Mahakumbh 2025 : ಮೌನಿ ಅಮಾವಾಸ್ಯೆಯ ದಿನದಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು 10 ಕೋಟಿ ಭಕ್ತರು ಬರುವ ಸಾಧ್ಯತೆ ! – ಉತ್ತರ ಪ್ರದೇಶ ಸರಕಾರ

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ವ್ಯಾಪಕ ಸಿದ್ಧತೆ ಮಾಡುವಂತೆ ನಿರ್ದೇಶನ

  • ಇಲ್ಲಿಯವರೆಗೆ, 6 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.

ಪ್ರಯಾಗರಾಜ್ – ಮಹಾಕುಂಭ ಮೇಳದ ಮೊದಲ ಅಮೃತಸ್ನಾನವನ್ನು ಯಶಸ್ವಿಯಾಗಿ ಆಯೋಜಿಸಿದ ನಂತರ, ಸರಕಾರವು ಮುಂದಿನ ಪ್ರಮುಖ ಸ್ನಾನದ ಸಿದ್ಧತೆಗಾಗಿ ಪ್ರಯತ್ನಿಸುತ್ತಿದೆ. ಮೌನಿ ಅಮಾವಾಸ್ಯೆಯ ದಿನದಂದು, ಅಂದರೆ ಜನವರಿ 29 ರಂದು, ಅಂದಾಜು 10 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬರುತ್ತಾರೆ ಎಂದು ರಾಜ್ಯ ಸರಕಾರ ಹೇಳಿದೆ. ಆ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವ್ಯಾಪಕ ಸಿದ್ಧತೆ ನಡೆಸುವಂತೆ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭ ಮೇಳದ ಮೊದಲ ಸ್ನಾನದ ನಂತರ, ಇಲ್ಲಿಯವರೆಗೆ 6 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮಕರ ಸಂಕ್ರಾಂತಿಯಂದು, ಅಂದರೆ ಜನವರಿ 14 ರಂದು, ಮೊದಲ ಅಮೃತ ಸ್ನಾನದ ಸಮಯದಲ್ಲಿ, 3 ಕೋಟಿ 50 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದರು. ಮುಂದಿನ ದೊಡ್ಡ ಅಮೃತಸ್ನಾನ ಜನವರಿ 29 ರಂದು ಮೌನಿ ಅಮಾವಾಸ್ಯೆಯಂದು ನಡೆಯಲಿದೆ. ಜನವರಿ 15 ರಂದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾ ಕುಂಭ ಮೇಳದ ಸಿದ್ಧತೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಮೌನಿ ಅಮಾವಾಸ್ಯೆಯಂದು 8 ರಿಂದ 10 ಕೋಟಿ ಭಕ್ತರು ಆಗಮಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಆದ್ದರಿಂದ, ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ ಮತ್ತು ಸೂಕ್ತವಾಗಿರುವ ಆವಶ್ಯಕತೆಯಿದೆ. ರೈಲ್ವೆ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ನಿಗದಿಪಡಿಸಬೇಕು. ಭಕ್ತರಿಗೆ ಅನಾನುಕೂಲವಾಗದಂತೆ ನಿಯಮಿತ ಮತ್ತು ವಿಶೇಷ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಹೇಳಿದೆ.

ಅವರು ಮಾತನ್ನು ಮುಂದುವರಿಸಿ, ಮಹಾಕುಂಭ ಕ್ಷೇತ್ರದಲ್ಲಿ ಮೊಬೈಲ್ ನೆಟವರ್ಕ್ ಇನ್ನಷ್ಟು ಸುಧಾರಿಸಲು ಸೇವಾ ಪೂರೈಕೆದಾರ ಸಂಸ್ಥೆಯೊಂದಿಗೆ ಚರ್ಚೆ ನಡೆಸಬೇಕು. ಪ್ರಯಾಗರಾಜಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಬಸ್ಸುಗಳು, ಶಟಲ ಬಸ್ಸುಗಳು ಮತ್ತು ಎಲೆಕ್ಟ್ರಿಕ ಬಸ್ಸುಗಳ ಕಾರ್ಯನಿರ್ವಹಣೆ ಸರಾಗವಾಗಿ ಮುಂದುವರಿಸಬೇಕು. ಒಟ್ಟಾರೆ ಪ್ರಯಾಗರಾಜಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು. ಪ್ರತಿಯೊಂದು ವಲಯದಲ್ಲಿ ಶೌಚಾಲಯಗಳ ನಿಯಮಿತ ಶುಚಿಗೊಳಿಸುವಿಕೆ, ಘಾಟಗಳ ಬ್ಯಾರಿಕೇಡ (ಕಬ್ಬಿಣದ ಚೌಕಟ್ಟು), ಹಾಗೆಯೇ 24 ಗಂಟೆಗಳ ವಿದ್ಯುತ ಮತ್ತು ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.