ಮಂಗಳೂರು: ಸೀಟ್ ಬೆಲ್ಟ್ ಇಲ್ಲದಿದ್ರೆ ಡಬಲ್ ಫೈನ್ !

ಮಂಗಳೂರು : ಅಪಘಾತದ ಘಟನೆಗಳಲ್ಲಿ ಸಾವುನೋವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಕಾರಿನಲ್ಲಿ ಒಬ್ಬ ಪ್ರಯಾಣಿಕ ಕೂಡ ಸೀಟ್ ಬೆಲ್ಟ್ ಧರಿಸದಿದ್ದರೆ, ವಾಹನದ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಅಳವಡಿಸಲಾದ AI ಕ್ಯಾಮರಾಗಳು ಈ ನಿಯಮವನ್ನು ಉಲ್ಲಂಘಿಸುವವರನ್ನು ಪತ್ತೆಹಚ್ಚಿ, ಅವರ ಮೊಬೈಲ್‌ಗೆ ದಂಡದ ನೋಟಿಸ್ ಕಳುಹಿಸುತ್ತವೆ.

ಇ-ಚಲನ್‌ ಮೂಲಕ ದಂಡ ಸಂದೇಶ ರವಾನೆ

ಸದ್ಯ, ಮಂಗಳೂರಿನಲ್ಲಿ ಪ್ರತಿದಿನ ವಿಧಿಸಲಾಗುವ ಸುಮಾರು 1 ಸಾವಿರ ಇ-ಚಲನ್‌ಗಳಲ್ಲಿ 300 ಇ-ಚಲನ್‌ಗಳು ಸೀಟ್ ಬೆಲ್ಟ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದ್ದಾಗಿವೆ. ನಿಯಮ ಉಲ್ಲಂಘನೆ ಮಾಡಿದರೆ, ವಾಹನದ ಮಾಲೀಕರಿಗೆ ಫೋಟೋ, ಸಮಯ ಮತ್ತು ಸ್ಥಳದ ವಿವರಗಳಿರುವ ಇ-ಚಲನ್‌ ಅನ್ನು SMS ಮೂಲಕ ಕಳುಹಿಸಲಾಗುತ್ತದೆ. ಈ ಇ-ಚಲನ್‌ಗೆ ₹500 ದಂಡ ಇರುತ್ತದೆ.

ಹಿಂಬದಿ ಕುಳಿತರವೂ ಸೀಟ್‌ ಬೆಲ್ಟ್‌ ಹಾಕುವುದು ಸುರಕ್ಷಿತ

ಹಿಂಬದಿ ಸೀಟ್‌ನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸದ್ಯ ದಂಡ ವಿಧಿಸುತ್ತಿಲ್ಲ, ಆದರೆ ಕಾನೂನಿನ ಪ್ರಕಾರ ಇದು ಕೂಡ ಕಡ್ಡಾಯವಾಗಿದೆ. ಹಿಂಬದಿ ಸೀಟ್ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಅಪಘಾತದಲ್ಲಿ ಗಂಭೀರ ಗಾಯಗಳಿಗೆ ಒಳಗಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಜನರಿಂದ ಮಿಶ್ರ ಪ್ರತಿಕ್ರಿಯೆ

ಈ ಕಟ್ಟುನಿಟ್ಟಿನ ಕ್ರಮದ ಹಿಂದಿನ ಮುಖ್ಯ ಕಾರಣವೆಂದರೆ, ರಸ್ತೆ ಅಪಘಾತಗಳಲ್ಲಿ ಆಗುತ್ತಿರುವ ಸಾವು-ನೋವುಗಳನ್ನು ಕಡಿಮೆ ಮಾಡುವುದು. 2022ರಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿನ ನಂತರ, ಹಿಂಬದಿ ಸೀಟ್ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಈ ಕ್ರಮವನ್ನು ಕೆಲವರು ಸ್ವಾಗತಿಸಿದರೆ, ಇನ್ನೂ ಕೆಲವರು ದಂಡ ವಿಧಿಸುವ ಮೊದಲು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಹಿಂಬದಿ ಸೀಟ್‌ನಲ್ಲಿ ಸೀಟ್ ಬೆಲ್ಟ್ ಧರಿಸುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇದು ಗಂಭೀರ ಗಾಯಗಳನ್ನು ತಪ್ಪಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.