ತಾಲಿಬಾನ್-ಪಾಕಿಸ್ತಾನದ ಶಾಂತಿ ಮಾತುಕತೆ ವಿಫಲ!

ಭಯೋತ್ಪಾದಕರ ದಾಳಿಯಲ್ಲಿ ಪಾಕಿಸ್ತಾನದ ೫ ಸೈನಿಕರ ಸಾವು

ಇಸ್ಲಾಮಾಬಾದ್ (ಪಾಕಿಸ್ತಾನ) – ತಾಲಿಬಾನ್ ಭಯೋತ್ಪಾದಕರು ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಕುರ್ರಮ್ ಮತ್ತು ಉತ್ತರ ವಜಿರಿಸ್ತಾನ್ ಜಿಲ್ಲೆಗಳಿಗೆ ಪ್ರವೇಶಿಸಲು ಪ್ರಯತ್ನಿಸಿದ್ದರು ಎಂದು ಪಾಕಿಸ್ತಾನಿ ಸೇನೆ ಹೇಳಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ೫ ಪಾಕಿಸ್ತಾನಿ ಸೈನಿಕರು ಮತ್ತು ೨೫ ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಲು ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಮಾತುಕತೆ ನಡೆಯುತ್ತಿರುವಾಗಲೇ ಈ ಘಟನೆ ಸಂಭವಿಸಿದೆ. ಮುಖ್ಯವಾಗಿ, ಈ ಮಾತುಕತೆಗಳಿಂದ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದರಿಂದ ಈ ಸಂಘರ್ಷ ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ‘ಒಂದು ವೇಳೆ ಶಾಂತಿ ಒಪ್ಪಂದವಾಗದಿದ್ದರೆ, ಪಾಕಿಸ್ತಾನವು ಬಹಿರಂಗವಾಗಿ ಯುದ್ಧಕ್ಕಿಳಿಯುವುದು’ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.