ಅನಾರೋಗ್ಯವನ್ನು ಮರೆಮಾಚಿ ಪತ್ನಿ ವಿವಾಹವಾಗುವುದು ವಂಚನೆ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಓರ್ವ ದಂಪತಿಯ ವಿವಾಹ ರದ್ದು

ಜೈಪುರ (ರಾಜಸ್ಥಾನ) – ವಿವಾಹಕ್ಕಿಂತ ಮೊದಲು ಮಹಿಳೆಯು ತನ್ನ ಗಂಭೀರ ಕಾಯಿಲೆಯ ಬಗ್ಗೆ ಆಕೆಯ ಭಾವಿ ಪತಿ ಮತ್ತು ಕುಟುಂಬಕ್ಕೆ ಮಾಹಿತಿ ನೀಡದ ಕಾರಣ ಓರ್ವ ದಂಪತಿಯ ವಿವಾಹವನ್ನು ರಾಜಸ್ಥಾನ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಇದರ ಜೊತೆಗೆ ನ್ಯಾಯಾಲಯವು ಪತಿಯನ್ನು ಎಲ್ಲ ಕ್ರಿಮಿನಲ್ ಮತ್ತು ಆರ್ಥಿಕ ಪ್ರಕರಣಗಳಿಂದ ಮುಕ್ತಗೊಳಿಸಿದೆ. ಮಹಿಳೆಯು ‘ಸ್ಕಿಜೋಫ್ರೇನಿಯಾ’ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ನ್ಯಾಯಾಲಯವು, ‘ಸ್ಕಿಜೋಫ್ರೇನಿಯಾ’ ಕೇವಲ ತಾತ್ಕಾಲಿಕ ಖಿನ್ನತೆಯಲ್ಲ, ಅದು ಒಂದು ಗಂಭೀರ ಮಾನಸಿಕ ಕಾಯಿಲೆ. ಈ ಕಾಯಿಲೆಯು ಓರ್ವ ವ್ಯಕ್ತಿಯನ್ನು ಸಾಮಾನ್ಯ ದಾಂಪತ್ಯ ಜೀವನ ನಡೆಸುವುದರಿಂದ ತಡೆಯಬಹುದು. ಆದ್ದರಿಂದ, ವಿವಾಹಕ್ಕಿಂತ ಮೊದಲು ಮಹಿಳೆಯ ಈ ಗಂಭೀರ ಕಾಯಿಲೆಯ ಬಗ್ಗೆ ಆಕೆಯ ಭಾವಿ ಪತಿಯಿಂದ ಮರೆಮಾಡುವುದು ಹಿಂದೂ ವಿವಾಹ ಕಾಯಿದೆಯ ಕಲಂ 12(1)(ಸಿ) ಪ್ರಕಾರ ವಂಚನೆಯಾಗಿದೆ ಎಂದು ಹೇಳಿದೆ.

ಯಾವ ಪ್ರಕರಣ?

2013 ರಲ್ಲಿ ರಾಜಸ್ಥಾನದ ಕೋಟಾದ ಓರ್ವ ಮಹಿಳೆಯು ಚಿತ್ತೋಡಗಢದ ಓರ್ವ ಪುರುಷನೊಂದಿಗೆ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆಯು ತನ್ನ ಗಂಡನ ಮನೆಯಲ್ಲಿ ಅಸಾಮಾನ್ಯ ವರ್ತನೆ ತೋರಿದರು ಎಂದು ಆರೋಪಿಸಲಾಗಿದೆ. ಈ ಪ್ರಕರಣ ನ್ಯಾಯಾಲಯಕ್ಕೆ ಹೋಯಿತು. ಕೋಟಾದ ಕುಟುಂಬ ನ್ಯಾಯಾಲಯವು 2019 ರಲ್ಲಿ ಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ದರಿಂದ, ಪೀಡಿತ ಪತಿಯು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದರು. ಕೊನೆಗೆ 12 ವರ್ಷಗಳ ನ್ಯಾಯಾಲಯ ಹೋರಾಟದ ನಂತರ ಪತಿಗೆ ನ್ಯಾಯ ಸಿಕ್ಕಿತು. ಕಾನೂನು ತಜ್ಞರ ಪ್ರಕಾರ, ಈ ತೀರ್ಪು ಒಂದು ಮಾದರಿ ಉದಾಹರಣೆಯಾಗಿದೆ; ಏಕೆಂದರೆ ಇದರಲ್ಲಿ ನ್ಯಾಯಾಲಯವು ಮಾನಸಿಕ ಕಾಯಿಲೆಯನ್ನು ವಿವಾಹ ರದ್ದುಗೊಳಿಸಲು ಒಂದು ಕಾರಣವೆಂದು ಪರಿಗಣಿಸಿದೆ, ಹಾಗೆಯೇ ಪತಿಯನ್ನು ಎಲ್ಲ ಕ್ರಿಮಿನಲ್ ಮತ್ತು ಆರ್ಥಿಕ ಜವಾಬ್ದಾರಿಗಳಿಂದಲೂ ಮುಕ್ತಗೊಳಿಸಿದೆ.