ದೇವಸ್ಥಾನಗಳಲ್ಲಿನ ಕಾಣಿಕೆಯ ಹಣ ದೇವರಿಗೆ ಸೇರಿದ್ದು, ಸರಕಾರಕ್ಕಲ್ಲ!

  • ಹಿಮಾಚಲ ಪ್ರದೇಶ: ಸರಕಾರಿ ಯೋಜನೆಗಳಿಗೆ ದೇವಸ್ಥಾನಗಳ ಹಣ ಖರ್ಚು; ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಛೀಮಾರಿ!

  • ದೇವಸ್ಥಾನಗಳ ಹಣವನ್ನು ರಸ್ತೆ, ಸೇತುವೆ ಅಥವಾ ಯಾವುದೇ ಖಾಸಗಿ ಉದ್ಯಮಗಳಿಗೆ ಬಳಸಬಾರದೆಂದು ಕೋರ್ಟ್ ಆದೇಶ !

ಶಿಮ್ಲಾ (ಹಿಮಾಚಲ ಪ್ರದೇಶ) – ಭಕ್ತರು ನೀಡಿದ ದೇಣಿಗೆಯನ್ನು ಕೇವಲ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿಯೇ ಬಳಸಬೇಕು. ದೇಣಿಗೆಯ ಹಣ ದೇವರಿಗೆ ಸೇರಿದ್ದು, ಸರಕಾರಕ್ಕಲ್ಲ. ಈ ಹಣವನ್ನು ಇನ್ನು ಮುಂದೆ ರಸ್ತೆ, ಸೇತುವೆ ಅಥವಾ ಯಾವುದೇ ಖಾಸಗಿ ಉದ್ಯಮಗಳಿಗೆ ಬಳಸುವಂತಿಲ್ಲ ಎಂದು ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ದೇವಸ್ಥಾನದ ಹಣವನ್ನು ಬಳಸಬಹುದಾದ ೩೧ ಕ್ಷೇತ್ರಗಳ ವಿಸ್ತೃತ ಪಟ್ಟಿಯನ್ನು ನ್ಯಾಯಾಲಯ ಪ್ರಕಟಿಸಿದೆ.

ದೇವಸ್ಥಾನಗಳ ಹಣವನ್ನು ಮುಖ್ಯವಾಗಿ ವೇದ ಮತ್ತು ಯೋಗ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ!

1. ನ್ಯಾಯಾಲಯವು, ಈ ಹಣವನ್ನು ಮುಖ್ಯವಾಗಿ ವೇದ ಮತ್ತು ಯೋಗ ಶಿಕ್ಷಣದ ಅಧ್ಯಯನ, ಪ್ರಸಾರ ಮತ್ತು ಅಗತ್ಯ ಸೌಲಭ್ಯಗಳ ನಿರ್ಮಾಣಕ್ಕಾಗಿ ಬಳಸಲಾಗುವುದು ಎಂದು ಹೇಳಿದೆ. ಅಲ್ಲದೆ, ದೇವಸ್ಥಾನಗಳ ನಿರ್ವಹಣೆ, ಅರ್ಚಕರ ವೇತನ ಮತ್ತು ಸಾಮಾಜಿಕ ವಿಕೃತಿಗಳನ್ನು ನಾಶಪಡಿಸಲು ಇದನ್ನು ಉಪಯೋಗಿಸಲಾಗುವುದು.

೨. ಜಾತಿಭೇದ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುವ ಉಪಕ್ರಮಗಳನ್ನು ಪ್ರಾರಂಭಿಸುವಂತೆ ನ್ಯಾಯಾಲಯವು ವಿಶೇಷವಾಗಿ ಆದೇಶ ನೀಡಿದೆ.

ದೇವಸ್ಥಾನಗಳಿಂದ ಮಾಸಿಕ ಆದಾಯ ಮತ್ತು ವೆಚ್ಚದ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು ಕಡ್ಡಾಯ!

ದೇವಸ್ಥಾನಗಳು ಶಿಕ್ಷಣ ಮತ್ತು ಸಮಾಜ ಕಲ್ಯಾಣದ ಕೇಂದ್ರಗಳಾಗಿವೆ ಎಂದು ನ್ಯಾಯಾಲಯವು ಹೇಳಿದೆ. ಭಕ್ತರ ನಂಬಿಕೆ ಉಳಿಯಲು, ಪ್ರತಿ ದೇವಸ್ಥಾನವು ತನ್ನ ಮಾಸಿಕ ಆದಾಯ ಮತ್ತು ವೆಚ್ಚದ ಮಾಹಿತಿ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಸಾರ್ವಜನಿಕವಾಗಿ ಫಲಕದ ಮೇಲೆ ಅಥವಾ ವೆಬ್‌ಸೈಟ್‌ನಲ್ಲಿ ವಿವರಿಸುವುದು ಕಡ್ಡಾಯವಾಗಿದೆ.

ದೇವಸ್ಥಾನದ ನಿಧಿಯ ದುರುಪಯೋಗವಾದರೆ, ಸಂಪೂರ್ಣ ಹಣವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಲಾಗುವುದು! – ನ್ಯಾಯಾಲಯದ ಎಚ್ಚರಿಕೆ

ದೇವಸ್ಥಾನದ ನಿಧಿಯ ದುರುಪಯೋಗವು ಕ್ರಿಮಿನಲ್ ಅಪರಾಧವಾಗಿದೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅವಮಾನವಾಗಿದೆ ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟ ಎಚ್ಚರಿಕೆ ನೀಡಿದೆ. ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯು ಈ ನಿಧಿಯನ್ನು ದುರುಪಯೋಗಪಡಿಸಿಕೊಂಡರೆ, ಆ ಸಂಪೂರ್ಣ ಹಣವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಲಾಗುವುದು.

ನಿಧಿಯ ದುರುಪಯೋಗ ನಡೆದದ್ದು ಎಲ್ಲಿ?

ಲಭ್ಯ ಮಾಹಿತಿಯ ಪ್ರಕಾರ, ದೇವಸ್ಥಾನಗಳ ದೇಣಿಗೆ ನಿಧಿಯನ್ನು ಇಲ್ಲಿಯವರೆಗೆ ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಸರಕಾರಿ ಕಲ್ಯಾಣ ಯೋಜನೆಗಳು ಮತ್ತು ಸಾರ್ವಜನಿಕ ಕಟ್ಟಡಗಳ ನಿರ್ಮಾಣದಂತಹ ಅಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಇದರ ಜೊತೆಗೆ, ವೈಯಕ್ತಿಕ ಲಾಭಕ್ಕಾಗಿ, ಖಾಸಗಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಮತ್ತು ದೇವಸ್ಥಾನಕ್ಕೆ ಬರುವ ಗಣ್ಯ ಅತಿಥಿಗಳಿಗಾಗಿ ದುಬಾರಿ ಉಡುಗೊರೆಗಳನ್ನು ಖರೀದಿಸಲು ಸಹ ಈ ನಿಧಿಯನ್ನು ಬಳಸಲಾಗುತ್ತಿತ್ತು. ಈ ಎಲ್ಲ ಖರ್ಚುಗಳ ಮೇಲೆ ತಕ್ಷಣವೇ ನಿಷೇಧ ಹೇರುವಂತೆ ನ್ಯಾಯಾಲಯ ಆದೇಶ ನೀಡಿದೆ.

 

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದಿಂದಾಗಿಯೇ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಈ ನಿರ್ಣಯವನ್ನು ಇಡೀ ದೇಶದ ಎಲ್ಲಾ ದೇವಸ್ಥಾನಗಳಿಗೆ ಅನ್ವಯಿಸಬೇಕು ಮತ್ತು ಹಿಂದೂಗಳ ಧಾರ್ಮಿಕ ಸಂಘಟನೆಗಳು, ಸಂತರು ಈ ಕುರಿತು ವ್ಯಾಪಕ ಜನ ಆಂದೋಲನ ಪ್ರಾರಂಭಿಸಬೇಕು!