32 ವಾಹನಗಳ ಮೂಲಕ ದೇಶದಲ್ಲಿ ಬಾಂಬ್‌ಸ್ಪೋಟ ನಡೆಸಲು ಭಯೋತ್ಪಾದಕರ ಷಡ್ಯಂತ್ರ ! : Delhi Terror Plot

ದೆಹಲಿ ಬಾಂಬ್ ಸ್ಫೋಟದ ತನಿಖೆಯಿಂದ ಬಹಿರಂಗ

ನವದೆಹಲಿ – ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದ ತನಿಖೆಯಿಂದ ಭಯೋತ್ಪಾದಕರು ದೇಶದ ವಿವಿಧೆಡೆ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದಕ್ಕಾಗಿ 32 ನಾಲ್ಕು ಚಕ್ರದ ವಾಹನಗಳನ್ನು ಸ್ಫೋಟಕಗಳೊಂದಿಗೆ ಸಿದ್ಧಪಡಿಸುವ ಸಂಚು ರೂಪಿಸಲಾಗಿತ್ತು. ಸದ್ಯ ಪೊಲೀಸರು 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಸ್ಫೋಟಕಗಳು ಪತ್ತೆಯಾಗಿಲ್ಲವಾದರೂ, ಫರಿದಾಬಾದ್‌ನಲ್ಲಿ ಈ ಹಿಂದೆ ಪತ್ತೆಯಾದ ಸ್ಫೋಟಕಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. 32 ವಾಹನಗಳನ್ನು ಬಳಸಲು ಉದ್ದೇಶಿಸಲಾಗಿತ್ತು ಎಂಬುದು ಈ ಪಿತೂರಿಯಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಭಾಗಿಯಾಗಿರುವುದನ್ನು ಸ್ಪಷ್ಟಪಡಿಸುವುದರಿಂದ, ಪೊಲೀಸರು ವಿವಿಧೆಡೆ ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, 8 ಭಯೋತ್ಪಾದಕರು 4 ವಿವಿಧ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಸಿದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಒಂದು ಆಯ್ದ ನಗರದ ಜವಾಬ್ದಾರಿ ನೀಡಲಾಗಿತ್ತು. ಆರೋಪಿಗಳು ಏಕಕಾಲದಲ್ಲಿ ಅನೇಕ ಬಾಂಬ್‌ಗಳನ್ನು ಸಾಗಿಸಲು ಯೋಜಿಸಿದ್ದರು.

3 ಲಕ್ಷ ರೂ.ಗೆ ಬಾಂಬ್‌ಗಾಗಿ ಗೊಬ್ಬರ ಖರೀದಿ

ಮೂಲಗಳ ಪ್ರಕಾರ, ಈ ಭಯೋತ್ಪಾದಕರು ಸುಮಾರು 20 ಲಕ್ಷ ರೂಪಾಯಿ ನಗದು ಸಂಗ್ರಹಿಸಿದ್ದರು. ಈ ಮೊತ್ತವನ್ನು ಡಾ. ಉಮರ್ ಗೆ ನೀಡಲಾಗಿತ್ತು. ಈ ಹಣದಿಂದ ಗುರುಗ್ರಾಮ, ನೂಹ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಅಂದಾಜು 20 ಕ್ವಿಂಟಾಲ್ NPK (ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಮಿಶ್ರಣ) ಗೊಬ್ಬರವನ್ನು ಖರೀದಿಸಲಾಗಿತ್ತು. NPK ಗೊಬ್ಬರವನ್ನು ಬಳಸಿ ಸ್ಫೋಟಕಗಳನ್ನು ತಯಾರಿಸಬಹುದು.

ಡಾ. ಉಮರ್ ಸ್ಫೋಟದಲ್ಲಿ ಮೃತಪಟ್ಟಿರುವುದು ದೃಢ

ಕೆಂಪು ಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಭಯೋತ್ಪಾದಕ ಡಾ. ಮಹಮ್ಮದ್ ಉಮರ್ ನಬಿ ಮೃತಪಟ್ಟಿರುವುದು ಈಗ ತನಿಖೆಯಿಂದ ಬಹಿರಂಗವಾಗಿದೆ. ಈ ಕಾರಿನಲ್ಲಿ ಉಮರ್‌ನ ಹಲ್ಲುಗಳು, ಮೂಳೆಗಳು, ರಕ್ತಸಿಕ್ತ ಬಟ್ಟೆಗಳು ಮತ್ತು ಅವನ ಕಾಲಿನ ಕೆಲವು ಭಾಗಗಳು ಪತ್ತೆಯಾಗಿವೆ. ಉಮರ್‌ನ ಡಿಎನ್‌ಎ (ಡಿಯೋಕ್ಸಿರೈಬೋ ನ್ಯೂಕ್ಲಿಯಿಕ್ ಆಸಿಡ್, ಅಂದರೆ ವ್ಯಕ್ತಿಯ ಮೂಲ ಗುರುತನ್ನು ನಿರ್ಧರಿಸುವ ದೇಹದ ಅಂಶ) ಅವನ ತಾಯಿಯ ಡಿಎನ್‌ಎಗೆ ಹೊಂದಿಕೆಯಾಗಿದೆ.

ಕಾನಪುರದಿಂದ ಹೃದ್ರೋಗ ತಜ್ಞ ಡಾ. ಆರಿಫ್ ಬಂಧನ

ಡಾ.ಆರಿಫ್

ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ‘ಕಾನಪುರ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ’ಯಲ್ಲಿ ಹೃದ್ರೋಗ ತಜ್ಞರಾಗಿರುವ ಡಾ. ಮಹಮ್ಮದ್ ಆರಿಫ್ (32 ವರ್ಷ) ನನ್ನು ಅವನ ಮನೆಯಿಂದ ಬಂಧಿಸಿದೆ. ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಿವಾಸಿಯಾಗಿದ್ದಾನೆ. ಆರಿಫ್ ಬಹಳ ಸಮಯದಿಂದ ಡಾ. ಶಾಹೀನ್ ಮತ್ತು ಆಕೆಯ ಸಹೋದರ ಪರ್ವೇಜ್ ನ ಸಂಪರ್ಕದಲ್ಲಿದ್ದನು.

ಸ್ಫೋಟದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಕೆಂಪು ಕೋಟೆ ಸ್ಫೋಟದಲ್ಲಿ ಸಾವಿನ ಸಂಖ್ಯೆ 13 ಕ್ಕೆ ತಲುಪಿದೆ. ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಹೆಸರು ಬಿಲಾಲ್ ಎಂದು ಗುರುತಿಸಲಾಗಿದೆ.

ಉಮರ್ ಮತ್ತು ಮುಜಮ್ಮಿಲ್ ಅವರ ದಿನಚರಿ ವಶ: ನವೆಂಬರ್ 8 ಮತ್ತು ನವೆಂಬರ್ 12 ರ ಉಲ್ಲೇಖ

ತನಿಖಾ ಸಂಸ್ಥೆಗಳು ಡಾ. ಉಮರ್ ಮತ್ತು ಡಾ. ಮುಜಮ್ಮಿಲ್ ಅವರ ದಿನಚರಿಗಳನ್ನು (ಡೈರಿಗಳು) ವಶಪಡಿಸಿಕೊಂಡಿವೆ. ಇವುಗಳಲ್ಲಿ ನವೆಂಬರ್ 8 ಮತ್ತು ನವೆಂಬರ್ 12 ದಿನಾಂಕಗಳನ್ನು ಬರೆಯಲಾಗಿದೆ, ಅಲ್ಲದೆ ಇದರಲ್ಲಿ 25 ಜನರ ಹೆಸರುಗಳಿದ್ದವು, ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರ ಮತ್ತು ಫರಿದಾಬಾದ್ ನಿವಾಸಿಗಳಾಗಿದ್ದಾರೆ.

ಸ್ಫೋಟದ ತನಿಖೆಗೆ ಭಾರತೀಯ ಸಂಸ್ಥೆಗಳು ಸ್ವತಃ ಸಮರ್ಥವಾಗಿವೆ ಮತ್ತು ಅವರಿಗೆ ನಮ್ಮ ಸಹಾಯ ಬೇಡ! – ಅಮೆರಿಕ

ಮಾರ್ಕೊ ರೂಬಿಯೊ

ಭಯೋತ್ಪಾದಕ ದಾಳಿಯ ತನಿಖೆಗೆ ನಾವು ಭಾರತಕ್ಕೆ ಸಹಾಯ ಮಾಡಲು ಸಿದ್ಧತೆಯನ್ನು ವ್ಯಕ್ತಪಡಿಸಿದ್ದೇವೆ; ಆದರೆ ನನ್ನ ಪ್ರಕಾರ, ಈ ತನಿಖೆಗೆ ಭಾರತ ಸಂಪೂರ್ಣವಾಗಿ ಸಮರ್ಥವಾಗಿದೆ. ಅಲ್ಲಿನ ಸಂಸ್ಥೆಗಳಿಗೆ ನಮ್ಮ ಸಹಾಯದ ಅಗತ್ಯವಿಲ್ಲ ಮತ್ತು ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶ್ಲಾಘಿಸಿದ್ದಾರೆ.

ಸಂಪಾದಕೀಯ ನಿಲುವು

ಭದ್ರತಾ ಏಜೆನ್ಸಿಗಳ ಜಾಗರೂಕತೆಯಿಂದ ಈ ರಕ್ತಪಾತವನ್ನು ಸ್ವಲ್ಪ ಮಟ್ಟಿಗೆ ತಡೆಯಲಾಗಿದೆಯಾದರೂ, ಭಾರತವು ಅನೇಕ ವರ್ಷಗಳಿಂದ ಜಿಹಾದಿ ಭಯೋತ್ಪಾದನೆಯ ಕರಿನೆರಳಿನಲ್ಲಿ ಬದುಕುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಈಗ ಜಿಹಾದಿ ಮನಸ್ಥಿತಿಯ ಮೇಲೆ ಆಕ್ರಮಣ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಚೀನಾದ ಆದರ್ಶವನ್ನು ಅನುಸರಿಸಿ ಕಾರ್ಯನಿರ್ವಹಿಸುವುದು ಅನಿವಾರ್ಯ!