Halley’s Comet : ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸಂರಕ್ಷಿಸಲಾದ ತಾಮ್ರಪತ್ರದಲ್ಲಿ ಹ್ಯಾಲಿ ಧೂಮಕೇತುವಿನ ಉಲ್ಲೇಖ!

ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಸಂರಕ್ಷಿಸಲ್ಪಟ್ಟ ತಾಮ್ರಪಟ

ಅಮರಾವತಿ (ಆಂಧ್ರಪ್ರದೇಶ) – ವಿಜಯನಗರ ಸಾಮ್ರಾಜ್ಯದ ಕಾಲದ ತಾಮ್ರಪತ್ರದ ಶಾಸನವೊಂದರಲ್ಲಿ ಹ್ಯಾಲಿ ಧೂಮಕೇತುವಿನ ಮೊದಲ ಭಾರತೀಯ ಉಲ್ಲೇಖ ಕಂಡುಬಂದಿದೆ. ಈ ಶಾಸನವು 1456ನೇ ವರ್ಷಕ್ಕೆ ಸೇರಿದ್ದು, ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಇದನ್ನು ಸಂರಕ್ಷಿಸಲಾಗಿದೆ. ಇದರಲ್ಲಿ ವಿಜಯನಗರದ ಅರಸ ಮಲ್ಲಿಕಾರ್ಜುನ ಅವರು ನೀಡಿದ ಭೂಮಿಯ ಅನುದಾನದ (ಭೂದಾನದ) ಉಲ್ಲೇಖ ಇದೆ. ಇದರಲ್ಲಿ ಧೂಮಕೇತುವಿನ ವಿವರಣೆಯು ಹ್ಯಾಲಿ ಧೂಮಕೇತುವಿಗೆ ನಿಖರವಾಗಿ ಹೋಲುತ್ತದೆ. ಹ್ಯಾಲಿ ಧೂಮಕೇತು ಪ್ರತಿ 76 ವರ್ಷಗಳಿಗೊಮ್ಮೆ ಗೋಚರಿಸುತ್ತದೆ. ಭಾರತದಲ್ಲಿ ಇದು ವರ್ಷ1986ರಲ್ಲಿ ಕಾಣಿಸಿಕೊಂಡಿತ್ತು. ಈ ಶಾಸನವು ಭಾರತದಲ್ಲಿ ಧೂಮಕೇತುವಿನ ಉಲ್ಲೇಖಕ್ಕೆ ಸಂಬಂಧಿಸಿದ ಮೊದಲ ಪುರಾವೆಯಾಗಿದೆ.

ಈ ಶಾಸನವು ಸಂಸ್ಕೃತದಲ್ಲಿದ್ದು, ನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಶಾಸನದಲ್ಲಿ ಧೂಮಕೇತು ಮತ್ತು ನಂತರ ಸಂಭವಿಸಿದ ಉಲ್ಕೆಗಳ ಮಳೆಯ ಕುರಿತು ಉಲ್ಲೇಖವಿದೆ, ಇದು ಜೂನ್ 28, 1456 (ಶಕೆ 1378) ರ ಘಟನೆಗಳಿಗೆ ಹೊಂದಿಕೆಯಾಗುತ್ತದೆ. ಈ ಶಾಸನವು ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿರುವ 21 ಅಪ್ರಕಟಿತ ತಾಮ್ರಪತ್ರಗಳ ಸಂಗ್ರಹದ ಭಾಗವಾಗಿದೆ.