Cleaning Campaign In Mahakumbh : ಅಮೃತ ಸ್ನಾನದ ನಂತರ, ಕುಂಭ ಕ್ಷೇತ್ರದ ಸ್ವಚ್ಛತೆ ಆಡಳಿತಕ್ಕೆ ಒಂದು ಸವಾಲಾಗಿದೆ, ಸಾವಿರಾರು ಕಾರ್ಮಿಕರು ಸ್ವಚ್ಛತೆಗಾಗಿ ಕಾರ್ಯನಿರತ !

ಪ್ರಯಾಗರಾಜ್, ಜನವರಿ 15 (ಸುದ್ದಿ.) – ಕುಂಭ ಕ್ಷೇತ್ರದಲ್ಲಿ ಅಮೃತಸ್ನಾನಕ್ಕಾಗಿ 3 ಕೋಟಿಗೂ ಹೆಚ್ಚು ಭಕ್ತರು ಬಂದಿದ್ದರು. ಅವರಿಗಾಗಿ ಕುಂಭ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಅಮೃತಸ್ನಾನ ದಿನದಂದು ಈ ಶೌಚಾಲಯಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಆದ್ದರಿಂದ, ಈ ಎಲ್ಲಾ ಶೌಚಾಲಯಗಳ ಸ್ವಚ್ಛತೆ ಆಡಳಿತಕ್ಕೆ ದೊಡ್ಡ ಸವಾಲಾಗಿದೆ. ಜನವರಿ 15 ರಂದು ಸಾವಿರಾರು ನೈರ್ಮಲ್ಯ ಕಾರ್ಮಿಕರು ಈ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಶೌಚಾಲಯಗಳ ಸ್ವಚ್ಛತೆಯ ಜೊತೆಗೆ, ಕುಂಭ ಕ್ಷೇತ್ರದ ರಸ್ತೆಗಳ ಸ್ವಚ್ಛತೆ ಮತ್ತು ಭವ್ಯ ತ್ರಿವೇಣಿ ಸಂಗಮದ ದಡದ ಸ್ವಚ್ಛತೆಯೂ ಆಡಳಿತಕ್ಕೆ ದೊಡ್ಡ ಸವಾಲುಗಳಾಗಿವೆ. ಜನವರಿ 15 ರ ಬೆಳಗಿನ ಜಾವದಿಂದ ಸಾವಿರಾರು ನೈರ್ಮಲ್ಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ರಸ್ತೆಗೆ ಅಂಟಿಕೊಂಡಿರುವ ಮರಳು ಮಿಶ್ರಿತ ಮಣ್ಣನ್ನು ತೆಗೆಯುವ ಸವಾಲು !

ತ್ರಿವೇಣಿ ಸಂಗಮ ಮತ್ತು ಗಂಗಾ ನದಿಯ ವಿಶಾಲವಾದ ಮರಳು ಪ್ರದೇಶಗಳಲ್ಲಿ ದೊಡ್ಡ ಕಬ್ಬಿಣದ ಪಟ್ಟಿಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದ ಮರಳು ಬರುತ್ತಿದೆ. ಗಾಳಿಯಿಂದ ಈ ಮರಳು ಹಾರಿ ವಾಹನ ಚಾಲಕರು, ರಸ್ತೆಯಲ್ಲಿ ಹೋಗುವ ಬರುವ ಭಕ್ತರ ಕಣ್ಣುಗಳಲ್ಲಿ ಬೀಳುತ್ತಿದೆ. ಮರಳು ಹಾರಬಾರದು ಎಂದು ಆಡಳಿತದಿಂದ ಕುಂಭಕ್ಷೇತ್ರದ ಎಲ್ಲ ರಸ್ತೆಗಳನ್ನು ಗುಡಿಸಲಾಗುತ್ತಿದೆ, ಹಾಗೆಯೇ ಅದರ ಮೇಲೆ ನೀರನ್ನು ಸಿಂಪಡಿಸಲಾಗುತ್ತಿದೆ.

ಅಮೃತಸ್ನಾನದ ದಿನದಂದು ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಮಿಶ್ರಿತ ಮಣ್ಣು ಸಂಗ್ರಹವಾಗಿದೆ. ಅಮೃತಸ್ನಾನದ ದಿನದಂದು ಸ್ವಲ್ಪ ಮಳೆಯಾದ ಕಾರಣ, ಮರಳು ಮಣ್ಣು ರಸ್ತೆಗಳಿಗೆ ಅಂಟಿಕೊಂಡಿದೆ. ಆದ್ದರಿಂದ, ನೈರ್ಮಲ್ಯ ಕಾರ್ಮಿಕರು ರಸ್ತೆಗಳಿಂದ ಈ ಮಣ್ಣನ್ನು ಸಲಿಕೆಗಳಿಂದ ತೆಗೆದುಹಾಕಬೇಕಾಗುತ್ತಿದೆ. ಕುಂಭ ಕ್ಷೇತ್ರದಲ್ಲಿ ಹರಡಿರುವ ದೊಡ್ಡ ಪ್ರಮಾಣದಲ್ಲಿರುವ ಈ ರಸ್ತೆಗಳ ಮೇಲಿನ ಮಣ್ಣನ್ನು ತೆಗೆದುಹಾಕುವುದು ಆಡಳಿತಕ್ಕೆ ಒಂದು ದೊಡ್ಡ ಸವಾಲಾಗಿದೆ.