ಹಿಂದೂ ದೇವತೆಗಳ ಅವಮಾನಿಸಲು ಸಾಧ್ಯವಿಲ್ಲ! – ಮದ್ರಾಸ್ ಉಚ್ಚ ನ್ಯಾಯಾಲಯ

  • ಫೇಸ್‌ಬುಕ್‌ನಲ್ಲಿ ಶ್ರೀಕೃಷ್ಣನ ಅವಮಾನ ಮಾಡಿದ ಪ್ರಕರಣ

  • ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ತಮಿಳುನಾಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ಒಬ್ಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಶ್ರೀಕೃಷ್ಣನ ಚಿತ್ರವನ್ನು ಬಳಸಿ ಅವಮಾನಕರ ಕಾಮೆಂಟ್ ಮಾಡಿದ್ದ. ಈ ಪ್ರಕರಣದಲ್ಲಿ ‘ಆರೋಪಿ ಸಿಗಲಿಲ್ಲ’ ಎಂದು ತಮಿಳುನಾಡು ಪೊಲೀಸರು ಅಂತಿಮ ವರದಿಯನ್ನು ಸಲ್ಲಿಸಿದ್ದರು. ಇದಕ್ಕೆ ಮದ್ರಾಸ್ ಉಚ್ಚ ನ್ಯಾಯಾಲಯ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಹಿಂದೂಗಳ ದೇವತೆಗಳನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ತೂತುಕುಡಿ ಪೊಲೀಸರು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಅವಸರದಲ್ಲಿ ಅಂತಿಮ ವರದಿ ಸಲ್ಲಿಸಿದ್ದಾರೆ. “ವಾಕ್ ಸ್ವಾತಂತ್ರ್ಯ ಎಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಎಂದಲ್ಲ, ಏಕೆಂದರೆ ಇದು ಧಾರ್ಮಿಕ ವೈಷಮ್ಯ ಮತ್ತು ಕಾನೂನು ಸುವ್ಯವಸ್ಥೆಗೆ ಅಪಾಯವನ್ನು ಉಂಟುಮಾಡಬಹುದು,” ಎಂದು ನ್ಯಾಯಾಲಯ ಹೇಳಿದೆ. ವರದಿಯನ್ನು ರದ್ದುಪಡಿಸಿ, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.

ಏನಿದು ಪ್ರಕರಣ?

2022ರ ಆಗಸ್ಟ್‌ನಲ್ಲಿ ಸತೀಶ ಕುಮಾರ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದ. ಅದರಲ್ಲಿ ಶ್ರೀಕೃಷ್ಣನು ಗೋಪಿಯರ ಬಟ್ಟೆಗಳನ್ನು ಮುಚ್ಚಿಡುವ ಪ್ರಸಂಗದ ಚಿತ್ರವಿತ್ತು, ಮತ್ತು ಅದರ ಜೊತೆಗೆ, ‘ಜನ್ಮಾಷ್ಟಮಿ ಎಂದರೆ ಸ್ನಾನ ಮಾಡುತ್ತಿದ್ದ ಮಹಿಳೆಯರ ಬಟ್ಟೆಗಳನ್ನು ಕದ್ದ ಹಬ್ಬ’ ಎಂದು ಬರೆಯಲಾಗಿತ್ತು. ಈ ಪೋಸ್ಟ್ ಮಾಡಿದ ನಂತರ ಪಿ. ಪರಮಶಿವನ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಇದರ ನಂತರ, ಈ ವರ್ಷದ ಫೆಬ್ರವರಿಯಲ್ಲಿ ಪೊಲೀಸರು ಕಿರಿಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಅದರಲ್ಲಿ, ಅವರು ಫೇಸ್‌ಬುಕ್‌ನ ‘ಮೆಟಾ’ ಸಂಸ್ಥೆಯನ್ನು ಸಂಪರ್ಕಿಸಿದ್ದರೂ ಖಾತೆದಾರರ ಮಾಹಿತಿ ಸಿಗಲಿಲ್ಲ ಎಂದು ಹೇಳಲಾಗಿತ್ತು. ನಂತರ ನ್ಯಾಯಾಲಯ ಈ ವರದಿಯನ್ನು ಸ್ವೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದರ ವಿರುದ್ಧ ಪರಮಶಿವನ ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಆ ಪುಟದಲ್ಲಿ ಈಗಾಗಲೇ ಕೆಲವು ವೈಯಕ್ತಿಕ ಮಾಹಿತಿ ಲಭ್ಯವಿದ್ದು, ಅದನ್ನು ಬಳಸಿಕೊಂಡು ಖಾತೆದಾರರನ್ನು ಹುಡುಕಬಹುದಿತ್ತು ಎಂದು ಉಚ್ಚ ನ್ಯಾಯಾಲಯ ಗಮನಿಸಿದೆ. ಅಂತಿಮ ವರದಿಯನ್ನು ಕೇವಲ ಔಪಚಾರಿಕವಾಗಿ ಸಲ್ಲಿಸಲಾಗಿದೆ. ಪ್ರಕರಣವನ್ನು ಮುಕ್ತಾಯಗೊಳಿಸುವಾಗ ಮ್ಯಾಜಿಸ್ಟ್ರೇಟ್ ಅವರು ವರದಿಯ ಮೇಲಿನ ಆಕ್ಷೇಪಣೆಗಳನ್ನು ಗಮನಿಸಿರಲಿಲ್ಲ, ಆದ್ದರಿಂದ ಅವರ ಆದೇಶ ಕಾನೂನುಬದ್ಧವಾಗಿ ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲ!

ದೇವತೆಗಳ ಚಿತ್ರದ ಬಗ್ಗೆ ಹೆಚ್ಚು ಸೂಕ್ಷ್ಮತೆ ತೋರಿಸಬೇಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲ ಎಂದು ಸರಕಾರ ಖಚಿತಪಡಿಸಿಕೊಳ್ಳಬೇಕು, ಎಂದು ನ್ಯಾಯಾಲಯ ತಿಳಿಸಿದೆ. ಹಿಂದೂ ದೇವತೆಗಳನ್ನು ಅವಮಾನಕರ ರೀತಿಯಲ್ಲಿ ತೋರಿಸುವುದು ಎಂದರೆ ಕೋಟ್ಯಂತರ ಜನರ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತರುವುದಾಗಿದೆ. ಇದು ಯಾವುದೇ ಪರಿಸ್ಥಿತಿಯಲ್ಲಿ ಸರಿಯಲ್ಲ. ಇದರಿಂದ ಧಾರ್ಮಿಕ ವೈಷಮ್ಯ ಮತ್ತು ಸಾಮಾಜಿಕ ಅಶಾಂತಿ ಹರಡಬಹುದು. ಧಾರ್ಮಿಕ ಚಿಹ್ನೆಗಳ ಮೇಲಿನ ಶ್ರದ್ಧೆಯನ್ನು ಪರಿಗಣಿಸಿದರೆ, ಅವುಗಳನ್ನು ಅವಮಾನಿಸುವುದರಿಂದ ಸಮಾಜದ ಒಂದು ದೊಡ್ಡ ವರ್ಗದ ಜನರಿಗೆ ನೋವಾಗಬಹುದು.

ಗೋಪಿಯರ ಬಟ್ಟೆ ಮುಚ್ಚಿಡುವ ಕಥೆ ಸಾಂಕೇತಿಕವಾಗಿದೆ

ನ್ಯಾಯಾಲಯವು, ಭಗವಾನ ಶ್ರೀಕೃಷ್ಣನು ಗೋಪಿಯರ ಬಟ್ಟೆಗಳನ್ನು ಮರೆಮಾಚುವ ಕಥೆ ಸಾಂಕೇತಿಕವಾಗಿದ್ದು, ಅದನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ ಎಂದು ಹೇಳಿದೆ. ಒಂದು ವ್ಯಾಖ್ಯಾನದ ಪ್ರಕಾರ, ಗೋಪಿಯರ ಭಕ್ತಿ ಲೌಕಿಕ ಆಕರ್ಷಣೆಗಿಂತ ಶ್ರೇಷ್ಠವೇ ಎಂಬುದನ್ನು ಪರೀಕ್ಷಿಸಲು ಶ್ರೀಕೃಷ್ಣನು ಈ ಪರೀಕ್ಷೆಯನ್ನು ಮಾಡಿದ್ದ. ಈ ಕಥೆಯು ಆಧ್ಯಾತ್ಮಿಕ ಸಾಧನೆ ಮತ್ತು ನಿರ್ಲಿಪ್ತತೆಯ ಮಹತ್ವವನ್ನು ತೋರಿಸುತ್ತದೆ.

ಸಂಪಾದಕೀಯ ನಿಲುವು

ಇಂತಹ ಪೊಲೀಸರನ್ನು ಕೇವಲ ತರಾಟೆಗೆ ತೆಗೆದುಕೊಂಡರೆ ಸಾಲದು, ಆರೋಪಿಯನ್ನು ಬೆಂಬಲಿಸಿದ ಕಾರಣಕ್ಕಾಗಿ ಶಿಕ್ಷೆಯನ್ನೂ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !