನರನ್ನು ಅನಾರೋಗ್ಯಕ್ಕೆ ಒಳಪಡಿಸುತ್ತಿದೆ. ಇದರಿಂದ ಹೃದ್ರೋಗ ಮತ್ತು ಅಲ್ಜೈಮರ್ ನಂತಹ ರೋಗಗಳ ಅಪಾಯ ಹೆಚ್ಚುತ್ತಿದೆ. ಇದರ ಜೊತೆಗೆ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ.