ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದ ಕೊಳದಲ್ಲಿ ಮುಸ್ಲಿಂ ಯುವತಿ ಕಾಲು ತೊಳೆದಿದ್ದರಿಂದ ವಿರೋಧ : Guruvayur Temple Controversy

  • ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ನಂತರ ವಿರೋಧ

  • ದೇವಸ್ಥಾನದ ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು

ಜಾಸ್ಮಿನ್ ಜಾಫರ್

ತ್ರಿಶೂರ (ಕೇರಳ) – ಇಲ್ಲಿನ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದೊಳಗೆ ಮುಸ್ಲಿಂ ಯುವತಿಯೊಬ್ಬಳು ಪ್ರವೇಶಿಸಿ, ಚಿತ್ರೀಕರಣ ಮಾಡಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ದೇವಸ್ಥಾನದ ಕೊಳದಲ್ಲಿ ಕಾಲು ತೊಳೆಯುತ್ತಿರುವುದು ಕಂಡುಬಂದಿದೆ. ಆದ್ದರಿಂದ, ದೇವಸ್ಥಾನದ ಸಂಪ್ರದಾಯವನ್ನು ಉಲ್ಲಂಘಿಸಿದ್ದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದೇವಸ್ಥಾನದ ಕೊಳವನ್ನು ಪೂಜಾ ಸ್ಥಳದ ಭಾಗವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅಲ್ಲಿ ಅನುಮತಿಯಿಲ್ಲದೆ ಚಿತ್ರೀಕರಣ ಮಾಡುವುದು ನಿಷಿದ್ಧವಾಗಿದೆ. ಈ ಯುವತಿಯ ಹೆಸರು ಜಾಸ್ಮಿನ್ ಜಾಫರ್ ಮತ್ತು ಆಕೆ ಓರ್ವ ಬ್ಲಾಗರ್ ಆಗಿದ್ದಾರೆ. ಅವರು ‘ಬಿಗ್ ಬಾಸ್ ಮಲಯಾಳಂ’ನ ಆರನೇ ಸೀಸನ್‌ನಲ್ಲಿ ಭಾಗವಹಿಸಿ ಉಪವಿಜೇತರಾಗಿದ್ದರು.

ಜಾಸ್ಮಿನ್ ಜಾಫರ್ ಕ್ಷಮೆ ಯಾಚಿಸಿದ್ದಾರೆ!

ಜಾಸ್ಮಿನ್ ಜಾಫರ್ ಮೂರು ದಿನಗಳ ಹಿಂದೆ ತಮ್ಮ ಇನ್‌ ಸ್ಟಾಗ್ರಾಮ್ ಖಾತೆಯಲ್ಲಿ ದೇವಸ್ಥಾನದ ವಿಡಿಯೋವನ್ನು ಹಂಚಿಕೊಂಡಿದ್ದರು. ವಿವಾದ ಸೃಷ್ಟಿಯಾದ ನಂತರ, ಜಾಸ್ಮಿನ್ ಜಾಫರ್ ಇನ್‌ ಸ್ಟಾಗ್ರಾಮ್ ಮೂಲಕ ಕ್ಷಮೆಯಾಚಿಸಿದರು. ಅವರು, “ನನ್ನ ವಿಡಿಯೋದಿಂದ ನನ್ನನ್ನು ಪ್ರೀತಿಸುವ ಜನರಿಗೆ ತೊಂದರೆಯಾಗಿದೆ. ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅಜ್ಞಾನದಿಂದ ಮಾಡಿದ ಈ ತಪ್ಪಿಗೆ ನಾನು ಎಲ್ಲರನ್ನೂ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಬರೆದಿದ್ದಾರೆ.