Armenia Akash Missiles : ಭಾರತದಿಂದ ಅರ್ಮೇನಿಯಾಕ್ಕೆ ಇನ್ನಷ್ಟು ‘ಆಕಾಶ್ 1-ಎಸ್’ ಕ್ಷಿಪಣಿಗಳ ಪೂರೈಕೆ

ನವದೆಹಲಿ – ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದ ಅಜರ್‌ಬೈಜಾನ್‌ನ ಶತ್ರುವಾಗಿರುವ ಅರ್ಮೇನಿಯಾಕ್ಕೆ ಭಾರತದಿಂದ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಭಾರತವು ಅರ್ಮೇನಿಯಾಕ್ಕೆ ‘ಆಕಾಶ್ 1-ಎಸ್’ ಕ್ಷಿಪಣಿ ವ್ಯವಸ್ಥೆಯ ಎರಡನೇ ಪೂರೈಕೆಯನ್ನು ಮಾಡಲಿದೆ. ‘ಆಕಾಶ್ 1-ಎಸ್’ ಭೂಮಿಯಿಂದ ಆಕಾಶಕ್ಕೆ ಚಿಮ್ಮಿ ಹೊಡೆದುರುಳಿಸುವ ಕ್ಷಿಪಣಿಯಾಗಿದೆ. ನವೆಂಬರ್ 2024 ರಲ್ಲಿ ಮೊದಲ ಬಾರಿಗೆ ಇದನ್ನು ಅರ್ಮೇನಿಯಾಕ್ಕೆ ಪೂರೈಸಲಾಗಿತ್ತು.

1. ಭಾರತವು ಅರ್ಮೇನಿಯಾಕ್ಕೆ ಹಾವಿಟ್ಜರ್ ಫಿರಂಗಿಗಳು ಮತ್ತು ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ ಸೇರಿದಂತೆ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಪೂರೈಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ರಷ್ಯಾ ಅನೇಕ ವರ್ಷಗಳಿಂದ ಅರ್ಮೇನಿಯಾದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿತ್ತು; ಆದರೆ ಈಗ ಎರಡೂ ದೇಶಗಳ ಸಂಬಂಧದಲ್ಲಿ ಬಿರುಕು ಕಾಣುತ್ತಿದೆ. 2022 ರಿಂದ 2024 ರ ಅವಧಿಯಲ್ಲಿ ಅರ್ಮೇನಿಯಾ ತನ್ನ ಒಟ್ಟು ಶಸ್ತ್ರಾಸ್ತ್ರ ಖರೀದಿಗಳಲ್ಲಿ ಶೇ. 43 ರಷ್ಟು ಭಾರತದಿಂದ ಖರೀದಿಸಿದೆ.

2. ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ನೆರೆಯ ರಾಷ್ಟ್ರಗಳಾಗಿದ್ದು, ಅವುಗಳ ನಡುವೆ ತೀವ್ರ ವೈರತ್ವವಿದೆ. ಅಜರ್‌ಬೈಜಾನ್‌ಗೆ ಪಾಕಿಸ್ತಾನ ಮತ್ತು ಟರ್ಕಿಯೊಂದಿಗೆ ನಿಕಟ ಸಂಬಂಧಗಳಿದ್ದರೆ, ಅರ್ಮೇನಿಯಾಕ್ಕೆ ಭಾರತದೊಂದಿಗೆ ಉತ್ತಮ ಸಂಬಂಧಗಳಿವೆ. 2020 ರಿಂದ ಭಾರತ ಮತ್ತು ಅರ್ಮೇನಿಯಾ ಸರಕಾರದ ನಡುವಿನ ರಕ್ಷಣಾ ಸಂಬಂಧಗಳು ನಿರಂತರವಾಗಿ ಬೆಳೆಯುತ್ತಿವೆ.