ಬಾಂಗ್ಲಾದೇಶದ ನುಸುಳುಕೋರರ ಮೇಲಿನ ಕ್ರಮಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ

ನವದೆಹಲಿ – ಬಾಂಗ್ಲಾದೇಶದ ನುಸುಳುಕೋರರು ಎಂಬ ಸಂಶಯದ ಮೇಲೆ ಬಂಗಾಳಿ ಭಾಷಿಕ ವಲಸೆ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಳ್ಳುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಾಲಯವು, ನುಸುಳುಕೋರರನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ, ಇಲ್ಲದಿದ್ದರೆ ಅವರು ತಪ್ಪಿಸಿಕೊಳ್ಳಬಹುದು. ಆದ್ದರಿಂದ, ಈ ಕ್ರಮಕ್ಕೆ ನಾವು ತಡೆಯಾಜ್ಞೆ ನೀಡುವುದಿಲ್ಲ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯ ಎತ್ತಿದ ಪ್ರಮುಖ ಅಂಶಗಳು!

೧. ಅಕ್ರಮ ನುಸುಳುಕೋರ ಗಡಿ ದಾಟಿ ಬಂದರೆ ಮತ್ತು ಅವನನ್ನ ವಶಕ್ಕೆ ತೆಗೆದುಕೊಳ್ಳದಿದ್ದರೆ, ಅವನು ಸ್ಥಳೀಯರಲ್ಲಿ ಸೇರಿಕೊಂಡು ತಪ್ಪಿಸಿಕೊಳ್ಳಬಹುದು. ಅಂತವರನ್ನು ಮತ್ತೆ ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಹೀಗಾದರೆ, ಇದು ಕೇವಲ ಭದ್ರತಾ ಅಪಾಯವಲ್ಲ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೂ ತೊಂದರೆಯಾಗುತ್ತದೆ.

೨. ನುಸುಳುಕೋರರನ್ನು ಗುರುತಿಸುವುದು, ವಿಚಾರಣೆ ಮಾಡುವುದು ಮತ್ತು ಕಾನೂನುಬದ್ಧ ಮಾರ್ಗದಲ್ಲಿ ಅವರನ್ನು ವಾಪಸ್ ಕಳುಹಿಸುವುದು ಸೂಕ್ತ ಕ್ರಮವಾಗಿದೆ.

೩. ಈ ಪ್ರಕರಣದಲ್ಲಿ ಯಾವುದೇ ಮಧ್ಯಂತರ ಆದೇಶವನ್ನು ಅವಸರದಲ್ಲಿ ನೀಡುವುದು ಅಪಾಯಕಾರಿ ಆಗಬಹುದು.

ಅರ್ಜಿದಾರರ ಹೇಳಿಕೆ!

ಈ ಪ್ರಕರಣವು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದೆ, ಇದರಲ್ಲಿ ಅನೇಕ ಬಂಗಾಳಿ ಭಾಷಿಕ ವಲಸೆ ಕಾರ್ಮಿಕರನ್ನು ತಪ್ಪಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅರ್ಜಿದಾರರ ಪ್ರಕಾರ, ಇವರಲ್ಲಿ ಅನೇಕರು ಭಾರತೀಯ ನಾಗರಿಕರಾಗಿದ್ದು, ಅವರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೈಮಾಲ್ಯ ಬಾಗ್ಚಿ ಅವರ ನ್ಯಾಯಪೀಠವು ಈ ಅರ್ಜಿಯ ಮುಂದಿನ ವಿಚಾರಣೆಯನ್ನು ನಡೆಸುವುದಾಗಿ ಭರವಸೆ ನೀಡಿದೆ; ಆದರೆ ಸದ್ಯಕ್ಕೆ ಅದನ್ನು ತಡೆಹಿಡಿಯಲು ನಿರಾಕರಿಸಿದೆ.