ಫೆಬ್ರುವರಿ 15 ರೊಳಗೆ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ Bangladesh General Elections 2026

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆಬ್ರುವರಿ 15 ರ ಮೊದಲು ಸಂಸತ್ತಿನ ಚುನಾವಣೆಗಳು ನಡೆಯಲಿವೆ ಎಂದು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯುನೂಸ್ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಅಧಿಕಾರ ಪಲ್ಲಟದ ನಂತರ ಇದು ಮೊದಲ ಸಾರ್ವತ್ರಿಕ ಚುನಾವಣೆಯಾಗಿದೆ.

ಚುನಾವಣೆಯ ದಿನ ಬಾಂಗ್ಲಾದೇಶದಲ್ಲಿ ಜನಮತ ಗಣನೆ

ಸಂಸತ್ತಿನ ಚುನಾವಣೆಗಳ ದಿನವೇ ಜನಮತ ಗಣನೆ ಕೂಡ ನಡೆಸಲಾಗುವುದೆಂದು ಯುನೂಸ್ ಘೋಷಿಸಿದರು; ಇದರ ಹಿಂದಿನ ಉದ್ದೇಶ ದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವುದಾಗಿದೆ.

ನವೆಂಬರ್ 17 ರಂದು ಶೇಖ್ ಹಸೀನಾ ವಿರುದ್ಧದ ಮೊಕದ್ದಮೆಯ ತೀರ್ಪು

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ದಾಖಲಿಸಲಾದ ಮಾನವೀಯತೆಯ ವಿರುದ್ಧದ ಅಪರಾಧಗಳ ಮೊಕದ್ದಮೆಯ ತೀರ್ಪನ್ನು ಢಾಕಾದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ನವೆಂಬರ್ 17ರಂದು ಘೋಷಿಸಲಿದೆ. ಸರಕಾರದ ವಕೀಲರು ಹಸೀನಾ ಅವರ ಮೇಲೆ 5 ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಹತ್ಯೆ, ಅಪರಾಧಗಳನ್ನು ತಡೆಯುವಲ್ಲಿ ವಿಫಲತೆ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು. ಹಸೀನಾ ಅವರಿಗೆ ಮರಣದಂಡನೆ ನೀಡುವಂತೆ ವಕೀಲರು ಬೇಡಿಕೆ ಇಟ್ಟಿದ್ದಾರೆ. ಈ ಪ್ರಕರಣದಿಂದಾಗಿ ಉದ್ವಿಗ್ನತೆ ಹೆಚ್ಚಾಗುತ್ತಿರುವುದರಿಂದ ಬಾಂಗ್ಲಾದೇಶದಲ್ಲಿ ಕಟ್ಟೆಚ್ಚರದ ಎಚ್ಚರಿಕೆಯನ್ನು ನೀಡಲಾಗಿದೆ. ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಮತ್ತು ಪ್ರಮುಖ ಕಟ್ಟಡಗಳಲ್ಲಿ ಪೊಲೀಸ್ ಮತ್ತು ಸೈನ್ಯವನ್ನು ನಿಯೋಜಿಸಲಾಗಿದೆ.