ನಿರ್ದೇಶಕ ರಾಜಮೌಳಿ ವಿರುದ್ಧ ಹಿಂದೂ ಸೇನೆಯ ದೂರು ! : FIR Against Filmmaker Rajamouli

  • ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ

  • ಪೊಲೀಸರಿಂದ ಕಠಿಣ ಕ್ರಮಕ್ಕೆ ಆಗ್ರಹ !

ಭಾಗ್ಯನಗರ (ತೆಲಂಗಾಣ) – ‘ಬಾಹುಬಲಿ’ ಮತ್ತು ‘ಆರ್.ಆರ್.ಆರ್.’ ಚಿತ್ರಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ವಿರುದ್ಧ ಹಿಂದೂ ಸೇನೆಯಿಂದ ದೂರು ದಾಖಲಾಗಿದೆ. ನವೆಂಬರ್ 17 ರಂದು ಬಿಡುಗಡೆಯಾಗಲಿರುವ ಅವರ ‘ವಾರಣಾಸಿ’ ಚಿತ್ರದ ಟ್ರೇಲರ್ (ಚಿತ್ರದ ಜಾಹೀರಾತು ವೀಡಿಯೊ) ಬಿಡುಗಡೆ ಸಮಾರಂಭವು ತಾಂತ್ರಿಕ ಅಡಚಣೆಗಳಿಂದಾಗಿ ವಿಳಂಬವಾಗಿತ್ತು. ಇದರ ಬಗ್ಗೆ ಮಾತನಾಡುತ್ತಾ, ಅವರು ಭಗವಾನ್ ಹನುಮಂತನನ್ನು ಹೊಣೆಗಾರರನ್ನಾಗಿ ಮಾಡಿದ್ದರು. ಅವರು, “ನಾನು ದೇವರು ಇತ್ಯಾದಿಗಳನ್ನು ನಂಬುವುದಿಲ್ಲ; ಆದರೆ ಈ ತಾಂತ್ರಿಕ ಸಮಸ್ಯೆಯ ಸಮಯದಲ್ಲಿ, ನನ್ನ ತಂದೆ ಹೇಳಿದ ಕಥೆಯು ನೆನಪಾಯಿತು. ತಂದೆ ಹೇಳುತ್ತಿದ್ದರು, ‘ನಿಮಗೆ ಯಾವಾಗಲಾದರೂ ತೊಂದರೆಯಾದರೆ, ಶ್ರೀ ಹನುಮಂತ ನಿಮಗೆ ಸಹಾಯ ಮಾಡುತ್ತಾನೆ.’ ಈಗ ತೊಂದರೆಯ ಸಮಯದಲ್ಲಿ ದೇವರು ಸಹಾಯ ಮಾಡಿದನೇ? ಎಂದು ಪ್ರಶ್ನಿಸಿ, ತಂದೆ ಹೇಳಿದ ಹೇಳಿಕೆಗೆ ಹಾಸ್ಯದ ಆಧಾರದಲ್ಲಿ ಉಲ್ಲೇಖವನ್ನು ನೀಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿಯ ಹನುಮಂತ ಭಕ್ತಿಯ ಬಗ್ಗೆಯೂ ಉಲ್ಲೇಖಿಸಿದ್ದರು. ಶ್ರೀ ಹನುಮಂತನ ಬಗ್ಗೆ ಅವರ ಈ ಅವಮಾನಕರ ಹೇಳಿಕೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಕೆಲವರು ರಾಜಮೌಳಿ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.

ಹಿಂದೂ ಸೇನೆಯ ವಿಷ್ಣು ಗುಪ್ತಾ ಅವರು ರಾಜಮೌಳಿ ವಿರುದ್ಧ ಸಲ್ಲಿಸಿದ ದೂರಿನಲ್ಲಿ, “ಅವರ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಅವರ ಹೇಳಿಕೆಗಳಿಂದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯಾಗಬಹುದು. ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ, ರಾಜಮೌಳಿ ಅವರ 2011 ರ ಹಳೆಯ ಸಂದೇಶವೊಂದು ಮುನ್ನೆಲೆಗೆ ಬಂದಿದೆ. ಇದರಲ್ಲಿ ಅವರು ‘ಭಗವಾನ್ ರಾಮರನ್ನು ಎಂದಿಗೂ ಇಷ್ಟಪಡುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. (ತಮ್ಮ ಇಷ್ಟ-ಅನಿಷ್ಟಗಳನ್ನು ಇತರರ ಮೇಲೆ ಹೇರಬಾರದು ಮತ್ತು ತಮ್ಮ ಇಷ್ಟ-ಅನಿಷ್ಟಗಳ ಆಧಾರದ ಮೇಲೆ ಇತರರ ನಂಬಿಕೆಗಳನ್ನು ಅವಮಾನಿಸಬಾರದು, ಎಂಬುದನ್ನು ಪ್ರಚಾರದಲ್ಲಿರುವವರು ಗಮನದಲ್ಲಿ ಇಡುವುದು ಸೂಕ್ತ! – ಸಂಪಾದಕರು)