INR 22,280 Crore Recovery ED : ವಂಚನೆ ಮಾಡಿ ಭಾರತದಿಂದ ಪರಾರಿಯಾಗಿದ್ದ ಉದ್ಯಮಿಗಳಿಂದ ಇದುವರೆಗೆ 22 ಸಾವಿರದ 280 ಕೋಟಿ ರೂಪಾಯಿ ವಸೂಲಿ !

ಯಾರನ್ನೂ ಬಿಡುವುದಿಲ್ಲ ! – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಮಾಹಿತಿ ನೀಡುತ್ತಾ, ವಂಚನೆ ಮಾಡಿ ದೇಶದಿಂದ ಪಲಾಯನ ಮಾಡಿದ ಉದ್ಯಮಿ ವಿಜಯ ಮಲ್ಯ ಮತ್ತು ನೀರವ್ ಮೋದಿ ಅವರಿಂದ 22 ಸಾವಿರದ 280 ಕೋಟಿ ರೂಪಾಯಿಗಳನ್ನು ಜಾರಿ ನಿರ್ದೇಶನಾಲಯದ ಮೂಲಕ (ಇಡಿ) ವಸೂಲಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಕಾರ್ಯಚರಣೆ ಮುಂದುವರೆಯುತ್ತದೆ. ವಿಜಯ ಮಲ್ಯ ಅವರಿಂದ 14 ಸಾವಿರದ 131 ಕೋಟಿ 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ವಸೂಲಿ ಮಾಡಿ ಸಾರ್ವಜನಿಕ ವಲಯದ ಬ್ಯಾಂಕ್‌ಗೆ ಹಿಂತಿರುಗಿಸಲಾಗಿದೆ. ಅಲ್ಲದೆ, ನೀರವ್ ಮೋದಿ ಪ್ರಕರಣದಲ್ಲಿ 1 ಸಾವಿರದ 52 ಕೋಟಿ 58 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ನಾವು ಯಾರನ್ನೂ ಬಿಡಲಿಲ್ಲ. ಅವರು ದೇಶದಿಂದ ಓಡಿಹೋಗಿದ್ದರೂ ನಾವು ಅವರ ಹಿಂದೆ ಬೆನ್ನತ್ತಿದ್ದೇವೆ. ಬ್ಯಾಂಕ್‌ಗಳಿಗೆ ಸೇರಿದ ಹಣವನ್ನು, ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕು ಎಂದಿದ್ದಾರೆ.

ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಜಂಟಿಯಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾರೆ. ಚೋಕ್ಸಿಯಿಂದ 2 ಸಾವಿರದ 566 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು ಅದನ್ನು ಹರಾಜು ಮಾಡಲಾಗಿದೆ, ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದ್ದಾರೆ.