ಆಗಸ್ಟ್ 21 ರಿಂದ ವಿದೇಶಾಂಗ ಸಚಿವರ ರಷ್ಯಾ ಪ್ರವಾಸ!

ನವದೆಹಲಿ – ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರಣದಿಂದಾಗಿ ಅಮೇರಿಕಾ-ಭಾರತ ಸಂಬಂಧಗಳು ಪ್ರಸ್ತುತ ಸಾಕಷ್ಟು ಹದಗೆಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇತ್ತೀಚೆಗೆ ರಷ್ಯಾಗೆ ಭೇಟಿ ನೀಡಿದ್ದರು. ಈಗ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಆಗಸ್ಟ್ 21 ರಿಂದ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ಮೇಲೆ ಶೇ.50% ವ್ಯಾಪಾರ ಆಮದು ಸುಂಕ ವಿಧಿಸಿದ ನಂತರ ಭಾರತ-ರಷ್ಯಾ ನಡುವಿನ ಸಂಬಂಧಗಳು ಬಲಗೊಳ್ಳುತ್ತಿವೆ ಎಂಬ ಚರ್ಚೆ ನಡೆಯುತ್ತಿದೆ. ಆ ದೃಷ್ಟಿಯಿಂದಲೂ ಜೈಶಂಕರ್ ಅವರ ಪ್ರವಾಸ ಮಹತ್ವ ಪಡೆದಿದೆ.
ಅಜಿತ್ ದೋವಲ್ ಅವರು ರಷ್ಯಾ ಪ್ರವಾಸದ ಸಮಯದಲ್ಲಿ ವಿವಿಧ ಅಧಿಕಾರಿಗಳು ಹಾಗೂ ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸಹ ಭೇಟಿಯಾಗಿದ್ದರು. ಈಗ ಡಾ. ಜೈಶಂಕರ್ ಅವರು ತಮ್ಮ ಪ್ರವಾಸದ ಸಮಯದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರು ಸ್ವತಃ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದೃಷ್ಟಿಯಿಂದ ಇದು ಅವರ ಪ್ರವಾಸದ ಪೂರ್ವ ಸಿದ್ಧತೆ ಎಂದು ಹೇಳಲಾಗುತ್ತಿದೆ.