ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಪ್ರಿನ್ಸ್ ಆಂಡ್ರೂ ಅವರನ್ನು ಅರಮನೆಯಿಂದ ಹೊರಹಾಕಿದ ಬ್ರಿಟನ್! Britain Prince Andrew Rape Case

  • ೨೫ ವರ್ಷಗಳ ನಂತರ ಬ್ರಿಟಿಷ್ ರಾಜ ಚಾರ್ಲ್ಸ್ ಕ್ರಮ

  • ‘ರಾಜಕುಮಾರ’ ಪದವಿಯೂ ಹಿಂಪಡೆದರು

ಲಂಡನ್ – ೨೫ ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ರಿಟನ್‌ನ ರಾಜ ಚಾರ್ಲ್ಸ್ ಅವರು ತಮ್ಮ ಕಿರಿಯ ಸಹೋದರ ಮತ್ತು ದಿವಂಗತ ರಾಣಿ ಎಲಿಜಬೆತ್ (II) ಅವರ ಎರಡನೇ ಮಗ ಪ್ರಿನ್ಸ್ ಆಂಡ್ರೂ (೬೫ ವರ್ಷ) ಅವರನ್ನು ಅವರ ವಿಂಡ್ಸರ್ ನಿವಾಸದಿಂದ ಹೊರಹಾಕಿದ್ದಾರೆ. ಇದರೊಂದಿಗೆ ಅವರ ‘ರಾಜಕುಮಾರ’ (ಪ್ರಿನ್ಸ್) ಪದವಿಯನ್ನೂ ಸಹ ಹಿಂಪಡೆಯಲಾಗಿದೆ.

ಜೆಫ್ರಿ ಎಪ್‌ಸ್ಟೈನ್ ಪ್ರಕರಣದೊಂದಿಗೆ ಆಂಡ್ರೂ ಅವರ ಸಂಬಂಧಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಕಿಂಗ್‌ಹ್ಯಾಮ್ ಅರಮನೆ ಅಕ್ಟೋಬರ್ ೩೦ ರಂದು ಘೋಷಿಸಿತು. ಜೆಫ್ರಿ ಎಪ್‌ಸ್ಟೈನ್ ಅಪ್ರಾಪ್ತ ಮಕ್ಕಳ ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಿರುವ ಅಮೆರಿಕದ ಅಪರಾಧಿಯಾಗಿದ್ದಾನೆ. ಸಂತ್ರಸ್ತೆಯಾದ ವರ್ಜೀನಿಯಾ ಗಿಫ್ರೆ ಅವರು, ೨೦೦೧ ರಲ್ಲಿ ತನಗೆ ೧೭ ವರ್ಷ ವಯಸ್ಸಿದ್ದಾಗ, ಪ್ರಿನ್ಸ್ ಆಂಡ್ರೂ ಸಹ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ವರ್ಜೀನಿಯಾ ಗಿಫ್ರೆ ಅವರು ಏಪ್ರಿಲ್‌ನಲ್ಲಿ ನಿಧನರಾದರು. ಒಂದು ವರದಿಯ ಪ್ರಕಾರ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೨೦೧೧ ರಲ್ಲಿ, ವರ್ಜೀನಿಯಾ ಗಿಫ್ರೆ ಅವರು ಅಮೆರಿಕದಲ್ಲಿ ಗಣ್ಯ ವ್ಯಕ್ತಿಗಳ ಒಂದು ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆದಿದ್ದರು.

ಪ್ರಿನ್ಸ್ ಆಂಡ್ರೂ ಅವರ ಹೆಸರನ್ನೂ ಬದಲಾಯಿಸಲಾಗಿದೆ!

ಈ ತಿಂಗಳ ಆರಂಭದಲ್ಲಿ, ಆಂಡ್ರೂ ಅವರಿಗೆ ‘ಡ್ಯೂಕ್ ಆಫ್ ಯಾರ್ಕ್’ ಎಂಬ ಬಿರುದನ್ನು ಬಳಸದಂತೆ ನಿಷೇಧಿಸಲಾಗಿತ್ತು. ರಾಜಮನೆತನದ ಪದವಿಯನ್ನು ಕಳೆದುಕೊಂಡ ನಂತರ ಪ್ರಿನ್ಸ್ ಆಂಡ್ರೂ ಅವರನ್ನು ಈಗ ‘ಆಂಡ್ರೂ ಮೌಂಟ್‌ಬ್ಯಾಟನ್-ವಿಂಡ್ಸರ್’ ಎಂದು ಕರೆಯಲಾಗುತ್ತದೆ ಎಂದು ಬಕಿಂಗ್‌ಹ್ಯಾಮ್ ಅರಮನೆ ಹೇಳಿದೆ. ಇಲ್ಲಿಯವರೆಗೆ, ಅವರನ್ನು ‘ಪ್ರಿನ್ಸ್ ಆಂಡ್ರೂ, ಡ್ಯೂಕ್ ಆಫ್ ಯಾರ್ಕ್’ ಎಂದು ಕರೆಯಲಾಗುತ್ತಿತ್ತು. ಮೌಂಟ್‌ಬ್ಯಾಟನ್-ವಿಂಡ್ಸರ್ ಎಂಬ ಹೆಸರನ್ನು ೧೯೬೦ ರಲ್ಲಿ ರಚಿಸಲಾಯಿತು. ಈ ಹೆಸರು ಬ್ರಿಟನ್‌ನ ದಿವಂಗತ ರಾಣಿ ಎಲಿಜಬೆತ್ II ಮತ್ತು ಅವರ ಪತಿ ಪ್ರಿನ್ಸ್ ಫಿಲಿಪ್ ಅವರ ಕುಟುಂಬ ಹೆಸರುಗಳ ಸಂಯೋಜನೆಯಾಗಿದೆ.

ಪ್ರಿನ್ಸ್‌ನ ಆರೋಪಿ ವರ್ಜೀನಿಯಾ ಅವರು ೬ ತಿಂಗಳ ಹಿಂದೆ ನಿಧನರಾದರು. ಅವರು ಸಾಯುವ ಮೊದಲು, ಅವರು ‘ನೋ ಬಾಡೀಸ್ ಗರ್ಲ್’ (No Bodies Girl) ಎಂಬ ಆತ್ಮಚರಿತ್ರೆಯನ್ನು ಬರೆದಿದ್ದರು. ಅದು ಅಕ್ಟೋಬರ್ ೨೧ ರಂದು ಪ್ರಕಟವಾಯಿತು. ಈ ಆತ್ಮಚರಿತ್ರೆಯಿಂದ ದೊಡ್ಡ ವಿವಾದ ಮತ್ತೆ ಪ್ರಾರಂಭವಾಯಿತು. ಇದರಲ್ಲಿ ಅವರು ತಮ್ಮ ಮೇಲಾದ ದೌರ್ಜನ್ಯಗಳು ಮತ್ತು ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟವನ್ನು ವಿವರಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಮುಕ ಪ್ರಿನ್ಸ್ ಆಂಡ್ರೂನ(ಬ್ರಿಟೀಶ್‌ನ) ನಿಜವಾದ ಮುಖವನ್ನು ತಿಳಿಯಿರಿ!