ಸೆಪ್ಟೆಂಬರ್ 19 ರಂದು ಮಿಗ್-21 ಯುದ್ಧ ವಿಮಾನಗಳು ನಿವೃತ್ತಿ!

ನವದೆಹಲಿ – ಮುಂಬರುವ ಸೆಪ್ಟೆಂಬರ್ 19 ರಂದು ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನಗಳು ನಿವೃತ್ತಿಯಾಗಲಿವೆ. ಚಂಡೀಗಢ ವಾಯುಪಡೆ ನೆಲೆಯಲ್ಲಿ ಈ ಯುದ್ಧ ವಿಮಾನಗಳ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗುವುದು. ನಂತರ, ಈ ವಿಮಾನಗಳ ಸೇವೆಯು ಅಧಿಕೃತವಾಗಿ ಕೊನೆಗೊಳ್ಳಲಿದೆ. ಮಿಗ್-21 ವಿಮಾನವನ್ನು ಮೊದಲ ಬಾರಿಗೆ 1963 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಗಿತ್ತು. ಇದು ಭಾರತದ ಮೊದಲ ‘ಸೂಪರ್‌ಸಾನಿಕ್’, ಅಂದರೆ ಧ್ವನಿಯ ವೇಗಕ್ಕಿಂತ ಹೆಚ್ಚು ವೇಗವಾಗಿ ಹಾರಬಲ್ಲ ಯುದ್ಧ ವಿಮಾನವಾಗಿತ್ತು.

ಈ ವಿಮಾನಗಳು 1965 ರ ಭಾರತ-ಪಾಕಿಸ್ತಾನ ಯುದ್ಧ, 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧ, 1999 ರ ಕಾರ್ಗಿಲ್ ಯುದ್ಧ ಮತ್ತು 2019 ರ ಬಾಲಾಕೋಟ್ (ಏರ್‌ ಸ್ಟ್ರೈಕ್) ದಾಳಿಯಲ್ಲಿ ಭಾಗವಹಿಸಿದ್ದವು. ಇವು ವಿವಿಧ ಯುದ್ಧಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದವು.

400ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಪತನ!

ರಕ್ಷಣಾ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, 400 ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಪತನಗೊಂಡಿವೆ. ಇದರಲ್ಲಿ 200 ಕ್ಕೂ ಹೆಚ್ಚು ವಿಮಾನ ಚಾಲಕರು ಮೃತಪಟ್ಟಿದ್ದಾರೆ; ಅದಕ್ಕಾಗಿಯೇ ಈ ವಿಮಾನವನ್ನು ‘ಹಾರುವ ಶವಪೆಟ್ಟಿಗೆ’ ಮತ್ತು ‘ವಿಧವೆ ಮಾಡುವ ವಿಮಾನ’ ಎಂದು ಕರೆಯಲಾಗುತ್ತದೆ. (ಯುದ್ಧವಿಲ್ಲದೇ ಇಷ್ಟೊಂದು ವಿಮಾನ ಚಾಲಕರನ್ನು ಕಳೆದುಕೊಂಡಿರುವ ಏಕೈಕ ದೇಶ ಭಾರತ! – ಸಂಪಾದಕರು)

ಭಾರತವು ಒಟ್ಟು 850 ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಅವುಗಳಲ್ಲಿ ಸುಮಾರು 600 ವಿಮಾನಗಳು ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (HAL) ನಿರ್ಮಿತ, ಅಂದರೆ ಸ್ವದೇಶಿ ನಿರ್ಮಿತ ವಿಮಾನಗಳಾಗಿದ್ದವು. ಪ್ರಸ್ತುತ, ವಾಯುಪಡೆಯ ಬಳಿ ಕೇವಲ 36 ಮಿಗ್-21 ಯುದ್ಧ ವಿಮಾನಗಳು ಉಳಿದಿವೆ.