ದೇವಬಂದ ಮದರಸಾಗಳ ಮೇಲೆ ನಿಗಾ ಇಡಿ ! – ಅಫ್ಘಾನಿಸ್ತಾನದ ಮಾಜಿ ರಾಷ್ಟ್ರಪತಿಗಳಿಂದ ಭಾರತಕ್ಕೆ ಎಚ್ಚರಿಕೆ

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ (ಎಡ) ಮತ್ತು ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (ಬಲ)

ಕಾಬೂಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ಮಾಜಿ ರಾಷ್ಟ್ರಪತಿ ಅಮರುಲ್ಲಾ ಸಾಲೆಹ್ ಅವರು ಭಾರತೀಯರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದರು; ಆದರೆ ಅದೇ ಸಮಯದಲ್ಲಿ, ಅವರು ಭಾರತ ಸರಕಾರಕ್ಕೆ ದೇವಬಂದ ಮದರಸಾಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಈ ಅಪಾಯವು ಉತ್ತರ ಪ್ರದೇಶದ ಸಹರಾನಪುರದಲ್ಲಿರುವ ದೇವಬಂದ ಮದರಸಾಗೆ ಸಂಬಂಧಿಸಿದೆ ಎಂದು ಸಾಲೆಹ್ ಹೇಳಿದ್ದಾರೆ.

1. ‘ಎಕ್ಸ್’ ಮೂಲಕ ಶುಭಾಶಯಗಳನ್ನು ತಿಳಿಸುತ್ತಾ ಅಮರುಲ್ಲಾ ಸಾಲೆಹ್, ‘ಎಲ್ಲಾ ಭಾರತೀಯರಿಗೆ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು! ನಿಮ್ಮೆಲ್ಲರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈ ಅವಧಿಯಲ್ಲಿ ದಯವಿಟ್ಟು ದೇವಬಂದ ಮದರಸಾದ ಮೇಲೆ ಗಮನವಿಡಿ,’ ಎಂದು ಬರೆದಿದ್ದಾನೆ.

2. ಈ ಸಂದೇಶವನ್ನು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಅಕ್ಟೋಬರ್ 11 ರಂದು ಭಾರತಕ್ಕೆ ಭೇಟಿ ನೀಡಿದ್ದಕ್ಕೆ ಜೋಡಿಸಲಾಗಿದೆ. ಈ ಭೇಟಿಯ ಸಮಯದಲ್ಲಿ, ಮುತ್ತಕಿ ಅವರು ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವಬಂದ್ ಮದರಸಾಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು, ತಾಲಿಬಾನಗೆ ದೇವಬಂದನೊಂದಿಗೆ ಹಳೆಯ ಸಂಬಂಧವಿದೆ ಎಂದು ಹೇಳಿದ್ದರು.

3. ದೇವಬಂದಗೆ ಭೇಟಿ ನೀಡಿದಾಗ, ಮುತ್ತಕಿ ಅವರು ದಾರುಲ್ ಉಲೂಮನ ಮುಖ್ಯಸ್ಥ ಮೌಲಾನಾ ಅಬುಲ್ ಖಾಸಿಮ್ ನೋಮಾನಿ, ಜಮಿಯತ್ ಉಲೇಮಾ ಎ ಹಿಂದ್‌ ನ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಮತ್ತು ಇತರ ಧರ್ಮ ಗುರುಗಳನ್ನು ಭೇಟಿಯಾದರು.

4. ಅಮರುಲ್ಲಾ ಸಾಲೆಹ್ ಅವರು ತಾಲಿಬಾನ್ ಮತ್ತು ಪಾಕಿಸ್ತಾನಿ ಸೇನೆಯ ಜಿಹಾದಿ ‘ಅಜೆಂಡಾ’ದ ತೀವ್ರ ವಿರೋಧಿಯಾಗಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗ, ಅವರು ಆಗಿನ ಅಶ್ರಫ್ ಘನಿ ಸರಕಾರದಲ್ಲಿ ಉಪಾಧ್ಯಕ್ಷರಾಗಿದ್ದರು. ನಂತರ ಅವರು ತಾಲಿಬಾನ್ ವಿರೋಧಿ ನಾಯಕ ಅಹ್ಮದ್ ಮಸೂದ್ ಅವರ ಗುಂಪಿನೊಂದಿಗೆ ಸೇರಿ ಕೆಲಸ ಮಾಡಿದರು.

ದೇವಬಂದ ಮತ್ತು ತಾಲಿಬಾನ್ ಸಂಬಂಧ

ತಾಲಿಬಾನ್‌ ನಲ್ಲಿ ದೇವಬಂದ ಸಿದ್ಧಾಂತಕ್ಕೆ ವಿಶೇಷ ಸ್ಥಾನವಿದೆ; ಏಕೆಂದರೆ ತಾಲಿಬಾನ್‌ ನ ಅನೇಕ ನಾಯಕರು ಪಾಕಿಸ್ತಾನದಲ್ಲಿರುವ ದಾರುಲ್ ಉಲೂಮ್ ಹಕ್ಕಾನಿಯಾ ಮದರಸಾದ ವಿದ್ಯಾರ್ಥಿಗಳಾಗಿದ್ದರು. ಈ ಹಕ್ಕಾನಿಯಾ ಮದರಸಾವನ್ನು ಮೌಲಾನಾ ಅಬ್ದುಲ್ ಹಕ್ ಸ್ಥಾಪಿಸಿದ್ದರು. ಅವರು ದೇವಬಂದ್‌ ನಲ್ಲೂ ಶಿಕ್ಷಣ ಪಡೆದಿದ್ದರು. ಅವರ ಮಗ ಮೌಲಾನಾ ಸಮಿ ಉಲ್ ಹಕ್ ಅವರನ್ನು ತಾಲಿಬಾನ್‌ ನ ರಕ್ಷಕ ಎಂದು ಪರಿಗಣಿಸಲಾಗುತ್ತದೆ.

ದೇವಬಂದ್ ಕೇವಲ ಒಂದು ಮದರಸಾ ಅಲ್ಲ, ಬದಲಿಗೆ ತಾಲಿಬಾನ್ ಸಿದ್ಧಾಂತದ ಜನ್ಮಸ್ಥಳ ಎಂದು ಗುರುತಿಸಲ್ಪಟ್ಟಿದೆ. 1866 ರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸ್ಥಾಪಿಸಲಾದ ದಾರುಲ್ ಉಲೂಮ್ ದೇವಬಂದ್‌ ನ ಉದ್ದೇಶ ‘ಇಸ್ಲಾಮಿಕ್ ಶಿಕ್ಷಣವನ್ನು ಬಾಹ್ಯ ಪ್ರಭಾವಗಳಿಂದ ರಕ್ಷಿಸುವುದು ಮತ್ತು ಕುರಾನ್-ಹದೀಸ್‌ ನ ಮೂಲ ಸ್ವರೂಪವನ್ನು ಸಂರಕ್ಷಿಸುವುದು’ ಆಗಿತ್ತು. ಇದೇ ಸ್ಥಳದಿಂದ ದೇವಬಂದಿ ಆಂದೋಲನ ಪ್ರಾರಂಭವಾಯಿತು, ಅದು ನಂತರ ಭಾರತದಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದವರೆಗೆ ಹರಡಿತು.