ಪ್ರತಿ ೮ ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿರುವುದು ಗಂಭೀರ ವಿಷಯ! – ಸರ್ವೋಚ್ಚ ನ್ಯಾಯಾಲಯ Supreme Court Child Missing

ಪೊಲೀಸರು ಮತ್ತು ಸರ್ಕಾರಕ್ಕೆ ಇದು ನಾಚಿಕೆಗೇಡಿನ ಸಂಗತಿ!

ನವದೆಹಲಿ – ದೇಶದಲ್ಲಿ ಪ್ರತಿ ೮ ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿದೆ ಎಂಬ ವರದಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಗಂಭೀರ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ವಿಭಾಗೀಯ ಪೀಠವು ಇದನ್ನು ಅತಿ ಗಂಭೀರ ವಿಷಯ ಎಂದು ಹೇಳಿದೆ. ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ದತ್ತು ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು.

ದತ್ತು ಪ್ರಕ್ರಿಯೆ ಕಠಿಣವಾಗಿರುವುದರಿಂದ ಜನರು ಅಕ್ರಮ ಮಾರ್ಗಗಳನ್ನು ಬಳಸುತ್ತಾರೆ ಮತ್ತು ದುಷ್ಪ್ರವೃತ್ತಿಗಳು ಹೆಚ್ಚುತ್ತವೆ ಎಂದು ವಿಭಾಗೀಯ ಪೀಠವು ಈ ಸಂದರ್ಭದಲ್ಲಿ ಟಿಪ್ಪಣಿ ನೀಡಿತು.

ಇದಕ್ಕೂ ಮೊದಲು ಅಕ್ಟೋಬರ್ ೧೪ ರಂದು, ಕಾಣೆಯಾದ ಮಕ್ಕಳ ಪ್ರಕರಣಗಳಿಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ‘ನೋಡಲ್’ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಅವರ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ‘ಮಿಷನ್ ವಾತ್ಸಲ್ಯ ಪೋರ್ಟಲ್’ನಲ್ಲಿ ಪ್ರಕಟಿಸಬೇಕೆಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ನೋಡಲ್ ಅಧಿಕಾರಿಗಳನ್ನು ನೇಮಿಸಲು ೬ ವಾರಗಳ ಕಾಲಾವಕಾಶ ಕೇಳಿದರು; ಆದರೆ ನ್ಯಾಯಾಲಯವು ಈ ಅವಧಿಯನ್ನು ನಿರಾಕರಿಸಿ, ಡಿಸೆಂಬರ್ ೯ ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತು.

‘ ಗುರಿಯಾ’ ಎಂಬ ಸ್ವಯಂಸೇವಾ ಸಂಸ್ಥೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಕಾಣೆಯಾದ ಅಥವಾ ಅಪಹರಿಸಲ್ಪಟ್ಟ ಮಕ್ಕಳ ಇತ್ಯರ್ಥವಾಗದ ಪ್ರಕರಣಗಳ ಕುರಿತು ಕೇಂದ್ರ ಸರಕಾರದ ‘ಖೋಯಾ-ಪಾಯಾ ಪೋರ್ಟಲ್’ನಲ್ಲಿನ ಮಾಹಿತಿಯ ಆಧಾರದ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಈ ಅರ್ಜಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು.