ದೆಹಲಿಯಲ್ಲಿ ಶೂನ್ಯ, ಮುಂಬಯಿನಲ್ಲಿ ಕೇವಲ ೮ ಆಶ್ರಯತಾಣಗಳು!

ಬೀದಿ ನಾಯಿಗಳನ್ನು ಆಶ್ರಯತಾಣಗಳಲ್ಲಿ ಇರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಸ್ತುತ ಸ್ಥಿತಿ!

ನವದೆಹಲಿ – ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನಾಯಿಗಳ ಸಂತಾನಶಕ್ತಿ ಹರಣ (ನಸಬಂದಿ) ಮತ್ತು ಲಸಿಕೆ ನೀಡಿ, ಅವುಗಳನ್ನು ಆಶ್ರಯತಾಣಗಳಲ್ಲಿ ಇರಿಸಲು ಆದೇಶ ನೀಡಿದ್ದರೂ, ಮುಂಬಯಿನಲ್ಲಿ ಕೇವಲ ೮ ಆಶ್ರಯತಾಣಗಳಿವೆ ಮತ್ತು ದೆಹಲಿಯಲ್ಲಿ ಒಂದು ಆಶ್ರಯತಾಣವೂ ಇಲ್ಲವೆಂಬ ವಾಸ್ತವ ವಿಷಯ ಇದೀಗ ಹೊರಬಿದ್ದಿದೆ.

ಸಂತಾನಶಕ್ತಿ ಹರಣ ಅತಿ ಅಗತ್ಯ

ಮುಂಬಯಿ ಸಾರ್ವಜನಿಕ ಸ್ಥಳಗಳಿಂದ ಕೇವಲ ಶೇಕಡಾ ೩೦% ರಿಂದ ೪೦% ರಷ್ಟು ಬೀದಿ ನಾಯಿಗಳನ್ನು ತೆಗೆದುಹಾಕಿದರೂ, ಸುಮಾರು ೪೦,೦೦೦ ನಾಯಿಗಳಿಗೆ ಆಶ್ರಯತಾಣಗಳ ಅಗತ್ಯವಿರುತ್ತದೆ. ಒಂದು ಜೋಡಿ ನಾಯಿಗಳು ಒಂದು ವರ್ಷದಲ್ಲಿ ಸುಮಾರು ೨೦ ಮರಿಗಳಿಗೆ ಜನ್ಮ ನೀಡಬಹುದು. ಆದ್ದರಿಂದ, ಅವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಸಂತಾನಶಕ್ತಿ ಹರಣ (ನಸಬಂದಿ) ಬಹಳ ಮುಖ್ಯವಾಗಿದೆ. ಮುಂಬಯಿ ಮಹಾನಗರ ಪಾಲಿಕೆ ೧೯೮೪ ರಿಂದ ಈ ಕೆಲಸವನ್ನು ಮಾಡುತ್ತಿದೆ.

ದೊಡ್ಡ ರಾಜ್ಯಗಳ ನಿರ್ಲಕ್ಷ್ಯ

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ನಂತರವೂ, ಅನೇಕ ದೊಡ್ಡ ರಾಜ್ಯಗಳು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿವೆ. ರಾಜಧಾನಿ ದೆಹಲಿಯಲ್ಲಿ ೮ ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿದ್ದರೂ, ಒಂದೂ ಆಶ್ರಯತಾಣವಿಲ್ಲ. ಹರಿಯಾಣದಲ್ಲಿ ೨ ಲಕ್ಷ ೭೫ ಸಾವಿರ ನಾಯಿಗಳಿಗೆ ೯೦ ಆಶ್ರಯತಾಣಗಳಿವೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಒಂದೂ ಆಶ್ರಯತಾಣವಿಲ್ಲ. ಮಧ್ಯಪ್ರದೇಶದ ಅಧಿಕೃತ ಅಂಕಿ-ಅಂಶಗಳು ಲಭ್ಯವಿಲ್ಲ; ಆದರೆ ಕೇವಲ ಭೋಪಾಲ್ ನಗರದಲ್ಲಿಯೇ ಸುಮಾರು ಒಂದೂವರೆ ಲಕ್ಷ ಬೀದಿ ನಾಯಿಗಳು ಇರಬಹುದೆಂದು ಅಂದಾಜಿಸಲಾಗಿದೆ.

ನಾಯಿ ಕಚ್ಚುವ ಘಟನೆಗಳು

ಕಳೆದ ಒಂದೂವರೆ ವರ್ಷದಲ್ಲಿ ಉತ್ತರಾಖಂಡದಲ್ಲಿ ನಾಯಿ ಕಚ್ಚಿದ ೨ ಲಕ್ಷ ೧೪ ಸಾವಿರ ಘಟನೆಗಳು ವರದಿಯಾಗಿವೆ. ಹಿಮಾಚಲ ಪ್ರದೇಶದಲ್ಲಿ ಸುಮಾರು ೫೬ ಸಾವಿರ ಬೀದಿ ನಾಯಿಗಳಿವೆ; ಆದರೆ ಅವುಗಳ ಆಶ್ರಯಕ್ಕೆ ಯಾವುದೇ ವ್ಯವಸ್ಥೆಯಿಲ್ಲ. ಉತ್ತರಾಖಂಡದಲ್ಲಿಯೂ ಯಾವುದೇ ಜಿಲ್ಲೆಯಲ್ಲಿ ಬೀದಿ ನಾಯಿಗಳಿಗಾಗಿ ಆಶ್ರಯತಾಣವಿಲ್ಲ; ಆದರೆ ಡೆಹ್ರಾಡೂನ್, ಹರಿದ್ವಾರ ಮತ್ತು ಹಲ್ದ್ವಾನಿಯಲ್ಲಿ ಪ್ರಾಣಿ ಜನನ ನಿಯಂತ್ರಣ ಕೇಂದ್ರಗಳಿವೆ, ಅಲ್ಲಿ ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಮಾಡಲಾಗುತ್ತದೆ.

ಆಶ್ರಯತಾಣಗಳ ನಿಯಮಾವಳಿ ಮತ್ತು ಸಮಸ್ಯೆಗಳು

ಒಂದು ನಾಯಿಯ ಸರಾಸರಿ ಜೀವಿತಾವಧಿ ೧೨ ರಿಂದ ೧೫ ವರ್ಷಗಳಾಗಿರುತ್ತದೆ. ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ನಾಯಿಗಳನ್ನು ಆಶ್ರಯತಾಣಕ್ಕೆ ಕಳುಹಿಸುವ ಮೊದಲು ಸಂತಾನಶಕ್ತಿ ಹರಣ ಮಾಡುವುದು ಅಗತ್ಯವಿದೆ ಎಂದು ಹೇಳಿದ್ದರು. ಅಲ್ಲದೇ, ಆಶ್ರಯತಾಣಗಳಲ್ಲಿ ಅವುಗಳ ಆರೈಕೆಗಾಗಿ ತಜ್ಞರು ಮತ್ತು ಪಶುವೈದ್ಯರನ್ನು ನೇಮಿಸುವುದು, ಜೊತೆಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದು ಅವಶ್ಯಕ. ಮುಂಬಯಿನಲ್ಲಿ ಈ ಆದೇಶವನ್ನು ಸರಿಯಾಗಿ ಕಾರ್ಯಗತಗೊಳಿಸಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಪ್ರಾಮಾಣಿಕ ಪ್ರಯತ್ನಗಳ ಅಗತ್ಯವಿದೆ.

ಪ್ರಾಣಿಪ್ರಿಯ ಕಾರ್ಯಕರ್ತರ ಪಾತ್ರ

ಬೀದಿ ನಾಯಿಗಳನ್ನು ತೆರವುಗೊಳಿಸುವುದು ತಾತ್ಕಾಲಿಕ ಪರಿಹಾರವೆಂದು ಪ್ರಾಣಿಪ್ರಿಯ ಕಾರ್ಯಕರ್ತರು ಹೇಳುತ್ತಾರೆ. ನಾಯಿಗಳು ತಮ್ಮ ಪ್ರದೇಶದ ಬಗ್ಗೆ ಬಹಳ ಜಾಗರೂಕರಾಗಿರುತ್ತವೆ. ಒಂದು ಸ್ಥಳದಿಂದ ನಾಯಿಗಳನ್ನು ತೆಗೆದುಹಾಕಿದರೆ, ಬೇರೆ ಪ್ರದೇಶದ ನಾಯಿಗಳು ತಕ್ಷಣ ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಆರೋಗ್ಯವಂತ ಬೀದಿ ನಾಯಿಗಳನ್ನು ಸಣ್ಣ ಆಶ್ರಯತಾಣಗಳಲ್ಲಿ ಬಂಧಿಸಿಡುವುದು ಅವುಗಳಿಗೆ ಹಿಂಸೆಯಾಗಬಹುದು. ಈ ಸಮಸ್ಯೆಗೆ ನಿಜವಾದ ಉತ್ತರವೆಂದರೆ ನಾಯಿಗಳನ್ನು ತೆಗೆದುಹಾಕುವುದಲ್ಲ, ಬದಲಾಗಿ ಪರಿಣಾಮಕಾರಿ ಸಂತಾನಶಕ್ತಿ ಹರಣ ಕಾರ್ಯಕ್ರಮವನ್ನು ನಡೆಸುವುದು.