ನಿವೃತ್ತ ನ್ಯಾಯಮೂರ್ತಿ ಅಭಯ್ ಓಕ್: ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಸುವುದು ಯಾವುದೇ ಧರ್ಮದಲ್ಲಿ ಬರೆದಿಲ್ಲ!

ನವದೆಹಲಿ – ಯಾವುದೇ ಧರ್ಮವು ಪರಿಸರದ ನಾಶ ಅಥವಾ ಜೀವಿಗಳಿಗೆ ಆಗುವ ಹಾನಿಯನ್ನು ಒಪ್ಪುವುದಿಲ್ಲ. ಪಟಾಕಿ ಸಿಡಿಸುವುದು ಮತ್ತು ಧ್ವನಿವರ್ಧಕ (ಲೌಡ್‌ಸ್ಪೀಕರ್) ಬಳಸುವುದು ಕಡ್ಡಾಯ ಧಾರ್ಮಿಕ ಆಚರಣೆಗಳಲ್ಲ. ದುರದೃಷ್ಟವಶಾತ್, ಯಾವುದೇ ರಾಜಕಾರಣಿಯು ಹಬ್ಬಗಳ ಸಮಯದಲ್ಲಿ ಸಾರ್ವಜನಿಕರಿಗೆ ಪರಿಸರ ಮಾಲಿನ್ಯ ಮತ್ತು ವಿನಾಶದಿಂದ ದೂರವಿರುವಂತೆ ಮನವಿ ಮಾಡಿಲ್ಲ. ರಾಜಕೀಯ ವರ್ಗಕ್ಕೆ ಈ ಕರ್ತವ್ಯದ ಅರಿವಿಲ್ಲ ಎಂದು ತೋರುತ್ತದೆ. ಕೆಲವು ವಿಷಯಗಳನ್ನು ಹೊರತುಪಡಿಸಿ, ನಮ್ಮ ಧಾರ್ಮಿಕ ನಾಯಕರೂ ಕೂಡ ಈ ಬಗ್ಗೆ ಗಮನ ಕೊಡಲಿಲ್ಲವೆಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಯ್ ಓಕ್ ಹೇಳಿದ್ದಾರೆ. ಅಕ್ಟೋಬರ್ 29 ರಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಉಪನ್ಯಾಸ ಸರಣಿಯಲ್ಲಿ ಅವರು ಮಾತನಾಡುತ್ತಿದ್ದರು.

ನ್ಯಾಯಮೂರ್ತಿ ಅಭಯ್ ಓಕ್ ಮತ್ತು ನ್ಯಾಯಮೂರ್ತಿ ನರಸಿಂಹ ಅವರ ಪೀಠವು 2023 ರಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಪಟಾಕಿಗಳಿಂದಾಗುವ ವಾಯು ಮಾಲಿನ್ಯದ ಪ್ರಕರಣದ ವಿಚಾರಣೆ ನಡೆಸಿತ್ತು. ಅವರು ದೆಹಲಿ ಸೇರಿದಂತೆ ದೇಶಾದ್ಯಂತ ಪಟಾಕಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶಿಸಿದ್ದರು. ಈ ವರ್ಷ ಅಕ್ಟೋಬರ್ 15 ರಂದು ಸುಪ್ರೀಂ ಕೋರ್ಟ್ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಹಸಿರು (ಪರಿಸರ ಸ್ನೇಹಿ) ಪಟಾಕಿಗಳ ಮಾರಾಟ ಮತ್ತು ಸಿಡಿಸಲು ಅಕ್ಟೋಬರ್ 18 ರಿಂದ 21 ರವರೆಗೆ ಅನುಮತಿ ನೀಡಿತ್ತು.

ನಿವೃತ್ತ ನ್ಯಾಯಮೂರ್ತಿ ಓಕ್ ಅವರು ಹೇಳಿದ್ದು,

1. ಸಂವಿಧಾನದ ಅನುಚ್ಛೇದ 25 ರ ಅಡಿಯಲ್ಲಿ ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯವು ಸಹ ಪಟಾಕಿ ಸಿಡಿಸುವುದು, ಲಕ್ಷಾಂತರ ಜನರು ನದಿಗಳಲ್ಲಿ ಸ್ನಾನ ಮಾಡುವುದು, ವಿಗ್ರಹಗಳ ವಿಸರ್ಜನೆ ಮತ್ತು ಧಾರ್ಮಿಕ ಉತ್ಸವಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ಅನುಮತಿ ನೀಡುವುದಿಲ್ಲ.

2. ಧರ್ಮದ ಹೆಸರಿನಲ್ಲಿ ಮಾಲಿನ್ಯವನ್ನು ಸಮರ್ಥಿಸುವ ಅಭ್ಯಾಸ ಹೆಚ್ಚುತ್ತಿದೆ; ಆದರೆ ಪ್ರತಿಯೊಂದು ಧರ್ಮವು ನಮಗೆ ಪ್ರಕೃತಿ ಮತ್ತು ಜೀವಿಗಳನ್ನು ರಕ್ಷಿಸುವ ಸಂದೇಶವನ್ನು ನೀಡುತ್ತದೆ.

3. ಪಟಾಕಿ ಸಿಡಿಸುವುದರಿಂದ ವೃದ್ಧರು, ರೋಗಿಗಳು, ಪಕ್ಷಿಗಳು ಮತ್ತು ಪ್ರಾಣಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದರೆ, ಹೇಗೆ ಸಂತೋಷವಾಗಿರಲು ಸಾಧ್ಯ? ನಿಜವಾದ ಸಂತೋಷವು ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಹಬ್ಬಗಳನ್ನು ಆಚರಿಸುವುದರಲ್ಲಿದೆ, ಪಟಾಕಿ ಸಿಡಿಸುವುದರಲ್ಲಿ ಅಥವಾ ಜೋರಾಗಿ ಶಬ್ದ ಮಾಡುವುದರಲ್ಲಿಲ್ಲ.

4. ದೆಹಲಿಯ ಮಾಲಿನ್ಯದ ಬಗ್ಗೆ ಹೇಳುವುದಾದರೆ, ವಾಯು ಶುದ್ಧೀಕರಣ ಯಂತ್ರಗಳನ್ನು (ಏರ್ ಪ್ಯೂರಿಫೈಯರ್) ಖರೀದಿಸಬಹುದಾದವರು ತಮ್ಮನ್ನು ರಕ್ಷಿಸಿಕೊಳ್ಳಬಹುದು; ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರು ಕೊಳೆಗೇರಿಗಳಲ್ಲಿ ವಾಸಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಜನರು ಬೀದಿಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಮಾಲಿನ್ಯವು ಅನೇಕ ವಿಧಗಳಲ್ಲಿ ಮಾರಕವಾಗುತ್ತದೆ.

5. ಆಜಾನ್ ಮತ್ತು ಇತರ ಧಾರ್ಮಿಕ ಸಮಾರಂಭಗಳನ್ನು ಧ್ವನಿವರ್ಧಕಗಳಿಲ್ಲದೆ ಮಾಡಬಹುದು. ಮುಂಬಯಿ ಹೈಕೋರ್ಟ್‌ನ ತೀರ್ಪಿನಲ್ಲಿ ಇವು ಧಾರ್ಮಿಕ ಕ್ರಿಯೆಗಳಲ್ಲ ಎಂದು ಸಹ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಕೂಡ ಇದೇ ನಿರ್ಧಾರವನ್ನು ಎತ್ತಿಹಿಡಿದಿದೆ.

ಪರಿಸರದ ರಕ್ಷಣೆ ಮಾಡುವ ಸಕ್ಷಮವಾಗಿರುವ ಏಕೈಕ ಸಂಸ್ಥೆ ಎಂದರೆ ನ್ಯಾಯಾಲಯಗಳು !

ನ್ಯಾಯಾಧೀಶರು ಮತ್ತು ನ್ಯಾಯಾಲಯಗಳು ಅವರ ನಿಲುವಿನ ಬಗ್ಗೆ, “ಪರಿಸರವನ್ನು ರಕ್ಷಿಸುವುದು ತಮ್ಮ ಕರ್ತವ್ಯ ಎಂದು ದೇಶದ ನ್ಯಾಯಾಲಯಗಳು ನೆನಪಿನಲ್ಲಿಟ್ಟುಕೊಳ್ಳಬೇಕು; ಪರಿಸರರು ಸಾಮಾನ್ಯ ಜನರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಯಾವಾಗ ನಾವು ನ್ಯಾಯಾಧೀಶರಾಗಿ ಪರಿಸರಕ್ಕೆ ನ್ಯಾಯ ನೀಡುತ್ತೇವೆ, ಆಗ ನಾವು ಕೇವಲ ಮನುಷ್ಯರಿಗೆ, ಎಲ್ಲಾ ಸಜೀವ ಪ್ರಾಣಿಗಳಿಗೆ ಅಷ್ಟೇ ಅಲ್ಲದೆ, ಪೃಥ್ವಿ ಗ್ರಹಕ್ಕೂ ಕೂಡ ನ್ಯಾಯ ನೀಡುತ್ತೇವೆ. ನನ್ನ ವೈಯಕ್ತಿಕ ಅಭಿಪ್ರಾಯವೇನೆಂದರೆ, ಪ್ರಸ್ತುತ ಪರಿಸ್ಥಿತಿ ನೋಡಿದರೆ ಪರಿಸರದ ರಕ್ಷಣೆ ಮಾಡಲು ಸಕ್ಷಮವಾಗಿರುವ ಏಕೈಕ ಸಂಸ್ಥೆ ಎಂದರೆ ನ್ಯಾಯಾಲಯಗಳು ಅಥವಾ ಕಾನೂನು ಬದ್ಧ ನ್ಯಾಯಾಲಯಗಳು !”ಎಂದು ಹೇಳಿದರು.

ಸಮಾಜದಲ್ಲಿ ಇಂದಿಗೂ ಕೂಡ ಮೂರ್ತಿ ವಿಸರ್ಜನೆಯ ಬಗ್ಗೆ ಜಾಗೃತಿ ಇಲ್ಲ!

ಮಾಜಿ ನ್ಯಾಯಮೂರ್ತಿ ಅಭಯ ಓಕ್ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಮಾಜದಲ್ಲಿ ಜಾಗರೂಕತೆಯ ಕೊರತೆಯಿದೆ ಎಂದು ಹೇಳಿದರು. ನ್ಯಾಯಾಲಯವು ನೀಡಿದ ಹಿಂದಿನ ಅನೇಕ ಆದೇಶಗಳಿಂದ ಅನೇಕ ಬಾರಿ ಮಾಲಿನ್ಯವಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನ್ ಬೃಹತ್ ಮೂರ್ತಿಗಳು ಸಮುದ್ರ, ನದಿಗಳು ಮತ್ತು ಕೆರೆಗಳಲ್ಲಿ ವಿಸರ್ಜಿಸಲಾಗುತ್ತದೆ. ಹೀಗಿದ್ದರೂ ಕೂಡ ಇತ್ತೀಚಿನ ಸಮಯದಲ್ಲಿ ಸರಕಾರ ಕಟ್ಟಿರುವ ಕೃತ್ರಿಮ ಕೆರೆಗಳು ಒಂದು ಆಶಾದಾಯಕ ಆರಂಭವಾಗಿವೆ; ಆದರೆ ಸಮಾಜದಲ್ಲಿ ಜಾಗರೂಕತೆಯ ಕೊರತೆಯಿದೆ. (ನಿಜವೆಂದರೆ ಕೃತಕ ಕೆರೆಗಳ ಮೂಲಕ ನಡೆಯುವ ಭ್ರಷ್ಟಾಚಾರ, ಮೂರ್ತಿ ವಿಸರ್ಜನೆ ಮಾಡಿದ ನಂತರ ಅವುಗಳು ಮತ್ತೆ ನದಿಯಲ್ಲಿ ವಿಸರ್ಜನೆ ಮಾಡುವುದು ಅಥವಾ ಕಣಿವೆಗಳಲ್ಲಿ ಎಸೆಯುವುದು ಮುಂತಾದ ದುರ್ವರ್ತನೆಗಳು ನಡೆಯುತ್ತವೆ, ಹಾಗೂ ಆಧ್ಯಾತ್ಮ ಶಾಸ್ತ್ರದ ಪ್ರಕಾರ ಜೇಡಿ ಮಣ್ಣಿನ ಮೂರ್ತಿ ತಯಾರಿಸಿ ಅವುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿದರೆ ಮಾಲಿನ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ! – ಸಂಪಾದಕರು)

ಓಕ್ ಅವರು ಮುಂದೆ ಮಾತನಾಡಿ, ಅನೇಕ ಧರ್ಮ ಮತ್ತು ತತ್ವಜ್ಞಾನವು ನಿಸರ್ಗ ಕೂಡ ಒಂದು ದೈವಿಶಕ್ತಿ ಎನ್ನುತ್ತವೆ; ಆದರೆ ಜನರು ಅವರ ಅನುಕೂಲತೆಯ ಪ್ರಕಾರ ಈ ತತ್ವವನ್ನು ನಿರ್ಲಕ್ಷಿಸುತ್ತಾರೆ ಎಂದು ಹೇಳಿದರು.

ಮಾಲಿನ್ಯ ಹರಡುವುದು, ಮೂಲಭೂತ ಅಧಿಕಾರದ ಉಲ್ಲಂಘನೆ ಎಂದು ತಿಳಿಯಬೇಕು !

ಮಾಜಿ ನ್ಯಾಯಮೂರ್ತಿ ಓಕ್ ಇವರು ,”ವಾಯು ಮತ್ತು ಜಲ ಮಾಲಿನ್ಯ ಇವು ಕಲಂ 21 ರ ಅಡಿಯಲ್ಲಿ ನೀಡಿರುವ ಮೂಲಭೂತ ಅಧಿಕಾರದ ಉಲ್ಲಂಘನೆಯಾಗಿದೆ ಎಂದು ತಿಳಿಯಬೇಕು, ಮನುಷ್ಯನು ಗೌರವದಿಂದ ಬದುಕುವ ಅಧಿಕಾರ ಇದರಲ್ಲಿ ಒಳಗೊಂಡಿರುತ್ತದೆ. ನನ್ನ ವಿಶ್ವಾಸವೇನೆಂದರೆ, ಎಲ್ಲಿಯವರೆಗೆ ನಿಮ್ಮ ಬಳಿ ಆರೋಗ್ಯಯುತವಾದ ವಾತಾವರಣ ಇರುವುದಿಲ್ಲವೋ, ಅಲ್ಲಿಯವರೆಗೆ ನೀವು ಗೌರವದಿಂದ ಬದುಕುವುದು ಅಸಾಧ್ಯವಾಗಿದೆ “ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

ಹಾಗಾದರೆ, ಮುಸ್ಲಿಮರು ದಿನಕ್ಕೆ 5 ಬಾರಿ ಧ್ವನಿವರ್ಧಕಗಳ ಮೂಲಕ ಮಾಡುವ ಆಜಾನ್ ಮತ್ತು ಕ್ರಿಶ್ಚಿಯನ್ನರು ಹೊಸ ವರ್ಷದಂದು ಸಿಡಿಸುವ ಪಟಾಕಿಗಳ ಬಗ್ಗೆ ಮಾಜಿ ನ್ಯಾಯಮೂರ್ತಿ ಓಕ್ ಏಕೆ ಮಾತನಾಡುವುದಿಲ್ಲ?