ಸಪ್ತಪದಿಯಲ್ಲಿನ ವಚನವನ್ನು ಅರಿವಿಗೆ ತಂದುಕೊಟ್ಟ ಬಳಿಕ ವಿವಾಹಿತ ದಂಪತಿಗಳಿಂದ ವಿಚ್ಛೇದನದ ನಿರ್ಧಾರವನ್ನು ಹಿಂಪಡೆಯಲಾಗುತ್ತಿದೆ !
ಬೆಮೆತರಾ (ಛತ್ತೀಸ್‌ಗಢ) – ಇಲ್ಲಿ ಆಯೋಜಿಸಲಾಗಿದ್ದ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಪಡೆಯಲು ಬಂದಿದ್ದ ದಂಪತಿಗೆ ಬೆಮೆತರಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ನೀಲಿಮಾ ಸಿಂಗ್ ಬಘೇಲ್ ನೀಡಿದ ಸಕಾರಾತ್ಮಕ ಸಲಹೆಯಿಂದಾಗಿ ದಂಪತಿಗಳು ವಿಚ್ಛೇದನದ ನಿರ್ಧಾರವನ್ನು ಹಿಂಪಡೆದರು. ಸಲಹೆ ನೀಡುವಾಗ ನ್ಯಾಯಾಧೀಶೆ ನೀಲಿಮಾ ಸಿಂಗ್ ಬಘೇಲ್ ಅವರು ಮದುವೆಯ ಸಮಯದಲ್ಲಿ ಸಪ್ತಪದಿಯಲ್ಲಿ ನೀಡಿದ ವಚನಗಳ ಆಧಾರವನ್ನು ತೆಗೆದುಕೊಂಡಿದ್ದರಿಂದ ಇದು ಸಾಧ್ಯವಾಯಿತು.
ಸರ್ವೋಚ್ಚ ನ್ಯಾಯಾಲಯವು ಪತಿ-ಪತ್ನಿಯರ ವಿಚ್ಛೇದನಕ್ಕೆ 6 ತಿಂಗಳ ಕಾಲಾವಕಾಶ ನೀಡುತ್ತದೆ. ಈ ಕಾಲಾವಧಿಯನ್ನು ದಂಪತಿಗಳಿಗೆ ವಿಚಾರ ಮಾಡಲು ಅಥವಾ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನೀಡಲಾಗುತ್ತದೆ. ನ್ಯಾಯಾಧೀಶೆ ನೀಲಿಮಾ ಸಿಂಗ್ ಅವರು ನ್ಯಾಯಾಲಯದ ಗೋಡೆಗಳ ಮೇಲೆ ಸಪ್ತಪದಿಯ ವಚನಗಳ ಒಂದು ಸುಂದರ ಚೌಕಟ್ಟನ್ನು ಹಾಕಿದ್ದಾರೆ. ಆ ದಂಪತಿಗಳಿಗೆ ಈ ಏಳು ವಚನಗಳನ್ನು ಅನುಸರಿಸಲು ಹೇಳುತ್ತಾರೆ. ಇದರಿಂದ ಪತಿ-ಪತ್ನಿಯರಿಗೆ ಪರಸ್ಪರರ ಬಗ್ಗೆ, ಮಕ್ಕಳ ಬಗ್ಗೆ ಮತ್ತು ಕುಟುಂಬದ ಬಗ್ಗೆ ಅವರ ಜವಾಬ್ದಾರಿಗಳ ಅರಿವು ಯಾವಾಗಲೂ ಇರುತ್ತದೆ.
ಈ ಕುರಿತು ನ್ಯಾಯಾಧೀಶೆ ನೀಲಿಮಾ ಸಿಂಗ್ ಇವರು, ಸಪ್ತಪದಿ ಸಂಸ್ಕೃತದಲ್ಲಿ ಇರುತ್ತದೆ. ಹೆಚ್ಚಿನ ಜನರು ಈ ವಿವಾಹದ ವಚನಗಳನ್ನು ನೆನಪಿಸಿಕೊಳ್ಳುವುದಿಲ್ಲ; ಅದಕ್ಕಾಗಿಯೇ ನಾನು ಈ ಸಪ್ತಪದಿಗಳನ್ನು ಹಿಂದಿಗೆ ಭಾಷಾಂತರಿಸಿ ಅವುಗಳ ‘ಫ್ರೇಮ್’ ಉಡುಗೋರೆಯಾಗಿ ನೀಡುತ್ತೇನೆ ಇದರಿಂದ ಅವರು ಯಾವಾಗಲೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೂ ಸಂಸ್ಕೃತಿಯನುಸಾರ ದಂಪತಿಗಳ ಜೀವನದಲ್ಲಿ ವಿಚ್ಛೇದನಕ್ಕೆ ಯಾವುದೇ ಅವಕಾಶವಿಲ್ಲ. ವಿಚ್ಛೇದನವು ಪಾಶ್ಚಾತ್ಯ ವಿಕೃತಿಯ ಒಂದು ರೂಪವಾಗಿದೆ. ದಂಪತಿಗಳು ಸಪ್ತಪದಿಯಲ್ಲಿನ ವಚನವನ್ನು ಪ್ರಾಮಾಣಿಕವಾಗಿ ಅನುಸರಿಸಿದರೆ, ವಿಚ್ಛೇದನದ ಆಲೋಚನೆ ಎಂದಿಗೂ ಮನಸ್ಸಿನಲ್ಲಿ ಉದ್ಭವಿಸುವುದಿಲ್ಲ ! |