ಪ್ರಯಾಗರಾಜ್ (ಉತ್ತರ ಪ್ರದೇಶ), ಜನವರಿ 24 (ಸುದ್ದಿ.) – ಶೌಚಾಲಯದಲ್ಲಿರುವ ನಲ್ಲಿ ಜೋಡಣೆ ಮುರಿದು ನೀರು ಅಖಾಡಕ್ಕೆ ನುಗ್ಗಿದ್ದರಿಂದ ಆವಾಹನ ಅಖಾಡದ ನಾಗಾ ಸಾಧುಗಳು ಜನವರಿ 23 ರಂದು ರಾತ್ರಿ ‘ಸೆಕ್ಟರ್ 19’ ರಲ್ಲಿನ ‘ಮೋರಿ-ಮುಕ್ತಿ’ ಚೌಕದಲ್ಲಿ ರಸ್ತೆ ತಡೆ ಚಳುವಳಿ ನಡೆಸಿದರು. ನಾಗಾ ಸಾಧುಗಳು ಚೌಕದ ಮಧ್ಯ ಭಾಗದಲ್ಲಿ ಮರದ ಮಂಚವನ್ನು ಇರಿಸುವ ಮೂಲಕ ಈ ಚೌಕವನ್ನು ಸಂಪೂರ್ಣವಾಗಿ ಮುಚ್ಚಿದರು. ರಾತ್ರಿ ದಿಢೀರ್ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ನಾಲ್ಕೂ ಮಾರ್ಗದಿಂದ ಬರುವ ವಾಹನ ಸಂಚಾರ ಸ್ಥಗಿತಗೊಂಡಿತು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಸ್ವಲ್ಪವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿ ಮುಂದಿನ 2 ಗಂಟೆಯೊಳಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆನಂತರ ನಾಗಾ ಸಾಧುಗಳು ಪ್ರತಿಭಟನೆ ಹಿಂಪಡೆದರು.