ಆರೋಗ್ಯವಂತ ಹೃದಯಕ್ಕಾಗಿ ಮಾಡಬೇಕಾದ ಉಪಾಯಗಳು


‘ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (American Heart Association) ವೈದ್ಯರು (ಡಾಕ್ಟರರು) ರೋಗಿಗಳ ಆಹಾರದ ಬಗ್ಗೆ ಮಾತನಾಡುವಾಗ, ಹೃದಯವನ್ನು ಆರೋಗ್ಯವಾಗಿಡುವ ಆಹಾರ ಪದಾರ್ಥಗಳ ಬಗ್ಗೆ ಈ ಕೆಳಗಿನ ನಿರ್ದೇಶನವನ್ನು ಪಾಲಿಸುವಂತೆ ಹೇಳಿದ್ದಾರೆ.

೧. ದೇಹದ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳುವ ಮೂಲಕ ಹೃದಯಕ್ಕೆ ಸಂಬಂಧಿಸಿದ ಸಂಭಾವ್ಯ ಹಾನಿಯನ್ನು ಕಡಿಮೆ ಮಾಡಬಹುದು. ಪ್ರತಿ ದಶಕದಲ್ಲಿ, ಅಂದರೆ ಪ್ರತಿ ೧೦ ವರ್ಷಕ್ಕೊಮ್ಮೆ, ದೇಹಕ್ಕೆ ಬೇಕಾಗುವ ಇಂಧನದ ಪ್ರಮಾಣ ೭೦ ರಿಂದ ೧೦೦ ಕ್ಯಾಲೋರಿಗಳಷ್ಟು ಕಡಿಮೆಯಾಗುತ್ತದೆ. ಆದ್ದರಿಂದ, ಆಹಾರ ಸೇವಿಸುವುದರ ಮೇಲೆ ನಿಯಂತ್ರಣವಿರಲಿ. ಹೆಚ್ಚು ಪೌಷ್ಟಿಕಾಂಶಗಳನ್ನು ನೀಡುವ ದಟ್ಟ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ರೋಗಗಳನ್ನು ತಡೆಯುತ್ತವೆ. ಹಣ್ಣಿನ ರಸ ಕುಡಿಯುವುದಕ್ಕಿಂತ ಇಡೀ ಹಣ್ಣುಗಳನ್ನು ತಿನ್ನುವುದರಿಂದ ರೋಗಿಗಳಿಗೆ ಹೆಚ್ಚು ನಾರಿನಂಶ (ಫೈಬರ್) ಸಿಗುತ್ತದೆ.

೨. ಸಂಸ್ಕರಿಸಿ ಸಿಪ್ಪೆ ತೆಗೆದ (ಪಾಲಿಶ್ ಮಾಡಿದ) ಧಾನ್ಯಗಳ ಪೋಷಕಾಂಶಗಳು ನಾಶವಾಗುತ್ತವೆ. ಪಾಲಿಶ್ ಮಾಡದ ಸಿಪ್ಪೆಸಹಿತ ಧಾನ್ಯಗಳಲ್ಲಿ ಹೊಟ್ಟು, ಅಂರ್ತಬೀಜ (ಎಂಡೋಸ್ಪರ್ಮ್) ಇವುಗಳಲ್ಲದೆ, ಧಾನ್ಯದ ಕಾಳಿನಲ್ಲಿ ೩ ಪದರಗಳಿರುತ್ತವೆ. ಅವುಗಳಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಅಧ್ಯಯನಗಳಿಂದ ತಿಳಿದು ಬಂದಿರುವಂತೆ, ಸಿಪ್ಪೆ ಸಹಿತ ಆಹಾರವು ಹೃದಯಕ್ಕೆ ಹಾನಿಕರ ಕಾರಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

೩. ಪ್ರೋಟೀನ್‌ಗಳಿಗಾಗಿ ಶೇಂಗಾ, ದ್ವಿದಳ ಧಾನ್ಯಗಳು, ಉದಾ. ಸೋಯಾಬೀನ್, ಬೇಳೆಕಾಳುಗಳು, ಕಡಲೆ, ಬಟಾಣಿ ಮುಂತಾದವನ್ನು ಉಪಯೋಗಿಸಬೇಕು. ದ್ವಿದಳ ಧಾನ್ಯಗಳು ಮತ್ತು ಕಾಳುಗಳು ಪ್ರೋಟೀನ್‌ಗಳ ಜೊತೆಗೆ ನಾರಿನಂಶದ (ಫೈಬರ್‌ದ) ಉತ್ತಮ ಮೂಲಗಳಾಗಿವೆ. ತೂಕ ಮತ್ತು ಸ್ಥೂಲಕಾಯವನ್ನು ತಡೆಯಲು, ಕಡಿಮೆ ಕೊಬ್ಬಿನಂಶ ಅಥವಾ ಕೊಬ್ಬುರಹಿತ ಹಾಲು ಉತ್ಪನ್ನಗಳನ್ನು ಆರಿಸಿಕೊಳ್ಳಬೇಕು.

೪. ತಜ್ಞರು ಹೇಳುವಂತೆ, ‘ಪಾಲಿಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಸೋಯಾಬೀನ್, ಮೆಕ್ಕೆಜೋಳ, ಸೂರ್ಯಕಾಂತಿ, ಎಳ್ಳು, ಅಗಸೆ ಬೀಜಗಳ ಎಣ್ಣೆ ಉತ್ತಮವಾಗಿರುತ್ತದೆ. ಇವು ಹೃದಯದಲ್ಲಿನ ರಕ್ತಪ್ರವಾಹಕ್ಕೆ ಸಂಬಂಧಿಸಿದ ಹಾನಿಯನ್ನು ಶೇ. ೩೦ ರಷ್ಟು ಕಡಿಮೆ ಮಾಡುತ್ತವೆ. ಉಷ್ಣವಲಯದ ಪ್ರದೇಶಗಳಲ್ಲಿ ಬಳಸುವ ತೆಂಗಿನೆಣ್ಣೆ, ಪಾಮ್ ಎಣ್ಣೆಗಳು ‘ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತವೆ.

೫. ಹೆಚ್ಚು ಸಕ್ಕರೆ ಇರುವ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸುವುದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಹೆಚ್ಚಾಗುವುದಿಲ್ಲ. ಉಪ್ಪನ್ನು ಕಡಿಮೆ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

– ನ್ಯಾಯವಾದಿ ನವೀನಕುಮರ, ಸಹಸಂಪಾದಕರು, (ಆಧಾರ : ಮಾಸಿಕ ‘ಗೀತಾ ಸ್ವಾಧ್ಯಾಯ, ವರ್ಷ ೧೨ ಸಂಚಿಕೆ೧೦)