‘ಪದ್ಮಗಂಧಿ’ ಎಂಬ ಕಮಲ ಹೂವಿನ ಮೇಲೆ ಆಧಾರಿತವಾದ ಚಿತ್ರ ಶೀಘ್ರದಲ್ಲಿಯೇ ಪ್ರದರ್ಶನಗೊಳ್ಳಲಿದೆ!

  • ಸಂಸ್ಕೃತ, ಹಿಂದಿ ಮತ್ತು ಕನ್ನಡ ಈ 3 ಭಾಷೆಗಳಲ್ಲಿ ಪ್ರದರ್ಶನಗೊಳ್ಳಲಿದೆ

  • ಪ್ರಸಿದ್ಧ ಸಂಸ್ಕೃತ ವಿದ್ವಾಂಸರು, ಪ್ರಖರ ಹಿಂದುತ್ವವಾದಿ ಮತ್ತು ಮಾಜಿ ಶಾಸಕಿ ಡಾ. ಎಸ್.ಆರ್. ಲೀಲಾ ಅವರ ಲೇಖನ ಮತ್ತು ನಿರ್ಮಾಣ!

  • ಪ್ರಸಿದ್ಧ ನಿರ್ದೇಶಕ ಮತ್ತು ಸಂಸ್ಕೃತ ವಿದ್ವಾಂಸ ಶ್ರೀ ಕೆ. ಸುಚೇಂದ್ರ ಪ್ರಸಾದ್ ಅವರೊಂದಿಗೆ ‘ಸನಾತನ ಪ್ರಭಾತ’ದ ಸಂವಾದ!

ಪದ್ಮಗಂಧಿ: ‘ಪುದ್ಮಗಂಧಿ’ ಚಿತ್ರದ ಸಂಸ್ಕೃತ ಭಾಷೆಯ ಭಿತ್ತಿಪತ್ರ ಮತ್ತು ಪದ್ಮಗಂಧಿ: ‘ಪುದ್ಮಗಂಧಿ’ ಚಿತ್ರದ ಕನ್ನಡ ಭಾಷೆಯ ಭಿತ್ತಿಪತ್ರ

ಬೆಂಗಳೂರು – ಕಮಲವು ಒಂದು ದೈವೀ ಹೂವಾಗಿದ್ದು, ಅದು ಕೇವಲ ಭಾರತದ ರಾಷ್ಟ್ರೀಯ ಹೂವಲ್ಲ, ಹಿಂದೂ ಸಂಸ್ಕೃತಿಯ ಅಮೂಲ್ಯ ಸಂಕೇತವಾಗಿದೆ. ಅಷ್ಟೇ ಅಲ್ಲ, ಅದು ಸಂಪೂರ್ಣ ಮಾನವಕುಲಕ್ಕೆ ಅತ್ಯಂತ ಹಿತಕರವಾಗಿದೆ ಎಂದು ಕರ್ನಾಟಕದ ಪ್ರಸಿದ್ಧ ನಟ, ನಿರ್ದೇಶಕ ಮತ್ತು ಸಂಸ್ಕೃತ ವಿದ್ವಾಂಸ ಶ್ರೀ ಸುಚೇಂದ್ರ ಪ್ರಸಾದ್ ಅವರು ‘ಸನಾತನ ಪ್ರಭಾತ’ದೊಂದಿಗೆ ಮಾತನಾಡುತ್ತಾ ಹೇಳಿದರು. ಅವರು ‘ಪದ್ಮಗಂಧಿ’ ಎಂಬ, ಕಮಲದ ಅಸಾಮಾನ್ಯತೆಯನ್ನು ವಿವರಿಸುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಲೇಖನ ಮತ್ತು ನಿರ್ಮಾಣವನ್ನು ಪ್ರಸಿದ್ಧ ಸಂಸ್ಕೃತ ವಿದ್ವಾಂಸರು, ಪ್ರಖರ ಹಿಂದುತ್ವವಾದಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕಿ ಡಾ. ಎಸ್.ಆರ್. ಲೀಲಾ ಅವರು ಮಾಡಿದ್ದಾರೆ.

ನಾವು ನಮ್ಮ ಪ್ರಾಚೀನ ವಿಜ್ಞಾನ ಮತ್ತು ಧರ್ಮಗ್ರಂಥಗಳನ್ನು ಮರೆಯುತ್ತಿದ್ದೇವೆ, ಅದನ್ನು ಈ ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ! – ನಿರ್ದೇಶಕ ಸುಚೇಂದ್ರ ಪ್ರಸಾದ್

‘ಪದ್ಮಗಂಧಿ’ ಚಿತ್ರದ ಕುರಿತು ಪ್ರಸಾದ್ ಅವರು ಮಂಡಿಸಿದ 10 ಪ್ರಮುಖ ಅಂಶಗಳಿವು…!

1. ಕಮಲವು ಕೆಸರಿನಲ್ಲಿ ಅರಳಿದರೂ ಅದು ಪವಿತ್ರವಾಗಿರುತ್ತದೆ. ವೇದಗಳಲ್ಲಿ, ವಿಶೇಷವಾಗಿ ಶ್ರೀಸೂಕ್ತದಲ್ಲಿ ಅದರ ಉಲ್ಲೇಖವಿದೆ. ಹಾಗೆಯೇ ಭಾರತೀಯ ಸಾಹಿತ್ಯ, ದರ್ಶನಶಾಸ್ತ್ರ, ಪುರಾಣ, ರಂಗಭೂಮಿ, ಕಲೆ, ದೇವಾಲಯ ವಾಸ್ತುಶಿಲ್ಪ ಇತ್ಯಾದಿಗಳಲ್ಲಿಯೂ ಅದರ ಮಾಹಿತಿಯನ್ನು ನೋಡಬಹುದು.

2. 1857ರಲ್ಲಿ ಭಾರತದ ಸ್ವಾತಂತ್ರ್ಯ ಯುದ್ಧದಲ್ಲಿ ತಾತ್ಯಾ ಟೋಪೆ ಅವರು ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯರಿಗೆ ಕಮಲದ ಹೂವನ್ನು ನೀಡಿ, ಅವರು ಭಾರತದ ಪರವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸಂಕೇತಿಕ ಯೋಜನೆಯನ್ನು ರೂಪಿಸಿದ್ದರು.

3. ಕಮಲ ನಮ್ಮ ರಾಷ್ಟ್ರೀಯ ಹೂವಾಗಿದ್ದು, ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಹೆಸರುಗಳಲ್ಲಿಯೂ ಅದರ ಉಲ್ಲೇಖವಿದೆ. ನಟನೆಗಾಗಿ ‘ಸ್ವರ್ಣಕಮಲ’ ಹೆಸರಿನಲ್ಲಿಯೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

4. ‘ಅಮರಕೋಶ’ ಎಂಬ ನಮ್ಮ ಪ್ರಾಚೀನ ಗ್ರಂಥದಲ್ಲಿಯೂ ಕಮಲದ 36 ಸಾವಿರ ಬಾರಿ ಬೇರೆ ಬೇರೆ ಶಬ್ದಗಳನ್ನು ಬಳಸಿ ಉಲ್ಲೇಖಿಸಲಾಗಿದೆ. ಸಸ್ಯಶಾಸ್ತ್ರದಲ್ಲಿಯೂ ಕಮಲಕ್ಕೆ ಮಹತ್ವವಿದೆ.

5. ಈ ಚಿತ್ರದ ಮೂಲಕ ಕಮಲದ ಈ ಎಲ್ಲ ಅದ್ಭುತ ವೈಶಿಷ್ಟ್ಯಗಳನ್ನು ಬಣ್ಣಿಸಲಾಗಿದೆ. ನಾವು ನಮ್ಮ ಪ್ರಾಚೀನ ವಿಜ್ಞಾನ ಮತ್ತು ಧರ್ಮಗ್ರಂಥಗಳನ್ನು ಮರೆಯುತ್ತಿದ್ದೇವೆ ಮತ್ತು ಇದೇ ವಿಷಯವನ್ನು ನಾವು ಚಿತ್ರದ ಮೂಲಕ ಜನರ ಮುಂದಿಡಲು ಪ್ರಯತ್ನಿಸಿದ್ದೇವೆ.

6. ಚಿತ್ರದ ಕಥೆಯನ್ನು ಗುರುಕುಲದಲ್ಲಿ ಕಲಿಯುವ ಒಬ್ಬ ಹುಡುಗಿಯ ದೃಷ್ಟಿಕೋನದಿಂದ ವರ್ಣಿಸಲಾಗಿದೆ. ಚಿತ್ರದ ಕಥೆ ಹಿಂದೂ ಧರ್ಮಗ್ರಂಥಗಳು, ಇತಿಹಾಸ, ಯುದ್ಧ ಮುಂತಾದವುಗಳನ್ನು ಸ್ಪರ್ಶಿಸುತ್ತದೆ.

7. ಚಿತ್ರದ ಮೂಲಕ ನಾವು ವೇದ ಮತ್ತು ಪುರಾಣಗಳ ಸಾರವನ್ನು ಹೇಳಲು ಪ್ರಯತ್ನಿಸಿದ್ದೇವೆ. ಇದರಲ್ಲಿ ವರಾಹಮಿಹೀರ, ಪಾಣಿನಿ, ಚರಕ ಮುಂತಾದ ಮಹಾನ್ ಋಷಿ-ಮುನಿಗಳನ್ನು ಸಹ ಚಿತ್ರಿಸಲಾಗಿದೆ.

8. ವಿಶೇಷವೆಂದರೆ, ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವ ಸಣ್ಣ ಹುಡುಗಿಯ ನಿಜವಾದ ಹೆಸರು ‘ಮಹಾಪದ್ಮಾ’ ಆಗಿದ್ದು, ಚಿತ್ರದಲ್ಲಿಯೂ ಅವಳಿಗೆ ಅದೇ ಹೆಸರನ್ನು ನೀಡಲಾಗಿದೆ.

9. ಡಾ. ಎಸ್.ಆರ್. ಲೀಲಾ ಅವರೊಂದಿಗೆ ಮಾತನಾಡಿದಾಗ, ಕಮಲದ ಬಗ್ಗೆ ಕೇವಲ ಒಂದು ಪುಸ್ತಕ ಅಥವಾ ಡಾಕ್ಯುಮೆಂಟರಿ ಮಾಡಬೇಕೆಂದು ನನಗೆ ಅನಿಸಿತ್ತು; ಆದರೆ ವಿಷಯದ ಕುರಿತು ಸಂಶೋಧನೆ ಮಾಡುತ್ತಾ ಹೋದಂತೆ, ಈ ವಿಷಯ ಎಷ್ಟು ಮಹತ್ವಪೂರ್ಣವಾಗಿದೆ ಎಂದು ಅರಿವಾಯಿತು. ಅದು ಎಲ್ಲರಿಗೂ ತಲುಪಬೇಕಾದರೆ ಚಿತ್ರವನ್ನೇ ಮಾಡಬೇಕು ಎಂದು ನಿರ್ಧರಿಸಿದೆ.

10. ಚಿತ್ರದ ವಿಷಯದ ಕುರಿತು ಚರ್ಚೆ, ಸಂಶೋಧನೆ ಮತ್ತು ಲೇಖನಕ್ಕಾಗಿ 2 ವರ್ಷಗಳು ಬೇಕಾದವು ಮತ್ತು ನಂತರ 4 ವರ್ಷಗಳ ಕಾಲ ಅದರ ಚಿತ್ರೀಕರಣ ಮತ್ತು ಇತರ ಕೆಲಸಗಳಿಗೆ ಬೇಕಾಯಿತು. ಬಿಡುಗಡೆ ಮಾಡುವ ಮೊದಲು ನಾವು ಈ ಚಿತ್ರವನ್ನು ‘ಇಂಡಿಯನ್ ಪನೋರಮಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಪ್ರದರ್ಶಿಸಲಿದ್ದೇವೆ.

ಚಿಕ್ಕಮಕ್ಕಳಿಗೆ, ಹಾಗೆಯೇ ವಯಸ್ಕರಿಗೂ ಅತ್ಯಂತ ಉಪಯುಕ್ತ ಚಿತ್ರ! – ನಿರ್ದೇಶಕ ಪ್ರಸಾದ್

ಕೆ. ಸುಚೇಂದ್ರ ಪ್ರಸಾದ್ ಅವರು ‘ಸನಾತನ ಪ್ರಭಾತ’ದೊಂದಿಗೆ ಮಾತನಾಡುತ್ತಾ, ‘ಪದ್ಮಗಂಧಿ’ ಚಿತ್ರವು ತತ್ವಶಾಸ್ತ್ರದ ದೃಷ್ಟಿಯಿಂದ ನಿರ್ಮಿಸಿದಂತೆ ಅನಿಸಬಹುದು, ಆದರೆ ಮೂಲತಃ ಇದು ಚಿಕ್ಕಮಕ್ಕಳಿಗೆ ಉಪಯುಕ್ತವಾಗಿದೆ. ಅದೇ ರೀತಿ ಇದು ವಯಸ್ಕರಿಗೂ ಕೂಡ ಇಷ್ಟವಾಗುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಚಿತ್ರ ಪ್ರದರ್ಶನಕ್ಕೆ ಕೆಲವು ವಿಶ್ವಪ್ರಸಿದ್ಧ ಚಿಂತಕರು ಉಪಸ್ಥಿತರಿದ್ದರು. ಚಿತ್ರವನ್ನು ನೋಡಿ ಎಲ್ಲರೂ ಭಾವುಕರಾದರು.

 

ಡಾ. ಎಸ್.ಆರ್. ಲೀಲಾ ಅವರ ಜೀವನದ ಎಲ್ಲ ಉಳಿತಾಯ ಚಿತ್ರದ ನಿರ್ಮಾಣಕ್ಕಾಗಿ ಸಮರ್ಪಣೆ!

‘ಪದ್ಮಗಂಧಿ’ ಚಿತ್ರಕ್ಕಾಗಿ ಡಾ. ಎಸ್.ಆರ್. ಲೀಲಾ ಅವರು ಜೀವನದಲ್ಲಿ ಗಳಿಸಿದ ಎಲ್ಲ ಹಣವನ್ನು ಖರ್ಚು ಮಾಡಿದ್ದಾರೆ. ಇದರಿಂದ ಅವರ ಧರ್ಮದ ಮೇಲಿನ ತಳಮಳವನ್ನು ಅರ್ಥಮಾಡಿಕೊಳ್ಳಬಹುದು. ‘ಸನಾತನ ಪ್ರಭಾತ’ದೊಂದಿಗೆ ಮಾತನಾಡುತ್ತಾ ಅವರು, ಈ ಚಿತ್ರದ ಮೂಲಕ ಕಮಲದ ಆಧ್ಯಾತ್ಮಿಕ ಮಹತ್ವವನ್ನು ಜಗತ್ತಿಗೆ ತಿಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಚಿತ್ರವನ್ನು ಹೆಚ್ಚಿನ ಜನರು ನೋಡಬೇಕು ಎಂದರು.

ಪ್ರತಿಯೊಬ್ಬ ಭಾರತೀಯನೂ ಈ ಚಿತ್ರವನ್ನು ನೋಡಲೇಬೇಕು! – ಮೋಹನ್ ಗೌಡ, ಹಿಂದೂ ಜನಜಾಗೃತಿ ಸಮಿತಿ

‘ಪದ್ಮಗಂಧಿ’ ಚಿತ್ರವನ್ನು ನೋಡಿದ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ ಮೋಹನ್ ಗೌಡ ಅವರು, ಈ ಚಿತ್ರವು ಕಮಲದ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದ ಮೇಲೆ ಸುಂದರವಾಗಿ ಬೆಳಕು ಚೆಲ್ಲುತ್ತದೆ ಎಂದರು. ಕಮಲ ಕೇವಲ ಭಾರತದ ರಾಷ್ಟ್ರೀಯ ಹೂವಲ್ಲ, ಆದರೆ ಈ ಚಿತ್ರವನ್ನು ನೋಡಿದ ನಂತರ ಅದು ಭಾರತೀಯ ಸಂಸ್ಕೃತಿಯ ಒಂದು ದೈವೀ ಸಂಕೇತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅದು ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಮತ್ತು ನಮ್ಮ ಭವ್ಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಅದು ನಮ್ಮ ಹೆಮ್ಮೆಯ ನಿಜವಾದ ಪ್ರತಿಬಿಂಬವಾಗಿದೆ. ‘ಪದ್ಮಗಂಧಿ’ ಕಮಲದ ಆಧ್ಯಾತ್ಮಿಕ ಮಹತ್ವ, ಔಷಧೀಯ ಮೌಲ್ಯ ಮತ್ತು ಶಾಸ್ತ್ರೀಯ ವೈಭವವನ್ನು ಎಷ್ಟು ಆಳವಾಗಿ ವ್ಯಕ್ತಪಡಿಸುತ್ತದೆ ಎಂದರೆ, ಕಮಲದ ಕುರಿತು ಮನಸ್ಸಿನಲ್ಲಿ ಗೌರವದ ಆಳವಾದ ಭಾವನೆ ಜಾಗೃತವಾಗುತ್ತದೆ. ಪ್ರತಿಯೊಬ್ಬ ಭಾರತೀಯನೂ ಈ ಚಿತ್ರವನ್ನು ನೋಡಲೇಬೇಕು.

ಶ್ರೀ. ಗೌಡ ಅವರು ಮುಂದೆ ಮಾತನಾಡಿ, ಚಿತ್ರದಲ್ಲಿ ಗುರುಕುಲದ ವಿದ್ಯಾರ್ಥಿನಿಯರ ಜೀವನದ ಮೂಲಕ ಕಮಲದ ಮಹತ್ವವನ್ನು ಸ್ವಾಭಾವಿಕವಾಗಿ ಚಿತ್ರಿಸಲಾಗಿದೆ. ಇದರಲ್ಲಿ ಯಾವುದೇ ಅತಿಯಾದ ಅಥವಾ ಕೃತಕತೆಯಿಲ್ಲ – ಕೇವಲ ಗುರುಕುಲ ಜೀವನದ ಒಂದು ಪ್ರಾಮಾಣಿಕ ಚಿತ್ರಣವಿದೆ, ಇದು ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮತ್ತು ಗೌರವವನ್ನು ಜಾಗೃತಗೊಳಿಸುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಮಕ್ಕಳು ಪಾಶ್ಚಿಮಾತ್ಯ ಪದ್ಧತಿಯ ಪ್ರಕಾರ ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ತಮ್ಮ ಮೂಲವನ್ನು ಮರೆತಿದ್ದಾರೆ. ಇದರಿಂದಾಗಿ ಕುಟುಂಬ ಮತ್ತು ಸಮಾಜ ಎರಡಕ್ಕೂ ಅನೇಕ ಸವಾಲುಗಳು ಸೃಷ್ಟಿಯಾಗುತ್ತವೆ. ಗುರುಕುಲದ ಮಕ್ಕಳನ್ನು ನೋಡಿದಾಗ, ನಮ್ಮ ಮಕ್ಕಳಿಗೂ ಅಂತಹ ಸಾಂಪ್ರದಾಯಿಕ ಭಾರತೀಯ ಪದ್ಧತಿಗಳಿಂದ ಶಿಕ್ಷಣ ನೀಡಬೇಕು ಎಂಬ ತೀವ್ರ ಇಚ್ಛೆಯು ಈ ಚಿತ್ರವನ್ನು ನೋಡಿದಾಗ ಉಂಟಾಗುತ್ತದೆ. ಈ ಚಿತ್ರಕ್ಕೆ ರಾಷ್ಟ್ರೀಯ ಮಾನ್ಯತೆ, ಅನೇಕ ಪ್ರಶಸ್ತಿಗಳು ಸಿಗಲಿ ಮತ್ತು ದೇಶದ ಲಕ್ಷಾಂತರ ಹಿಂದೂಗಳಿಗೆ ತಲುಪಲಿ ಎಂದು ನಾನು ಶ್ರೀ ಗುರುಗಳ ಚರಣದಲ್ಲಿ ಪ್ರಾರ್ಥಿಸುತ್ತೇನೆ!