ದೇಶದ ಗಡಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳನ್ನು ರಕ್ಷಿಸುತ್ತಿರುವ ಸ್ವದೇಶಿ ಬೇಟೆ ನಾಯಿಗಳು!

ಮುಂಬಯಿ – ಇಲ್ಲಿಯವರೆಗೆ ವಿದೇಶಿ ತಳಿಗಳ ನಾಯಿಗಳು ಸೇನೆ ಮತ್ತು ಪೊಲೀಸ್ ಪಡೆಗಳಲ್ಲಿದ್ದವು; ಆದರೆ ಐದು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದಂತೆ, ಭಾರತೀಯ ತಳಿಗಳ ನಾಯಿಗಳಿಗೆ ಗಡಿ ಭದ್ರತಾ ಪಡೆಯ (ಬಿ.ಎಸ್‌ಎಫ್) ಸೈನಿಕರು ದೇಶವನ್ನು ರಕ್ಷಿಸಲು ಅತ್ಯಂತ ಶ್ರಮವಹಿಸಿ ತರಬೇತಿ ನೀಡಿದ್ದಾರೆ. ‘ರಾಮಪುರ’ ಮತ್ತು ‘ಮುಧೋಳ’ ತಳಿಗಳ ೧೫೦ ನಾಯಿಗಳ ತಂಡ ಈಗ ಸೈನಿಕರೊಂದಿಗೆ ದೇಶದ ಗಡಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳನ್ನು ರಕ್ಷಿಸುತ್ತಿವೆ. ವಿಶೇಷವೆಂದರೆ, ವಿದೇಶಿ ನಾಯಿಗಳಿಗೆ ಹೋಲಿಸಿದರೆ, ಈ ನಾಯಿಗಳು ಹೆಚ್ಚು ಸಮರ್ಥ ಮತ್ತು ಪ್ರವೀಣ ಎಂದು ಸಾಬೀತಾಗಿದ್ದು, ಇವು ಭಾರತೀಯವಾಗಿರುವುದರಿಂದ ದೇಶದ ಹವಾಮಾನಕ್ಕೆ ಹೊಂದಿಕೊಳ್ಳುತ್ತಿವೆ.

ಟೆಕ್ನಪುರ (ಗ್ವಾಲಿಯರ್, ಮಧ್ಯಪ್ರದೇಶ) ದಲ್ಲಿರುವ ನಾಯಿ ತರಬೇತಿ ಕೇಂದ್ರದಲ್ಲಿ ಇವುಗಳಿಗೆ ತರಬೇತಿ ನೀಡಲಾಗಿದೆ. ಗಡಿ ಭದ್ರತಾ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿ.ಆರ್.ಪಿ.ಎಫ್) ಸೈನಿಕರು ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಈ ನಾಯಿಗಳ ವೈಜ್ಞಾನಿಕ ಸಂತಾನೋತ್ಪತ್ತಿ ಮಾಡಿ, ಅವುಗಳಿಗೆ ಸೈನಿಕ, ಭಯೋತ್ಪಾದಕ ಮತ್ತು ಇತರೆ ಕಾರ್ಯಾಚರಣೆಗಳಿಗಾಗಿ ಅತ್ಯುತ್ತಮವಾಗಿ ತರಬೇತಿ ನೀಡಿದ್ದಾರೆ. ಅಕ್ರಮ ವಲಸೆಯನ್ನು ತಡೆಯುವುದು, ಎತ್ತರಕ್ಕೆ ಏರುವುದು, ಕತ್ತಲೆಯಲ್ಲಿ ಹೋಗುವುದು, ಹೆಲಿಕಾಪ್ಟರ್‌ನಿಂದ ಹಗ್ಗದ ಮೂಲಕ ಇಳಿಯುವುದು, ನದಿ ದಾಟುವುದು ಮುಂತಾದ ತರಬೇತಿಗಳನ್ನೂ ಸಹ ಈ ನಾಯಿಗಳಿಗೆ ನೀಡಲಾಗಿದೆ.