ತಿರುಪತಿ ದೇವಸ್ಥಾನದಲ್ಲಿ 4 ಅನ್ಯಧರ್ಮೀಯ ಸಿಬ್ಬಂದಿಗಳ ಅಮಾನತು

ಇತರ ಧರ್ಮದ ಶ್ರದ್ಧೆಗಳನ್ನು ಪಾಲಿಸುವ ಮೂಲಕ ಸಂಸ್ಥೆಯ ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಿದ ಆರೋಪ

ತಿರುಪತಿ (ಆಂಧ್ರಪ್ರದೇಶ) – ಪ್ರಸಿದ್ಧ ತಿರುಪತಿ ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿಯು 4 ಅನ್ಯಧರ್ಮೀಯ ಕೆಲಸಗಾರರನ್ನು ತಕ್ಷಣವೇ ಅಮಾನತುಗೊಳಿಸಿದೆ. ಅವರ ಮೇಲೆ ಇತರ ಧರ್ಮದ ಶ್ರದ್ಧೆಗಳನ್ನು ಪಾಲಿಸುತ್ತ ಸಂಸ್ಥೆಯ ಧಾರ್ಮಿಕ ನೀತಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವಿದೆ. ಈ 4 ಉದ್ಯೋಗಿಗಳಲ್ಲಿ ಬಿ. ಎಲಿಝಾರ (ಉಪ ಕಾರ್ಯನಿರ್ವಾಹಕ ಅಭಿಯಂತರು – ಗುಣಮಟ್ಟ ನಿಯಂತ್ರಣ), ಎಂ. ಪ್ರೇಮವತಿ (ಸ್ಟಾಫ್ ನರ್ಸ್ – ಬಿ.ಐ.ಆರ್.ಆರ್.ಡಿ. ಆಸ್ಪತ್ರೆ), ಡಾ. ಜಿ. ಅಸುಂಥಾ (ಎಸ್.ವಿ. ಆಯುರ್ವೇದ ಫಾರ್ಮಸಿ) ಮತ್ತು ಔಷಧಿ ಮಾರಾಟ ಮಾಡುವ ಸಿಬ್ಬಂದಿಯೊಬ್ಬರು ಸೇರಿದ್ದಾರೆ.

1. ಈ ಕುರಿತು ಟಿಟಿಡಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಮೇಲೆ ತಿಳಿಸಿದ ಕರ್ಮಚಾರಿಗಳು ಹಿಂದೂ ಧಾರ್ಮಿಕ ಸಂಸ್ಥೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವಾಗ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಹೇಳಿದೆ.

2. ಈ ಹಿಂದೆ ಜುಲೈ 8, 2025 ರಂದು, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎ. ರಾಜಶೇಖರ್ ಬಾಬು ಅವರನ್ನು ಅಮಾನತುಗೊಳಿಸಲಾಗಿತ್ತು; ಏಕೆಂದರೆ ಅವರು ಪ್ರತಿ ಭಾನುವಾರ ತಮ್ಮ ಮೂಲ ಗ್ರಾಮ ಪುತ್ತೂರು (ತಿರುಪತಿ ಜಿಲ್ಲೆ) ನಲ್ಲಿರುವ ಚರ್ಚಿನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸುತ್ತಿದ್ದರು.

3. ಟಿಟಿಡಿಯು, ತನ್ನ ವ್ಯಾಪ್ತಿಗೆ ಬರುವ ಯಾವುದೇ ದೇವಸ್ಥಾನದಲ್ಲಿ ಅನ್ಯಧರ್ಮೀಯ ಸಿಬ್ಬಂದಿಗೆ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.