ಧರ್ಮಕ್ಕೆ ಸಂಬಂಧಿಸಿದ ನ್ಯಾಯಕ್ಕಾಗಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಂದ ‘ಧರ್ಮ ನ್ಯಾಯಾಲಯ’ ಸ್ಥಾಪನೆ ಮಾಡುವುದಾಗಿ ಘೋಷಣೆ!

ಮುಂಬಯಿ – ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಪರ್ವದಲ್ಲಿ ನಡೆದ ಪರಮಧರ್ಮಸಂಸದ್‌ನಲ್ಲಿ ಧರ್ಮದ ವಿಷಯಗಳಿಗೆ ನ್ಯಾಯ ನೀಡಲು ‘ಧರ್ಮ ನ್ಯಾಯಾಲಯ’ ಇರಬೇಕು ಎಂದು ತೀರ್ಮಾನಿಸಲಾಗಿತ್ತು. ಈ ಸಭೆಯಲ್ಲಿ ಮೂವರು ಶಂಕರಾಚಾರ್ಯರು ಉಪಸ್ತಿತರಿದ್ದರು. ಪರಮಧರ್ಮಸಂಸದ್‌ನಲ್ಲಿ ಕೈಗೊಂಡ ತೀರ್ಮಾನದಂತೆ, ಧರ್ಮಕ್ಕೆ ಸಂಬಂಧಿಸಿದ ನ್ಯಾಯಕ್ಕಾಗಿ ‘ಧರ್ಮ ನ್ಯಾಯಾಲಯ’ ಸ್ಥಾಪನೆಗೆ ನಾನು ಔಪಚಾರಿಕವಾಗಿ ಘೋಷಿಸುತ್ತಿದ್ದೇನೆ ಎಂದು ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಜುಲೈ ೨೩ ರಂದು ಮುಂಬಯಿಯ ಬೋರಿವಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, “ಸಂವಿಧಾನದ ೨೬ (ಬಿ) ವಿಧಿಯ ಪ್ರಕಾರ, ನ್ಯಾಯಾಲಯಗಳು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ದೇಶದ ನ್ಯಾಯಾಲಯಗಳಲ್ಲಿ ಪ್ರಸ್ತುತ ಧರ್ಮಕ್ಕೆ ಸಂಬಂಧಿಸಿದ ಲಕ್ಷಾಂತರ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಇವೆ. ‘ಯಾರ ಕೆಲಸ ಅವರಿಗೇ ಶೋಭೆ’ ಎಂಬ ಮಾತಿದೆ. ವೈದ್ಯರ ಕಾರ್ಯವನ್ನು ವಕೀಲರು ಮಾಡದಂತೆ, ಧರ್ಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಧರ್ಮಾಚಾರ್ಯರೇ ತೆಗೆದುಕೊಳ್ಳುವುದು ಸೂಕ್ತ. ‘ಧರ್ಮಕ್ಕೆ ಸಂಬಂಧಿಸಿದ ಪ್ರಕರಣಗಳ ನಿರ್ಣಯಗಳಲ್ಲಿ ನ್ಯಾಯಾಲಯಗಳು ಧರ್ಮಶಾಸ್ತ್ರವನ್ನು ನಿರ್ಲಕ್ಷಿಸುತ್ತವೆ’ ಎಂದು ಅನೇಕ ಬಾರಿ ಕಂಡುಬಂದಿದೆ. ಧರ್ಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಧರ್ಮಾಚಾರ್ಯರು ತೆಗೆದುಕೊಂಡರೆ ನ್ಯಾಯಾಲಯಗಳ ಮೇಲಿನ ಭಾರ ಕಡಿಮೆಯಾಗುತ್ತದೆ ಮತ್ತು ಜನರಿಗೂ ಸರಿಯಾದ ನ್ಯಾಯ ದೊರೆಯುತ್ತದೆ. ಹಿಂದೆ ಒಂದು ಕಾಲವಿತ್ತು, ನಮ್ಮ ದೇಶದಲ್ಲಿ ರಾಜ್ಯವಿರಲಿಲ್ಲ, ರಾಜನಿರಲಿಲ್ಲ. ದಂಡವಿರಲಿಲ್ಲ ಮತ್ತು ದಂಡ ನೀಡುವ ನ್ಯಾಯಾಧೀಶನಿರಲಿಲ್ಲ. ಎಲ್ಲರೂ ಧರ್ಮವನ್ನು ಪಾಲಿಸುತ್ತಿದ್ದರು ಮತ್ತು ಧರ್ಮವೇ ಎಲ್ಲರನ್ನೂ ರಕ್ಷಿಸುತ್ತಿತ್ತು. ಕಾಲ ಬದಲಾದಂತೆ, ಬಲಿಷ್ಠರು ದುರ್ಬಲರ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದರು. ಆ ಸಮಯದಲ್ಲಿ ನ್ಯಾಯಾಲಯಗಳು ಮತ್ತು ರಾಜನ ಅಗತ್ಯ ಕಂಡುಬಂದಿತು. ಇದರಿಂದ ಜನರಿಗೆ ತಾತ್ಕಾಲಿಕ ಲಾಭ ಸಿಕ್ಕಿತು; ಆದರೆ ಕಾಲಾಂತರದಲ್ಲಿ ನ್ಯಾಯವ್ಯವಸ್ಥೆಯ ಬಗ್ಗೆ ಇದ್ದ ಸಂವೇದನೆ ಕಡಿಮೆಯಾಗುತ್ತಾ ಹೋಯಿತು. ಉಚ್ಚ ನ್ಯಾಯಾಲಯದ ಒಬ್ಬ ನ್ಯಾಯಮೂರ್ತಿ ನ್ಯಾಯಕ್ಕಿಂತ ವ್ಯವಸ್ಥೆ ದೊಡ್ಡದಾಗಿದೆ ಎಂದು ಹೇಳಿದ್ದಾರೆ. ‘ಧರ್ಮದ ಮೂಲಭೂತ ತತ್ವಗಳು ಯಾವುವು?’ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಬಾರದು. ಧರ್ಮದ ವ್ಯವಸ್ಥೆಯಿಂದ ಯಾರ ಶೋಷಣೆಯೂ ಆಗದಿದ್ದರೆ, ನ್ಯಾಯಾಲಯಗಳು ಧರ್ಮದ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡಬಾರದು.”