‘ಉದಯಪುರ್ ಫೈಲ್ಸ್’ ಚಲನ ಚಿತ್ರದಲ್ಲಿ ‘ನೂತನ್ ಶರ್ಮಾ’ ಹೆಸರನ್ನು ಬದಲಾಯಿಸಿ ! – ಸುಪ್ರೀಂ ಕೋರ್ಟ್‌

ನವದೆಹಲಿ – ಜುಲೈ 21 ರ ತಡರಾತ್ರಿ ಸುಪ್ರೀಂ ಕೋರ್ಟ್ ‘ಉದಯಪುರ್ ಫೈಲ್ಸ್’ ಚಲನ ಚಿತ್ರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿತು. ಚಲನ ಚಿತ್ರದ ಪ್ರದರ್ಶನದ ಮೇಲಿನ ನಿಷೇಧವನ್ನು ಜುಲೈ 24 ರವರೆಗೆ ಮುಂದುವರಿಸಲು ನ್ಯಾಯಾಲಯ ಆದೇಶಿಸಿತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದ ಆರು ಬದಲಾವಣೆಗಳನ್ನು ಚಲನ ಚಿತ್ರದ ನಿರ್ಮಾಪಕರ ವಕೀಲ ಗೌರವ್ ಭಾಟಿಯಾ ಅವರು ಒಪ್ಪಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 24 ರಂದು ನಡೆಯಲಿದೆ. ಈ ಆದೇಶದಲ್ಲಿ, ಚಲನ ಚಿತ್ರದಲ್ಲಿನ ಒಂದು ಪಾತ್ರದ ‘ನೂತನ್ ಶರ್ಮಾ’ ಹೆಸರನ್ನು ತೆಗೆದುಹಾಕಲು ಸಹ ನಿರ್ದೇಶಿಸಲಾಗಿದೆ.

1. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಅವರ ಪೀಠ ಈ ಪ್ರಕರಣವನ್ನು ವಿಚಾರಣೆ ನಡೆಸಿತು. ಅರ್ಜಿಗಳಲ್ಲಿ ಒಂದು ಚಲನ ಚಿತ್ರ ನಿರ್ಮಾಪಕ ಅಮಿತ್ ಜಾನಿ ಅವರದ್ದಾಗಿದ್ದರೆ, ಮತ್ತೊಂದು ಕನ್ಹಯ್ಯಲಾಲ್ ಕೊಲೆ ಪ್ರಕರಣದ ಆರೋಪಿ ಜಾವೇದ್ ಅವರದ್ದಾಗಿದೆ.

2. ಈ ಪ್ರಕರಣದ ಹಿಂದಿನ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರಕ್ಕಾಗಿ ಕಾಯುವಂತೆ ಹೇಳಿತ್ತು.

3. ಕೇಂದ್ರ ಸರಕಾರದ ಪರವಾಗಿ ಮಹಾಧಿವಕ್ತಾ ತುಷಾರ್ ಮೆಹ್ತಾ ಅವರು, ಕೇಂದ್ರ ಸರಕಾರವು ಆದೇಶ ಹೊರಡಿಸಿದ್ದು, ಕೆಲವು ಸೂಚನೆಗಳನ್ನು ಸಹ ನೀಡಿದೆ ಎಂದು ಹೇಳಿದರು.

ಕೇಂದ್ರ ಸರಕಾರವು ತೆಗೆದುಹಾಕಲು ಸೂಚಿಸಿದ ಸಂಭಾಷಣೆಗಳು ಮತ್ತು ದೃಶ್ಯಗಳು!

1. ನೂತನ್ ಶರ್ಮಾ ಎಂಬ ಪಾತ್ರವು “ಮೈನೆ ತೋ ವಹಿ ಕಹಾ ಹೈ, ಜೋ ಉನ್ಕೆ ಧರ್ಮಗ್ರಂಥೋ ಮೇ ಲೇಖ ಹೈ” (ನಾನು ಅವರ ಧರ್ಮಗ್ರಂಥಗಳಲ್ಲಿ ಬರೆದಿರುವುದನ್ನೇ ಹೇಳಿದ್ದೇನೆ) ಎಂಬ ವಾಕ್ಯವನ್ನು ತೆಗೆದುಹಾಕಬೇಕು.

2. ಹಾಫೀಜ್ ಎಂಬ ಪಾತ್ರವು “ಬಲೂಚಿ ಕಭಿ ವಫಾದಾರ್ ನಹಿ ಹೋತಾ” (ಬಲೂಚಿಗಳು ಎಂದಿಗೂ ನಿಷ್ಠರಾಗಿರುವುದಿಲ್ಲ) ಎಂಬ ಸಂಭಾಷಣೆ, ಮತ್ತು ಮಕ್ಬೂಲ್ ಎಂಬ ಪಾತ್ರವು “ಬಲೂಚಿ ಕಿ…” ಹಾಗೂ “ಅರೆ ಕ್ಯಾ ಬಲೂಚಿ, ಕ್ಯಾ ಅಫ್ಘಾನಿ, ಕ್ಯಾ ಹಿಂದೂಸ್ತಾನಿ, ಕ್ಯಾ ಪಾಕಿಸ್ತಾನಿ…” ಎಂಬ ಸಂಭಾಷಣೆಗಳನ್ನು ತೆಗೆದುಹಾಕಬೇಕು.

3. ಚಲನ ಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯಿಂದ (AI) ರಚಿಸಲಾದ ಒಂದು ದೃಶ್ಯದಲ್ಲಿ ಬದಲಾವಣೆ ಮಾಡಬೇಕು. ಇದರಲ್ಲಿ ಸೌದಿ ಅರೇಬಿಯಾದ ಶೈಲಿಯ ಪೇಟವನ್ನು ತೋರಿಸಲಾಗಿದೆ, ಇದು ಗೊಂದಲಕ್ಕೀಡುಮಾಡಬಹುದು ಅಥವಾ ಸಾಂಸ್ಕೃತಿಕವಾಗಿ ಸೂಕ್ಷ್ಮವಾಗಿರಬಹುದು.

4. ಚಲನ ಚಿತ್ರದಲ್ಲಿ ಎಲ್ಲೆಲ್ಲಿ ‘ನೂತನ್ ಶರ್ಮಾ’ ಎಂಬ ಹೆಸರನ್ನು ಬಳಸಲಾಗಿದೆಯೋ, ಅದನ್ನು ಬದಲಿಸಿ ಹೊಸ ಹೆಸರನ್ನು ಬಳಸಬೇಕು.

5. ಚಲನ ಚಿತ್ರದ ಆರಂಭದಲ್ಲಿ ತೋರಿಸಿರುವ ಪ್ರಸ್ತುತ ‘ಡಿಸ್‌ಕ್ಲೈಮರ್’ ಅನ್ನು ತೆಗೆದುಹಾಕಬೇಕು ಮತ್ತು ಅದರ ಬದಲು ಸಮಿತಿ ಸೂಚಿಸಿದ ಹೊಸ ‘ಡಿಸ್‌ಕ್ಲೈಮರ್’ ಅನ್ನು ಪ್ರದರ್ಶಿಸಬೇಕು. ಇದನ್ನು ತೋರಿಸುವಾಗ ಅದರ ‘ವಾಯ್ಸ್-ಓವರ್’ (ಆಡಿಯೋ) ಅನ್ನು ಸೇರಿಸಬೇಕು. (ಡಿಸ್‌ಕ್ಲೈಮರ್ ಎಂದರೆ ಯಾವುದೋ ಒಂದು ವಿಷಯಕ್ಕೆ ಕಾನೂನುಬದ್ಧವಾಗಿ ಬದ್ಧರಾಗಿರುವುದಿಲ್ಲ)

6. ಚಲನ ಚಿತ್ರದ ಕೊನೆಯಲ್ಲಿ ತೋರಿಸಿದ ‘ಕ್ರೆಡಿಟ್’ ವಿಭಾಗದಲ್ಲಿ ವ್ಯಕ್ತಿಗಳಿಗೆ ವ್ಯಕ್ತಪಡಿಸಿದ ಕೃತಜ್ಞತೆಯ ಸಂದೇಶವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು.