Fatehpur Makbara : ಫತೇಪುರ (ಉತ್ತರಪ್ರದೇಶ)ದಲ್ಲಿರುವ ಗೋರಿ ಈ ಹಿಂದೆ ಶಿವನ ದೇವಾಲಯವಾಗಿತ್ತು ಎಂದು ಹೇಳಿ ಹಿಂದೂ ಸಂಘಟನೆಗಳಿಂದ ಗೋರಿ ಧ್ವಂಸ !

(ಗೋರಿ ಎಂದರೆ ಮುಸ್ಲಿಂ ವ್ಯಕ್ತಿಯನ್ನು ಮಣ್ಣು ಮಾಡಿದ ನಂತರ ಆ ಸ್ಥಳದಲ್ಲಿ ನಿರ್ಮಿಸಲಾದ ಕಟ್ಟಡ.)

ಫತೇಪುರ (ಉತ್ತರ ಪ್ರದೇಶ) – ಇಲ್ಲಿರುವ ನವಾಬ್ ಅಬ್ದುಲ್ ಸಮದ್ ಗೋರಿಯು ಈ ಹಿಂದೆ ಶಿವ ದೇವಾಲಯವಾಗಿತ್ತು ಎಂದು ಹೇಳಿ, ಆಗಸ್ಟ್ 11 ರಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಗೋರಿಯನ್ನು ಧ್ವಂಸಗೊಳಿಸಿದರು. ಅಲ್ಲದೆ, ಇಲ್ಲಿ ಭಗವಾನ್ ಶಿವನಿಗೆ ಪೂಜೆ ಸಲ್ಲಿಸಿದರು. ಗೋರಿಯ ಸುರಕ್ಷತೆಗಾಗಿ ಆಡಳಿತವು ತಡೆಗಳನ್ನು ಹಾಕಿತ್ತು, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರ್ಯಕರ್ತರ ಗುಂಪಿನ ಮುಂದೆ ಈ ಎಲ್ಲ ಕ್ರಮಗಳು ವಿಫಲವಾದವು. ವಿಧ್ವಂಸಕ ಕೃತ್ಯದ ನಂತರ, ಇಲ್ಲಿ ಕಲ್ಲು ತೂರಾಟದ ಘಟನೆಯೂ ನಡೆಯಿತು.

ಹಿಂದೂ ಸಂಘಟನೆಗಳ ಪ್ರಕಾರ, ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಭಗವಾನ್ ಶಿವ ಮತ್ತು ಶ್ರೀ ಕೃಷ್ಣನ ದೇವಸ್ಥಾನವಿತ್ತು. ದೇವಸ್ಥಾನವನ್ನು ಬದಲಾಯಿಸಿ ಗೋರಿಯನ್ನು ನಿರ್ಮಿಸಲಾಗಿದೆ. ಭಾಜಪದ ಜಿಲ್ಲಾಧ್ಯಕ್ಷರು ಈ ಗೋರಿಯು ಈ ಹಿಂದೆ ದೇವಸ್ಥಾನವಾಗಿತ್ತು ಎಂದು ಹೇಳಿದ್ದರು, ಅದರ ನಂತರ ಇಲ್ಲಿ ವಿವಾದ ಉಂಟಾಯಿತು. ದೇವಸ್ಥಾನದ ದಾವೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಅಥವಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿಲ್ಲ.

ಗೋರಿಯ ಮೇಲೆ ಕಮಲ ಮತ್ತು ತ್ರಿಶೂಲದ ಚಿಹ್ನೆಗಳು

ಈ ಗೋರಿಯ ಮೇಲೆ ಕಮಲದ ಹೂವು ಮತ್ತು ತ್ರಿಶೂಲದಂತಹ ಚಿಹ್ನೆಗಳಿರುವುದರಿಂದ ಇದು ದೇವಸ್ಥಾನವಾಗಿದೆ ಎಂಬುದಕ್ಕೆ ಇದು ಪುರಾವೆ ಎಂದು ಹಿಂದೂ ಸಂಘಟನೆಗಳು ಹೇಳಿದೆ.