ಏರ್‌ಸ್ಟ್ರೈಕ್ 2025 : ಗಡಿ ದಾಟಿ ಗುಡುಗಿದ ಭಾರತ, ಉಗ್ರ ನೆಲೆಗಳು ಉಡಿಸ್ !

  • ಭಾರತೀಯ ಸೇನೆಯು “ಆಪರೇಷನ್ ಸಿಂಧೂರ್” ಹೆಸರಿನಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿತು.

  • Rafale ಯುದ್ಧ ವಿಮಾನಗಳು ಮತ್ತು SCALP ಕ್ಷಿಪಣಿಗಳನ್ನು ಬಳಸಿ ನಿಖರ ದಾಳಿಗಳನ್ನು ನಡೆಸಲಾಯಿತು.

  • ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಲಾಯಿತು.

  • ಭಾರತವು ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

  • ಪಾಕಿಸ್ತಾನವು ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಶೆಲ್ ದಾಳಿ ನಡೆಸಿದೆ, ಇದರಿಂದ ಉದ್ವಿಗ್ನತೆ ಹೆಚ್ಚಿದೆ.

ಮಂಗಳುರು – ಭಾರತವು ಮೇ 7, 2025 ರಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಏರ್‌ಸ್ಟ್ರೈಕ್ ನಡೆಸಿದೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

(ಸೌಜನ್ಯ – India Today)

ಭಾರತವು ವೈಮಾನಿಕ ದಾಳಿ ನಡೆಸಿದ ೯ ಸ್ಥಳಗಳ ಮಾಹಿತಿ:

೧. ಬಹಾವಲ್‌ಪುರ (ಪಂಜಾಬ್)

ಇಲ್ಲಿನ ಮರ್ಕಜ್ ಸುಭಾನ್ ಅಲ್ಲಾ ಎಂಬ ಜೈಶ್-ಎ-ಮೊಹಮ್ಮದ್‌ನ ಮುಖ್ಯ ಕಚೇರಿಯ ಮೇಲೆ ದಾಳಿ ಮಾಡಲಾಯಿತು. ಫೆಬ್ರವರಿ ೧೪, ೨೦೧೯ ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂಚನ್ನು ಇಲ್ಲಿಯೇ ರೂಪಿಸಲಾಗಿತ್ತು ಮತ್ತು ಭಯೋತ್ಪಾದಕರಿಗೆ ಇಲ್ಲಿಯೇ ತರಬೇತಿ ನೀಡಲಾಗಿತ್ತು.

೨. ಮುರಿದ್ಕೆ (ಪಂಜಾಬ್)

ಇಲ್ಲಿ ಮರ್ಕಜ್ ತೋಯ್ಬಾ ಇದ್ದು, ಇದು ಲಷ್ಕರ್-ಎ-ತೊಯ್ಬಾದ ಪ್ರಮುಖ ತರಬೇತಿ ಕೇಂದ್ರವಾಗಿದೆ. ಇದು ೨೦೦೦ ರಿಂದ ಕಾರ್ಯನಿರ್ವಹಿಸುತ್ತಿದೆ. ಅಜ್ಮಲ್ ಕಸಬ್ ಮತ್ತು ಡೇವಿಡ್ ಕೋಲ್ಮನ್ ಹೆಡ್ಲಿ ಅವರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.

೩. ಸರ್ಜಾಲ್, ತೆಹ್ರಾ ಕಲಾ (ಸಿಯಾಲ್‌ಕೋಟ್, ಪಂಜಾಬ್)

ಇಲ್ಲಿ ಜೈಶ್-ಎ-ಮೊಹಮ್ಮದ್‌ನ ಮುಖ್ಯ ಲಾಂಚ್ ಪ್ಯಾಡ್ (ಭಯೋತ್ಪಾದಕರನ್ನು ಒಟ್ಟುಗೂಡಿಸಿ ಭಾರತಕ್ಕೆ ಕಳುಹಿಸುವುದು) ಇದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ನೆಲೆ ಇದೆ. ಮಾರ್ಚ್ ೨೦೨೫ ರಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ ಭಯೋತ್ಪಾದಕರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.

೪. ಭೀಂಬರ್ (ಪಾಕ್ ಆಕ್ರಮಿತ ಕಾಶ್ಮೀರ)

ಇಲ್ಲಿನ ಬರನಾಲಾ ಪ್ರದೇಶದಲ್ಲಿ ಮರ್ಕಜ್ ಅಹ್ಲೆ ಹದೀಸ್ ಎಂಬ ಹೆಸರಿನಲ್ಲಿ ಭಯೋತ್ಪಾದಕರ ನೆಲೆ ಇದೆ. ಇದು ಕೂಡ ಒಂದು ಲಾಂಚ್ ಪ್ಯಾಡ್ ಆಗಿದೆ.

೫. ಕೋಟ್ಲಿ (ಪಾಕ್ ಆಕ್ರಮಿತ ಕಾಶ್ಮೀರ)

ಮಸ್ಕರ್ ರಾಹಿಲ್ ಶಾಹಿದ್ ಎಂಬ ಹೆಸರಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಅತ್ಯಂತ ಹಳೆಯ ನೆಲೆ ಇದೆ. ಇದನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಇಡಲು ಹಾಗೂ ಭಯೋತ್ಪಾದಕರನ್ನು ಇರಿಸಲು ಬಳಸಲಾಗುತ್ತದೆ.

೬. ಕೋಟ್ಲಿ (ಪಾಕ್ ಆಕ್ರಮಿತ ಕಾಶ್ಮೀರ)

ಇಲ್ಲಿನ ಸೇನಾ ನೆಲೆದಿಂದ ೨ ಕಿ.ಮೀ ದೂರದಲ್ಲಿ ಮರ್ಕಜ್ ಅಬ್ಬಾಸ್ ಎಂಬ ಹೆಸರಿನಲ್ಲಿ ಜೈಶ್-ಎ-ಮೊಹಮ್ಮದ್‌ನ ನೆಲೆ ಇದೆ.

೭. ಸಿಯಾಲ್‌ಕೋಟ್ (ಪಂಜಾಬ್)

ಇಲ್ಲಿ ಮಹಮುನಾ ಜೋಯಾ ಎಂಬ ಹೆಸರಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಲಾಂಚ್ ಪ್ಯಾಡ್ ಇದೆ. ಇದು ಇಲ್ಲಿನ ಕೋಟ್ಲಿ ಭುಟ್ಟಾ ಸರಕಾರಿ ಆಸ್ಪತ್ರೆಯ ಬಳಿ ಇದೆ. ಇದು ಕಟುವಾದ ಭಯೋತ್ಪಾದನೆಯ ನಿಯಂತ್ರಣ ಕೇಂದ್ರವಾಗಿತ್ತು. ಪಠಾಣ್‌ಕೋಟ್ ದಾಳಿಯ ಸಂಚನ್ನು ಇಲ್ಲಿಯೇ ರೂಪಿಸಲಾಗಿತ್ತು.

೮. ಮುಜಫ್ಫರಾಬಾದ (ಪಾಕ್ ಆಕ್ರಮಿತ ಕಾಶ್ಮೀರ)

ಇಲ್ಲಿನ ಸವಾಯಿ ನಾಲಾ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾದ ಅತ್ಯಂತ ಪ್ರಮುಖ ನೆಲೆ ಇದೆ. ಇಲ್ಲಿ ಭಯೋತ್ಪಾದಕರ ನೇಮಕಾತಿ, ನೋಂದಣಿ ಮತ್ತು ತರಬೇತಿ ಮುಂತಾದ ಕೃತ್ಯಗಳು ನಡೆಯುತ್ತವೆ. ಇದು ೨೦೦೦ ರಿಂದ ಕಾರ್ಯನಿರ್ವಹಿಸುತ್ತಿದೆ. ಸೋನಮಾರ್ಗ್, ಗುಲ್ಮಾರ್ಗ್ ಮತ್ತು ಪಹಲ್ಗಾಮ್ ದಾಳಿಗಳಲ್ಲಿ ಭಾಗವಹಿಸಿದ್ದ ಭಯೋತ್ಪಾದಕರು ಇಲ್ಲಿ ತರಬೇತಿ ಪಡೆದಿದ್ದರು.

೯. ಮುಜಫ್ಫರಾಬಾದ (ಪಾಕ್ ಆಕ್ರಮಿತ ಕಾಶ್ಮೀರ)

ಸಯ್ಯದ್ನಾ ಬಿಲಾಲ್ ಎಂಬ ಹೆಸರಿನ ಲಷ್ಕರ್-ಎ-ತೊಯ್ಬಾದ ಲಾಂಚ್ ಪ್ಯಾಡ್ ಇದೆ. ಇಲ್ಲಿಂದ ಭಾರತಕ್ಕೆ ನುಸುಳುವಿಕೆ ನಡೆಯುತ್ತದೆ. ಇಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಕಾಡಿನಲ್ಲಿ ಬದುಕುಳಿಯುವ ತರಬೇತಿಯನ್ನು ನೀಡಲಾಗುತ್ತದೆ.

ಈ ಸ್ಥಳಗಳಲ್ಲಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಈ ೩ ಭಯೋತ್ಪಾದಕ ಸಂಘಟನೆಗಳ ನೆಲೆಗಳಿದ್ದವು. ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಭಾರತೀಯ ಸೇನೆಗೆ ಇತ್ತು. ಅದರಂತೆ, ಯೋಜಿತ ರೀತಿಯಲ್ಲಿ ಕೇವಲ ಈ ಸ್ಥಳಗಳನ್ನು ಗುರಿಯಾಗಿಸಲಾಯಿತು. ಈ ದಾಳಿಯಲ್ಲಿ ಯಾವುದೇ ಸಾಮಾನ್ಯ ಪಾಕಿಸ್ತಾನಿ ನಾಗರಿಕರನ್ನು ಗುರಿಯಾಗಿಸಲಿಲ್ಲ.

ಪ್ರತಿದಾಳಿಯಾಗಿ ಪಾಕಿಸ್ತಾನದಿಂದ ಗಡಿಯಲ್ಲಿ ಗುಂಡಿನ ದಾಳಿ

ಭಾರತದ ಕಾರ್ಯಾಚರಣೆಯ ನಂತರ, ಪಾಕಿಸ್ತಾನವು ಪ್ರತಿದಾಳಿಯಾಗಿ ರಜೌರಿ ಮತ್ತು ಪೂಂಚ್ ಜಿಲ್ಲೆಗಳ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿತು. ಭಾರತವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿತು. ಈ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಕೆಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ರಫೇಲ್‌ನಿಂದ ‘ಸ್ಕಾಲ್ಪ್’ ಕ್ಷಿಪಣಿಗಳ ಬಳಕೆ!

ಈ ಕಾರ್ಯಾಚರಣೆಗಾಗಿ ಭಾರತವು ರಫೇಲ್ ವಿಮಾನಗಳನ್ನು ಬಳಸಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಗಾಗಿ ತೂರಿ ಹೊಡೆಯುವ ಸಾಮರ್ಥ್ಯವಿರುವ ಸ್ಕಾಲ್ಪ್ ಕ್ಷಿಪಣಿಗಳನ್ನು ಸಹ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಷಿಪಣಿಗಳನ್ನು ಭೂಮಿಯ ಕೆಳಗಿರುವ ಬಂಕರ್‌ಗಳನ್ನು ನಾಶಮಾಡಲು ಬಳಸಲಾಗುತ್ತದೆ. ರಫೇಲ್ ಮತ್ತು ಇತರ ಯುದ್ಧ ವಿಮಾನಗಳು ಭಾರತೀಯ ಗಡಿಯೊಳಗೆ ಇದ್ದುಕೊಂಡೇ ಈ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿವೆ ಎಂದು ಹೇಳಲಾಗುತ್ತಿದೆ.

ಕಳೆದ ೧೦ ವರ್ಷಗಳಲ್ಲಿ ೬೦೦ ಸೈನಿಕರಿಗೆ ವೀರ ಮರಣ!

ಕಳೆದ ದಶಕದಲ್ಲಿ ೩೫೦ ಕ್ಕೂ ಹೆಚ್ಚು ಭಾರತೀಯ ನಾಗರಿಕರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಇದರಲ್ಲಿ ೮೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ದೇಶವನ್ನು ರಕ್ಷಿಸುವಾಗ ೬೦೦ ಕ್ಕೂ ಹೆಚ್ಚು ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ೧ ಸಾವಿರದ ೪೦೦ ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

ಅಜಿತ ದೋವಲ ಅವರಿಂದ ಇತರ ದೇಶಗಳಿಗೆ ದಾಳಿಯ ಮಾಹಿತಿ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಅವರು ದಾಳಿಯ ನಂತರ ಇತರ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಸಂಪರ್ಕ ಸಾಧಿಸಿ ಈ ದಾಳಿಯ ಮಾಹಿತಿಯನ್ನು ನೀಡಿದರು. ಇದರಲ್ಲಿ ಅಮೆರಿಕದ ಮಾರ್ಕೊ ರುಬಿಯೊ, ಸಂಯುಕ್ತ ಅರಬ್ ಸಂಸ್ಥಾನ, ಸೌದಿ ಅರೇಬಿಯಾ, ಬ್ರಿಟನ್ ಮುಂತಾದ ದೇಶಗಳು ಸೇರಿವೆ.

ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಎಂದು ಹೆಸರಿಟ್ಟಿದ್ದೇಕೆ?

ಈ ಮಿಲಿಟರಿ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಎಂದು ಹೆಸರಿಡಲಾಗಿದೆ. ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಇಸ್ಲಾಮಿ ಭಯೋತ್ಪಾದಕರು ಹಿಂದೂ ವಿವಾಹಿತ ಮಹಿಳೆಯರ ಪತಿಗಳನ್ನು ಮಾತ್ರ ಗುರಿಯಾಗಿಸಿ ಅವರನ್ನು ಹತ್ಯೆ ಮಾಡಿದ್ದರು. ಅವರ ಸೌಭಾಗ್ಯವನ್ನು ನಾಶಪಡಿಸಿದ್ದರು. ಅದರ ಸಂಕೇತವಾಗಿ ಆಪರೇಷನ್ ಸಿಂಧೂರ (ಕುಂಕುಮ) ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇಸ್ಲಾಮಾಬಾದ್‌ನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಬಂದ್!

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ಆದಾಗ್ಯೂ, ಎಲ್ಲಾ ನಿಗದಿತ ಪರೀಕ್ಷೆಗಳು ವೇಳಾಪಟ್ಟಿಯ ಪ್ರಕಾರವೇ ನಡೆಯುತ್ತವೆ ಎಂದು ಪಾಕಿಸ್ತಾನ ಸರಕಾರ ಹೇಳಿದೆ. ಈ ಘಟನೆಯಿಂದ ದೈನಂದಿನ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೇಡು ತೀರಿಸಿಕೊಂಡರು! – ವಿನಯ ನರ್ವಾಲ ಅವರ ತಾಯಿಯ ಪ್ರತಿಕ್ರಿಯೆ

ವೈಮಾನಿಕ ದಾಳಿ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಂಡಿದ್ದಾರೆ. ನನ್ನ, ನನ್ನ ಕುಟುಂಬದ ಮತ್ತು ಭಾರತದ ಸಂಪೂರ್ಣ ಜನರ ಬೆಂಬಲ ಅವರಿಗೆ ಇದೆ. ಸೈನಿಕರಿಗೆ ನಾನು ಹೇಳುವುದೇನೆಂದರೆ, ಸನ್ನದ್ಧರಾಗಿ ಹೀಗೆ ಮುಂದುವರಿಯಿರಿ ಮತ್ತು ಇದೇ ರೀತಿ ಸೇಡು ತೀರಿಸಿಕೊಳ್ಳಿ. ನಮ್ಮ ಜನರ ಮೇಲೆ ದಾಳಿ ಮಾಡುವ ಧೈರ್ಯ ಯಾರಿಗೂ ಇರಬಾರದು. ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಇಂದು ನ್ಯಾಯ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆಯ ಅಧಿಕಾರಿ ವಿನಯ ನರ್ವಾಲ್ ಅವರ ತಾಯಿ ಆಶಾ ನರ್ವಾಲ್ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಂಬಿಕೆಯನ್ನು ಉಳಿಸಿಕೊಂಡರು! – ಶುಭಂ ದ್ವಿವೇದಿ ಅವರ ಪತ್ನಿಯ ಭಾವನೆ

ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಪತಿಯ (ಶುಭಂ ದ್ವಿವೇದಿ ಅವರ) ಸಾವಿಗೆ ಅವರು ಸೇಡು ತೀರಿಸಿಕೊಂಡಿದ್ದಾರೆ. ನನಗೂ ಮತ್ತು ನನ್ನ ಕುಟುಂಬಕ್ಕೂ ಅವರ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಅವರು ಆ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನಾನು ನಿಜವಾಗಿಯೂ ಅವರಿಗೆ ಋಣಿಯಾಗಿದ್ದೇನೆ. ಶುಭಂ ಇಂದು ಎಲ್ಲೇ ಇದ್ದರೂ ಅವನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂದು ಶುಭಂ ದ್ವಿವೇದಿ ಅವರ ಪತ್ನಿಯು ವೈಮಾನಿಕ ದಾಳಿಯ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯ ಹೆಸರನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು! – ಸಂತೋಷ್ ಜಗದಾಳೆ ಅವರ ಪತ್ನಿ ಪ್ರಗತಿ ಜಗದಾಳೆ

ಭಯೋತ್ಪಾದಕರು ನಮ್ಮ ಮಹಿಳೆಯರ ಕುಂಕುಮವನ್ನು ಅಳಿಸಿ ಹಾಕಿದ ರೀತಿಯನ್ನು ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಈ ಕಾರ್ಯಾಚರಣೆಯ ಹೆಸರನ್ನು (ಆಪರೇಷನ್ ಸಿಂಧೂರ) ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ನಾನು ಭಾರತ ಸರಕಾರಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಂತೋಷ ಜಗದಾಳೆ ಅವರ ಪತ್ನಿ ಪ್ರಗತಿ ಜಗದಾಳೆ ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಭಯೋತ್ಪಾದಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಿ! – ಸಂಸದ ಅಸಾದುದ್ದೀನ್ ಓವೈಸಿ

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಮ್ಮ ಸೈನ್ಯ ನಡೆಸಿದ ದಾಳಿಯನ್ನು ನಾನು ಸ್ವಾಗತಿಸುತ್ತೇನೆ. ಪಾಕಿಸ್ತಾನಕ್ಕೆ ಇಂತಹ ಪಾಠ ಕಲಿಸಬೇಕು, ಮತ್ತೆಂದೂ ಇನ್ನೊಂದು ಪಹಲ್ಗಾಮ್ ನಂತೆ ಆಗಬಾರದು. ಪಾಕಿಸ್ತಾನದ ಭಯೋತ್ಪಾದಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಸಂಸದ ಅಸಾದುದ್ದೀನ್ ಓವೈಸಿ ಇವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಸಂಪಾದಕೀಯ ನಿಲುವು

ಭಾರತವು, ಇದು ಭಯೋತ್ಪಾದಕರಿಗೆ ನೇರ ಎಚ್ಚರಿಕೆಯಾಗಿದ್ದೂ, ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಸಾಕುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಾರ್ಯಾಚರಣೆ ಮಾಡಲಾಗುವುದು ಎಂದು ಈ ಘಟನೆಯ ಮೂಲಕ ಸಂದೇಶ ನೀಡಿದೆ.