ಕೃಷಿ ಇಲಾಖೆಯ ಲಾಂಛನದಿಂದ ‘ಜರ್ಸಿ ಹಸುವಿನ’ ಚಿತ್ರ ತೆಗೆದು ‘ಭಾರತೀಯ ಹಸುವಿನ’ ಚಿತ್ರ ಸೇರ್ಪಡೆ. Maharashtra Agriculture Department Emblem

‘ಸನಾತನ ಪ್ರಭಾತ’ ದಿನಪತ್ರಿಕೆಯ ವರದಿಯ ಪರಿಣಾಮ!

ಮುಂಬಯಿ, ನವೆಂಬರ್ 11 (ಸುದ್ದಿ) –  ‘ಸನಾತನ ಪ್ರಭಾತ’ ದಿನಪತ್ರಿಕೆ ನವೆಂಬರ್ 8 ರಂದು ನೀಡಿದ ವರದಿಯ ನಂತರ, ಮಹಾರಾಷ್ಟ್ರ ಸರಕಾರದ ಕೃಷಿ ಇಲಾಖೆಯ ಲಾಂಛನದಲ್ಲಿದ್ದ ‘ಜರ್ಸಿ’ ಹಸುವಿನ ಚಿತ್ರವನ್ನು ತೆಗೆದುಹಾಕಿದ್ದು, ಭಾರತೀಯ ತಳಿಯ ಹಸುವಿನ ಚಿತ್ರವನ್ನು ಸೇರಿಸಿದೆ. ನವೆಂಬರ್ 11 ರಂದು ಸಹ್ಯಾದ್ರಿ ಅತಿಥಿಗೃಹದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಈ ಹೊಸ ಲಾಂಛನವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಅಜಿತ ಪವಾರ, ಕೃಷಿ ಸಚಿವ ದತ್ತಾತ್ರೇಯ ಭರಣೆ ಉಪಸ್ಥಿತರಿದ್ದರು.

ನವೆಂಬರ್ 7 ರಂದು ಕೃಷಿ ಇಲಾಖೆಯು ಸರಕಾರದ ನಿರ್ಣಯದ ಮೂಲಕ ಲಾಂಛನ ಮತ್ತು ಧ್ಯೇಯ ವಾಕ್ಯವನ್ನು ಪ್ರಕಟಿಸಿತ್ತು. ಆದರೆ, ಈ ಲಾಂಛನದಲ್ಲಿ ‘ಭಾರತೀಯ ಹಸು’ವಿನ ಬದಲು ‘ಜರ್ಸಿ ಹಸು’ವಿನ ಚಿತ್ರವನ್ನು ಬಳಸಲಾಗಿತ್ತು. ಈ ಕುರಿತು ದೈನಿಕ ‘ಸನಾತನ ಪ್ರಭಾತ’ವು ನವೆಂಬರ್ 8 ರಂದು ವರದಿಯನ್ನು ಪ್ರಕಟಿಸಿತು. ಇದರೊಂದಿಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಈ ಮಾಹಿತಿಯ ವರದಿಯೊಂದಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಮತ್ತು ಕೃಷಿ ಸಚಿವ ದತ್ತಾತ್ರೇಯ ಭರಣೆ ಅವರಿಗೆ ‘ಎಕ್ಸ್’  ಖಾತೆಯಲ್ಲಿ ಕಳುಹಿಸಿದ್ದರು. ಇದರ ನಂತರ ಕೃಷಿ ಇಲಾಖೆಯು ತನ್ನ ಲಾಂಛನದಲ್ಲಿ ಬದಲಾವಣೆ ಮಾಡಿದೆ. ನವೆಂಬರ್ 11 ರಂದು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಅವರಿಂದ ಅನಾವರಣಗೊಂಡ ಲಾಂಛನದಲ್ಲಿ ಭಾರತೀಯ ದೇಸಿ ಹಸುವಿನ ಚಿತ್ರವನ್ನು ಬಳಸಲಾಗಿದೆ.

‘ಒಂದೆಡೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಸಿ ಹಸುಗಳ ಸಂರಕ್ಷಣೆಗೆ ಕರೆ ನೀಡಿದ್ದಾರೆ. ಮಹಾರಾಷ್ಟ್ರ ರಾಜ್ಯವೂ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ದೇಸಿ ಹಸುವಿಗೆ ‘ರಾಜ್ಯಮಾತೆಯ ಸ್ಥಾನ’ವನ್ನು ನೀಡಿದೆ. ಮಹಾರಾಷ್ಟ್ರ ಸರಕಾರವು ದೇಸಿ ಹಸುಗಳ ಸಂರಕ್ಷಣೆಗಾಗಿ ಗೋಶಾಲೆಗಳಲ್ಲಿ ಪ್ರತಿ ಹಸುವಿಗೆ 50 ರೂಪಾಯಿಗಳ ಅನುದಾನವನ್ನು ಘೋಷಿಸಿದೆ. ಹೀಗಿದ್ದರೂ, ಕೃಷಿ ಇಲಾಖೆಯ ಲಾಂಛನದಲ್ಲಿ ಜರ್ಸಿ ಹಸುವಿನ ಚಿತ್ರವನ್ನು ನೀಡಲಾಗಿತ್ತು. ಕೃಷಿ ಇಲಾಖೆಯ ಈ ನಿಲುವು ರಾಜ್ಯ ಮತ್ತು ಕೇಂದ್ರ ಸರಕಾರದ ಕೃಷಿ ನೀತಿಗೆ ವಿರುದ್ಧವಾಗಿದೆ. ಆದ್ದರಿಂದ ಕೃಷಿ ಇಲಾಖೆಯು ತನ್ನ ಲಾಂಛನದಲ್ಲಿ ಸುಧಾರಣೆ ಮಾಡಿ ಭಾರತೀಯ ದೇಸಿ ಹಸುವಿಗೆ ಉತ್ತೇಜನ ನೀಡಬೇಕೆಂದು ‘ಸನಾತನ ಪ್ರಭಾತ’ ವರದಿ ಪ್ರಸಾರ ಮಾಡಿತ್ತು.

ಕೃಷಿ ಇಲಾಖೆಯ ಹೊಸ ಲಾಂಛನ ಮತ್ತು ಧ್ಯೇಯ ವಾಕ್ಯ:

ಕೃಷಿಯ ಅಭಿವೃದ್ಧಿಗಾಗಿ ಮತ್ತು ಕಾಲಕ್ಕೆ ಅನುಗುಣವಾಗಿ ಮಹಾರಾಷ್ಟ್ರ ಕೃಷಿ ಇಲಾಖೆಯು ತನ್ನದೇ ಆದ ಹೊಸ ಲಾಂಛನ ಮತ್ತು ಧ್ಯೇಯ ವಾಕ್ಯವನ್ನು ಪ್ರಕಟಿಸಿದೆ. ‘ಕೃಷಿ ಕಲ್ಯಾಣ ಕರ್ತವ್ಯಮ್’ ಎಂಬುದು ಮಹಾರಾಷ್ಟ್ರ ಕೃಷಿ ಇಲಾಖೆಯ ಹೊಸ ಧ್ಯೇಯ ವಾಕ್ಯವಾಗಿದೆ. ಕೈಯಲ್ಲಿ ಹಿಡಿದಿರುವ ಸಸಿ, ಟ್ರ್ಯಾಕ್ಟರ್, ಭಾರತೀಯ ಹಸುವಿನ ಚಿತ್ರ ಮತ್ತು ತಂತ್ರಜ್ಞಾನದ ಚಿಹ್ನೆಯನ್ನು ಈ ಹೊಸ ಲಾಂಛನದಲ್ಲಿ ಚಿತ್ರಿಸಲಾಗಿದೆ.