ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ!

ಕೀವ್ (ಯುಕ್ರೇನ್) – ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ರಾಷ್ಟ್ರಾಧ್ಯಕ್ಷ ಪುಟಿನ್ ಅವರ ನಡುವೆ ಯುಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವ ಕುರಿತು ಅಮೆರಿಕಾದ ಅಲಸ್ಕಾ ರಾಜ್ಯದಲ್ಲಿ ಸಭೆ ನಡೆಯಿತು. ಈ ಇಬ್ಬರೂ ನಾಯಕರ ನಡುವಿನ ಚರ್ಚೆಯು ಯಾವುದೇ ಕದನ ವಿರಾಮ ಒಪ್ಪಂದವಿಲ್ಲದೆ ಕೊನೆಗೊಂಡ ನಂತರ, ಈಗ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಮುಂದಿನ ವಾರ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಝೆಲೆನ್ಸ್ಕಿ, “ಆಗಸ್ಟ್ 18 ರಂದು ನಾನು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಲಿದ್ದು, ಅವರೊಂದಿಗೆ ರಷ್ಯಾ-ಯುಕ್ರೇನ್ ಯುದ್ಧವನ್ನು ನಿಲ್ಲಿಸುವ ಕುರಿತು ಎಲ್ಲ ವಿವರಗಳನ್ನು ಚರ್ಚಿಸಲಿದ್ದೇನೆ” ಎಂದು ಹೇಳಿದರು. ಯುಕ್ರೇನ್, ಅಮೆರಿಕಾ ಮತ್ತು ರಷ್ಯಾ ನಡುವೆ ತ್ರಿಪಕ್ಷೀಯ ಸಭೆ ನಡೆಸುವ ಟ್ರಂಪ್ ಅವರ ಪ್ರಸ್ತಾವವನ್ನು ಅವರು ಬೆಂಬಲಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಶ್ವೇತಭವನದಲ್ಲಿ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ಕೊನೆಯ ಸಭೆ ನಡೆದಿತ್ತು. ಈ ಸಭೆಯಲ್ಲಿ ರಷ್ಯಾದೊಂದಿಗಿನ ಸಂಘರ್ಷದ ಕುರಿತು ಟ್ರಂಪ್ ಅವರು ಝೆಲೆನ್ಸ್ಕಿ ಅವರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು.