ಅಯೋಧ್ಯಾ ಪ್ರಕರಣದ ತೀರ್ಪನ್ನು ಎಲ್ಲರೂ ಸ್ವೀಕರಿಸಿದ್ದರಿಂದ ದೇಶದಲ್ಲಿ ಶಾಂತಿ ಕಾಪಾಡಲಾಯಿತು.! – ಮಾಜಿ ನ್ಯಾಯಮೂರ್ತಿ ನಾಗೇಶ್ವರ ರಾವ್

ಚೆನ್ನೈ (ತಮಿಳುನಾಡು) – ಅಯೋಧ್ಯಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಕಟವಾದ ನಂತರ ದೇಶದಲ್ಲಿ ಯಾವುದೇ ಅಸ್ಥಿರತೆ ಉಂಟಾಗಲಿಲ್ಲ; ಏಕೆಂದರೆ ಆ ತೀರ್ಪನ್ನು ಎಲ್ಲರೂ ಸ್ವೀಕರಿಸಿದ್ದರು ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರು ಇಲ್ಲಿ ಹೇಳಿದರು. ಚೆನ್ನೈನಲ್ಲಿ ಆಯೋಜಿಸಲಾಗಿದ್ದ ‘ಕೇಸ್ ಫಾರ್ ರಾಮ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಅಯೋಧ್ಯಾ ರಾಮ ಜನ್ಮಭೂಮಿ ಬಾಬರಿ ಮಸೀದಿ ಡಿಸ್ಪ್ಯೂಟ್’ (ವಿವಾದ) ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಪುಸ್ತಕವನ್ನು ಅನಿರುದ್ಧ ಶರ್ಮಾ ಮತ್ತು ಶ್ರೀಧರ್ ಪೊತರಾಜು ಅವರು ಬರೆದಿದ್ದಾರೆ.

ನ್ಯಾಯಮೂರ್ತಿ ರಾವ್ ಅವರು, ಇದು ಭಾರತದ ಅತ್ಯಂತ ಮಹತ್ವದ ಮೊಕದ್ದಮೆಯಾಗಿತ್ತು. ಇಡೀ ದೇಶವು ಉಸಿರು ಬಿಗಿ ಹಿಡಿದು ತೀರ್ಪಿಗಾಗಿ ಕಾಯುತ್ತಿತ್ತು. ತೀರ್ಪಿನಲ್ಲಿ ಏನಾಗಬಹುದು ಎನ್ನುವುದಕ್ಕಿಂತ, ತೀರ್ಪಿನ ನಂತರ ಏನಾಗಬಹುದು ಎನ್ನುವ ಅಧಿಕ ಚಿಂತೆ ಜನರಿಗಿತ್ತು; ಆದರೆ ತೀರ್ಪಿನ ನಂತರ ಎಲ್ಲಿಯೂ ಹಿಂಸಾಚಾರ ನಡೆಯಲಿಲ್ಲ. ಎಲ್ಲರೂ ಈ ತೀರ್ಪನ್ನು ಒಪ್ಪಿಕೊಂಡರು. ಇದು ಭಾರತೀಯ ಸಮಾಜದ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

ನ್ಯಾಯಮೂರ್ತಿ ರಾವ್ ಅವರು ಈ ಸಂದರ್ಭದಲ್ಲಿ ಮಾತನಾಡುವಾಗ ಹಿರಿಯ ವಕೀಲ ಕೆ. ಪರಾಶರನ್ ಅವರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು. “ವಕೀಲ ಪರಾಶರನ್ ಅವರು ಈ ಮೊಕದ್ದಮೆಯನ್ನು ಪ್ರಭು ಶ್ರೀರಾಮನಿಗಾಗಿ ಹೋರಾಡಿದರು ಎಂದು ಹೇಳುತ್ತಾರೆ. ಪರಾಶರನ್ ಅವರು ಎಂದಿಗೂ ವಿರೋಧಿಗಳ ವಿರುದ್ಧ ದ್ವೇಷಭಾವವನ್ನು ತೋರಿಸಲಿಲ್ಲ. ಅವರು ವಿರೋಧ ಪಕ್ಷದ ವಕೀಲರಿಗೂ ಅಷ್ಟೇ ಗೌರವವನ್ನು ನೀಡಿದರು. ನ್ಯಾಯಾಲಯದ ಹೊರಗೆ ವೈರತ್ವವನ್ನು ಇಟ್ಟುಕೊಳ್ಳದಿರುವುದು ಸನಾತನ ಧರ್ಮದ ಸುಂದರ ಪರಂಪರೆಯಾಗಿದೆ,” ಎಂದು ಅವರು ಹೇಳಿದರು. ‘ನ್ಯಾಯಾಧೀಶರು ಮತ್ತು ವಕೀಲರು ನ್ಯಾಯಾಲಯದ ಹೊರಗೆ ಮೊಕದ್ದಮೆಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸಬೇಕು. ಪರಾಶರನ್ ಅವರು ಎಂದಿಗೂ ಮಾಧ್ಯಮಗಳಿಗೆ ಸಂದರ್ಶನ ನೀಡಲಿಲ್ಲ. ವಕೀಲರು ನ್ಯಾಯಾಲಯದಲ್ಲಿ ಮಾತನಾಡಬೇಕು ಮತ್ತು ನ್ಯಾಯಾಧೀಶರು ಕೇವಲ ತಮ್ಮ ನಿರ್ಣಯಗಳ ಮೂಲಕ ಮಾತನಾಡಬೇಕು’ ಎಂದೂ ಅವರು ಹೇಳಿದರು.