ಧರ್ಮ ಬದಲಾಯಿಸದೆ ಬೇರೆ ಧರ್ಮದನುಸಾರ ಮಾಡಿದ ವಿವಾಹ ಅಸಿಂಧು !

  • ಅಲಹಾಬಾದ್ ಹೈಕೋರ್ಟ್‌ನ ಒಂದು ಪ್ರಕರಣದಲ್ಲಿ ಮಹತ್ವದ ಟಿಪ್ಪಣಿ

  • ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸದೆ ಹಿಂದೂ ಹುಡುಗಿಯನ್ನು ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾದ ಪ್ರಕರಣ

ನವದೆಹಲಿ – ಧರ್ಮವನ್ನು ಬದಲಾಯಿಸದೆ ಬೇರೆ ಧರ್ಮದ ಪ್ರಕಾರ ಮಾಡಿದ ವಿವಾಹವು ಕಾನೂನುಬಾಹಿರವಾಗಿದೆ. ಅದನ್ನು ಕಾನೂನುಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ಇಂತಹ ಕೃತ್ಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಹೈಕೋರ್ಟ್ ಒಂದು ಪ್ರಕರಣದಲ್ಲಿ ಈ ಮಹ್ತವದ ಟಿಪ್ಪಣಿ ಮಾಡಿದೆ. ಆರ್ಯ ಸಮಾಜ ಮಂದಿರದಲ್ಲಿ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮತ್ತು ವಿವಾಹಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದರ ಅಡಿಯಲ್ಲಿ, ಸೋನು ಅಲಿಯಾಸ್ ಸಹನೂರ್ ಎಂಬ ಮುಸ್ಲಿಂ ಯುವಕನು ಹಿಂದೂ ಧರ್ಮವನ್ನು ಸ್ವೀಕರಿಸದೆ ಹಿಂದೂ ಪದ್ಧತಿಯ ಪ್ರಕಾರ ಹುಡುಗಿಯನ್ನು ಮದುವೆಯಾಗಿದ್ದಾನೆ. ಮುಂದಿನ ವಿಚಾರಣೆ ಆಗಸ್ಟ್ 29 ರಂದು ನಡೆಯಲಿದೆ.

1. ಅರ್ಜಿದಾರ ಸಹನೂರ್ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದ. ತಾನು ವಯಸ್ಕಳಾದ ಹುಡುಗಿಯನ್ನು ಮದುವೆಯಾಗಿದ್ದು, ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಆತ ಹೇಳಿಕೊಂಡಿದ್ದ.

2. ನ್ಯಾಯಾಲಯವು ಆರೋಪಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದೆ.

3. ಈ ಸಂದರ್ಭದಲ್ಲಿ, ಅಲಹಾಬಾದ್ ಹೈಕೋರ್ಟ್, ಅಪ್ರಾಪ್ತ ಜೋಡಿಗಳಿಗೆ ಅಥವಾ ಮತಾಂತರ ಮಾಡದೆ ಅಂತರಧರ್ಮೀಯ ಜೋಡಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿರುವ ‘ಆರ್ಯ ಸಮಾಜ ಸಂಸ್ಥೆಗಳ’ ಕುರಿತು ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶಿಸಿದೆ.