ಅತ್ಯಾಧುನಿಕ ಯುದ್ಧನೌಕೆಗಳಾದ ‘ಉದಯಗಿರಿ’ ಮತ್ತು ‘ಹಿಮಗಿರಿ’ ಭಾರತೀಯ ನೌಕಾಪಡೆಗೆ ಸೇರ್ಪಡೆ!

ನವದೆಹಲಿ – ಹಿಂದೂ ಮಹಾಸಾಗರದಲ್ಲಿ ಭಾರತದ ಶಕ್ತಿ ಈಗ ಮತ್ತಷ್ಟು ಹೆಚ್ಚಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಶಾಖಪಟ್ಟಣಂ ನೌಕಾನೆಲೆಯಲ್ಲಿ ‘ಉದಯಗಿರಿ’ ಮತ್ತು ‘ಹಿಮಗಿರಿ’ ಎಂಬ ಅತ್ಯಾಧುನಿಕ ಯುದ್ಧನೌಕೆಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದರು. ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಎರಡು ವಿಭಿನ್ನ ನೌಕಾ ನಿರ್ಮಾಣ ಕಂಪನಿಗಳಿಂದ ತಯಾರಿಸಲಾದ ಈ ಎರಡು ಪ್ರಮುಖ ಯುದ್ಧನೌಕೆಗಳನ್ನು ಒಂದೇ ಬಾರಿಗೆ ಕಾರ್ಯಾರಂಭ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ. ಇದು ಭಾರತೀಯ ನೌಕಾಪಡೆಯ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸಿದ್ದು, ಈ ಯುದ್ಧನೌಕೆಗಳು ಸಂಪೂರ್ಣವಾಗಿ ದೇಶಿ ನಿರ್ಮಿತವಾಗಿವೆ. ಈ ಎರಡೂ ಯುದ್ಧನೌಕೆಗಳ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯ ಇನ್ನಷ್ಟು ಬಲಗೊಳ್ಳಲಿದೆ.