Radha Rani Fictional Allahabad HC : ಅಲಹಾಬಾದ್ ಹೈಕೋರ್ಟ್‌ನಿಂದ ದೇವಿ ಶ್ರೀಜಿ ರಾಧಾ ರಾಣಿ ಕಾಲ್ಪನಿಕ ಎಂದು ತೀರ್ಪು!

ಪೌರಾಣಿಕ ಗ್ರಂಥಗಳ ಉಲ್ಲೇಖವನ್ನು ತಿರಸ್ಕರಿಸಿ, ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ದೇವಿ ಶ್ರೀಜಿ ರಾಧಾ ರಾಣಿಯನ್ನು ಸಹ-ಮಾಲೀಕರನ್ನಾಗಿ ಸೇರಿಸಬೇಕೆಂಬ ಅರ್ಜಿಯನ್ನೂ ಸಹ ವಜಾಗೊಳಿಸಿತು !

ವಾರಣಾಸಿ (ಉತ್ತರಪ್ರದೇಶ) – ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಸಹ-ಮಾಲೀಕತ್ವದ ದೇವಿ ಶ್ರೀಜಿ ರಾಧಾ ರಾಣಿಯವರ ಹಕ್ಕು ಪೌರಾಣಿಕ ಗ್ರಂಥಗಳಲ್ಲಿ ಬರೆದಿದ್ದ ಸಂಗತಿಗಳನ್ನು ಆಧರಿಸಿದೆ. ಶ್ರೀಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಆಸ್ತಿಯ ಸಹ-ಮಾಲೀಕರು ರಾಧಾ ರಾಣಿ ಎಂದು ಕೇವಲ ಪೌರಾಣಿಕ ಗ್ರಂಥಗಳಿಂದ ಸಾಬೀತುಪಡಿಸಲು ಸಾಧ್ಯವಿಲ್ಲ. ರಾಧಾ ರಾಣಿ ವಿವಾದಿತ ಆಸ್ತಿಯ ಸಹ-ಮಾಲೀಕರಾಗಿದ್ದರು ಅಥವಾ ವಿವಾದಿತ ಆಸ್ತಿಯಲ್ಲಿ ಅವರ ಯಾವುದೇ ದೇವಸ್ಥಾನವಿತ್ತು ಎಂಬುದನ್ನು ಸಾಬೀತುಪಡಿಸಲು ಅವರ ಪರವಾಗಿ ಯಾವುದೇ ದೃಢವಾದ ಪುರಾವೆಗಳನ್ನು ಸಲ್ಲಿಸಲಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಮ ಮನೋಹರ ನಾರಾಯಣ ಮಿಶ್ರ ಅವರು ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ದೇವಿ ಶ್ರೀಜಿ ರಾಧಾ ರಾಣಿಯನ್ನು ಪಕ್ಷಕಾರರನ್ನಾಗಿ ಮಾಡುವ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ದಾವೆಯ ಬೆಂಬಲಕ್ಕೆ ಸ್ಕಂದ ಪುರಾಣ, ಶ್ರೀಮದ್ ಭಾಗವತ ಮತ್ತು ಬ್ರಹ್ಮವೈವರ್ತ ಪುರಾಣ ಮುಂತಾದ ಸನಾತನ ಧರ್ಮಗ್ರಂಥಗಳನ್ನು ಉಲ್ಲೇಖಿಸಲಾಗಿತ್ತು. ರಾಧಾ ರಾಣಿಯನ್ನು ಶ್ರೀಕೃಷ್ಣನ ಮೊದಲ ಪತ್ನಿ ಎಂದು ಘೋಷಿಸಿ ಪಕ್ಷಕಾರರಾಗಲು ಬೇಡಿಕೆಯಿಡಲಾಗಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 4 ರಂದು ನಡೆಯಲಿದೆ.

ರಾಧಾ ರಾಣಿಯನ್ನು ಕಾಲ್ಪನಿಕ ಎಂದು ಪರಿಗಣಿಸುವುದು ನ್ಯಾಯಾಧೀಶರ ಅಜ್ಞಾನ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಜ್ಯೋತಿಷ್ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನ್ಯಾಯಾಲಯದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರು ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ವಿಚಾರಣೆ ನಡೆಸುವಾಗ ಶ್ರೀಕೃಷ್ಣ ಕಾಲ್ಪನಿಕ, ರಾಧಾಜಿ ಕಾಲ್ಪನಿಕ ಎಂದು ಹೇಳಿದ್ದಾರೆ. ಇದು ನ್ಯಾಯಾಧೀಶರ ಅಜ್ಞಾನವನ್ನು ತೋರಿಸುತ್ತದೆ. 2019 ರ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಶ್ರೀರಾಮ ಜನ್ಮಭೂಮಿ ಬಗ್ಗೆ ತೀರ್ಪು ನೀಡಿತ್ತು ಎಂಬುದನ್ನು ಅವರು ನೆನಪಿನಲ್ಲಿಡಬೇಕು. ಅದರಲ್ಲಿ ಕೇವಲ ಭಗವಾನ್ ರಾಮನ ಪರವಾಗಿ ತೀರ್ಪು ನೀಡಲಾಗಿರಲಿಲ್ಲ. ಸ್ಕಂದ ಪುರಾಣ ಸೇರಿದಂತೆ ವಿವಿಧ ಪುರಾಣಗಳು ಮತ್ತು ಗ್ರಂಥಗಳನ್ನು ಸಹ ಅದಕ್ಕೆ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ನ್ಯಾಯಾಧೀಶರು ಈ ಎಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟಿದ್ದರೆ, ಅವರು ಹೀಗೆ ಮಾತನಾಡುತ್ತಿರಲಿಲ್ಲ. ನ್ಯಾಯಾಧೀಶರು ಕನಿಷ್ಠ ಭಾರತದಲ್ಲಿ ಒಂದು ಸ್ಥಾಪಿತ ವ್ಯವಸ್ಥೆಯಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಹಿಂದೂಗಳಿಗೆ ಸಂಬಂಧಿಸಿದಂತೆ ಯಾವುದೇ ಧಾರ್ಮಿಕ ನಿರ್ಧಾರವನ್ನು ನೀಡಬೇಕಾದರೆ, ಆ ನಿರ್ಧಾರವನ್ನು ಹಿಂದೂ ಧರ್ಮಗ್ರಂಥಗಳ ಆಧಾರದ ಮೇಲೆ ಮಾತ್ರ ನೀಡಬೇಕು. ನ್ಯಾಯಾಧೀಶರು ಒಮ್ಮೆ ತಮ್ಮ ನಿಯಮಗಳನ್ನು ಓದಬೇಕು. ನಮ್ಮ ದೇವರುಗಳು ಮತ್ತು ಧರ್ಮಗ್ರಂಥಗಳನ್ನು ಕಾಲ್ಪನಿಕ ಎಂದು ಕರೆಯುವ ಮೂಲಕ ನಾವು 100 ಕೋಟಿ ಹಿಂದೂಗಳ ಭಾವನೆಗಳನ್ನು ನೋಯಿಸುವುದರಿಂದ ದೂರವಿರಬೇಕು, ಎಂದು ಹೇಳಿದ್ದಾರೆ.