‘ಉದಯಪುರ ಫೈಲ್ಸ್’ ನಿರ್ಮಾಪಕರಿಗೆ ಕೊಲೆ ಬೆದರಿಕೆ! Kanhaiya Lal Tailor Murder Producer Death Threat

ಪೊಲೀಸರಿಂದ ಭದ್ರತೆ

ನೋಯ್ಡಾ (ಉತ್ತರ ಪ್ರದೇಶ) – ‘ಉದಯಪುರ ಫೈಲ್ಸ್: ಕನ್ನಯ್ಯಲಾಲ್ ಟೈಲರ್ ಮರ್ಡರ್’ ಸಿನಿಮಾ ಬಿಡುಗಡೆಯಾದ ಎರಡನೇ ದಿನವೇ ಚಿತ್ರದ ನಿರ್ಮಾಪಕ ಅಮಿತ್ ಜಾನಿ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಕಚೇರಿ, ಕೇಂದ್ರ ಗೃಹ ಸಚಿವಾಲಯ ಮತ್ತು ಉತ್ತರಪ್ರದೇಶ ಪೊಲೀಸರ ಬಳಿ ಸಹಾಯ ಕೋರಿದ್ದಾರೆ.

ಅಂತರರಾಷ್ಟ್ರೀಯ ಸಂಖ್ಯೆಯಿಂದ ಬೆದರಿಕೆ!

ಸಿನಿಮಾ ಬಿಡುಗಡೆಯಾದ ಬಳಿಕ ತಮಗೆ ಅಂತರರಾಷ್ಟ್ರೀಯ ಸಂಖ್ಯೆಯಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಅಮಿತ್ ಜಾನಿ ಹೇಳಿದ್ದಾರೆ. ಮೊಹಮ್ಮದ್ ಪೈಗಂಬರ್ ಅವರಿಗೆ ಅವಮಾನ ಮಾಡಿದ್ದೀರಿ ಎಂದು ಆರೋಪಿಸಿ, ಬಾಂಬ್ ನಿಂದ ಉಡಾಯಿಸುವುದಾಗಿ, ಗುಂಡು ಹಾರಿಸುವುದಾಗಿ ಮತ್ತು ಜೀವಂತವಾಗಿ ಹೂಳುವುದಾಗಿ ಬೆದರಿಕೆ ಹಾಕಲಾಗಿದೆ. ಕರೆ ಮಾಡಿದ್ದ ವ್ಯಕ್ತಿ ತನ್ನ ಹೆಸರು ‘ಮೊಹಮ್ಮದ್ ತಬ್ರೇಜ್’ ಎಂದು ಹೇಳಿಕೊಂಡಿದ್ದು, ತಾನು ಬಿಹಾರದವನು ಎಂದು ಹೇಳಿದ್ದಾನೆ.

ಪೊಲೀಸರಿಗೆ ದೂರು ಮತ್ತು ಭದ್ರತೆ

ಬೆದರಿಕೆ ಕರೆಗಳ ನಂತರ ಅಮಿತ್ ಜಾನಿ ಅವರು ಉತ್ತರ ಪ್ರದೇಶದ ನೋಯ್ಡಾ ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬೆದರಿಕೆಗಳು ಮತ್ತು ಗುಪ್ತಚರ ಸಂಸ್ಥೆಗಳ ವರದಿಗಳ ಆಧಾರದ ಮೇಲೆ ಜಾನಿ ಅವರಿಗೆ ‘ವೈ’ ಕೆಟಗರಿ ಭದ್ರತೆ ನೀಡಲಾಗಿದೆ. ಅವರ ನೋಯ್ಡಾದ ಮನೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರನ್ನು ಸಹ ನಿಯೋಜಿಸಲಾಗಿದೆ.