ಕೇಜ್ರಿವಾಲ್ ನ್ಯಾಯಾಂಗ ಬಂಧನ ಸೆಪ್ಟೆಂಬರ್ 25 ರವರೆಗೆ ವಿಸ್ತರಣೆ !

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ : ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 25 ರವರೆಗೆ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 11 ರಂದು ನಡೆದ ವಿಚಾರಣೆಯಲ್ಲಿ ಕೇಜ್ರಿವಾಲ್ ಅವರು ‘ವೀಡಿಯೋ ಕಾನ್ಫರೆನ್ಸಿಂಗ್’ ಮೂಲಕ ಹಾಜರಾಗಿದ್ದರು. ಇದೇ ಪ್ರಕರಣದಲ್ಲಿ ಆರೋಪಿ ಹಾಗೂ ಎಎಪಿ ಶಾಸಕ ದುರ್ಗೇಶ್ ಪಾಠಕ್ ಅವರಿಗೆ ನ್ಯಾಯಾಲಯ 1 ಲಕ್ಷ ರೂಪಾಯಿ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ. ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ಸಮನ್ಸ್ ಪ್ರಕಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರವಿಂದ್ ಕೇಜ್ರಿವಾಲ್, ದುರ್ಗೇಶ್ ಪಾಠಕ್, ವಿನೋದ್ ಚೌಹಾಣ್, ಆಶಿಶ್ ಮಾಥುರ್ ಮತ್ತು ಶರತ್ ರೆಡ್ಡಿ ವಿರುದ್ಧ ಸಿಬಿಐ ರೋಸ್ ವೆನ್ಯೂ ಕೋರ್ಟ್‌ಗೆ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯವು ಸೆಪ್ಟೆಂಬರ್ 3 ರಂದು ಚಾರ್ಜ್ ಶೀಟ್ ಅನ್ನು ಗಮನಿಸಿತು. ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿ ಸೆಪ್ಟೆಂಬರ್ 11 ರೊಳಗೆ ತಮ್ಮ ಹೇಳಿಕೆಯನ್ನು ಸಲ್ಲಿಸುವಂತೆ ನ್ಯಾಯಾಲಯ ತಿಳಿಸಿತ್ತು. ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ದುರ್ಗೇಶ್ ಪಾಠಕ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮದ್ಯ ನೀತಿ ಹಗರಣದ ಪ್ರಮುಖ ಸೂತ್ರದಾರದಲ್ಲಿ ಕೇಜ್ರಿವಾಲ್ ಒಬ್ಬರು ! – ಸಿಬಿಐ

ಈ ಹಿಂದೆ ಸಿಬಿಐ ನಾಲ್ಕನೇ ಪೂರಕ ಚಾರ್ಜ್ ಶೀಟ್ ಅನ್ನು ಜುಲೈ 30 ರಂದು ಸಲ್ಲಿಸಿತ್ತು. ಅದರಲ್ಲಿಕೇಜ್ರಿವಾಲ್‌ ಅವರು ಆರೋಪಿ ಎಂದು ಹೇಳಲಾಗಿತ್ತು. ಮದ್ಯ ನೀತಿ ಹಗರಣದ ಮಾಸ್ಟರ್ ಮೈಂಡ್ ಗಳಲ್ಲಿ ಕೇಜ್ರಿವಾಲ್ ಕೂಡ ಒಬ್ಬರು ಎಂದು ಸಿಬಿಐ ಆರೋಪಿಸಿದೆ. ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಆಗಸ್ಟ್ 23 ರಂದು ಸಿಬಿಐ ರೂಸ್ ಅವೆನ್ಯೂ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು. ಈ ಪ್ರಕರಣದಲ್ಲಿ ಸಿಬಿಐ ಸೆಪ್ಟೆಂಬರ್ 7 ರಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಐದನೇ ಮತ್ತು ಅಂತಿಮ ಚಾರ್ಜ್ ಶೀಟ್ ಸಲ್ಲಿಸಿತು.

ಸಂಪಾದಕೀಯ ನಿಲುವು

  • ದೆಹಲಿಯಂತಹ ಬಹುಮುಖ್ಯ ರಾಜ್ಯದ ಮುಖ್ಯಮಂತ್ರಿ ಸುಮಾರು 6 ತಿಂಗಳ ಕಾಲ ಜೈಲಿನಲ್ಲಿದ್ದರೂ ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿರುವುದು ಪ್ರಜಾಪ್ರಭುತ್ವದ ಘೋರ ಅಪಹಾಸ್ಯವಾಗಿದೆ. ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳೇ ಲಭ್ಯವಿಲ್ಲ. ಇದಕ್ಕಿಂತ ದೊಡ್ಡ ಪ್ರಜಾಪ್ರಭುತ್ವದ ಸೋಲು ಬೇರೇನಿದೆ ?
  • ಕೇಂದ್ರ ಸರಕಾರವು ದೆಹಲಿ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು !