ಬೀದರ – ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಗ್ರಾಮದ ಭಾಲ್ಕಿ ತಾಲೂಕಿನ ಕೋನಾಮೆಲ ಕುಂದಾ ಮೊರಾರ್ಜಿ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಹತ್ತನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿನಿಯರು ‘ಶಾಲೆಯ ಶಿಕ್ಷಕರು ನಮ್ಮನ್ನು ವಕ್ರದೃಷ್ಟಿಯಿಂದ ನೋಡುತ್ತಾರೆ, ಮೈ ಮುಟ್ಟುತ್ತಾರೆ. ವಿರೋಧಿಸಿದರೆ ಪರೀಕ್ಷೆಯ `ಹಾಲ್ ಟಿಕೇಟ’ ನೀಡುವುದಿಲ್ಲ, ಎಂದು ಬೆದರಿಕೆ ಹಾಕುತ್ತಾರೆ. ನಮಗೆ ಈ ನರಕದಿಂದ ಬಿಡಿಸಿರಿ’ ಎಂಬ ಅಳಲು ಪ್ರಸಾರಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಸಪ್ಟೆಂಬರ 9ರಂದು ಶಾಲೆಗೆ ಭೇಟಿ ನೀಡಿದರು.
ಹಾಸ್ಟೆಲ್ ಪ್ರಾಂಶುಪಾಲರು, ‘ವಾರ್ಡನ್’ ಹಾಗೂ ಹಿಂದಿ, ಕನ್ನಡ, ಇಂಗ್ಲಿಷ್ ಭಾಷೆಗಳ ಶಿಕ್ಷಕರ ಅನುಚಿತ ವರ್ತನೆಯ ಬಗ್ಗೆ ವಿದ್ಯಾರ್ಥಿನಿಯರು ಪ್ರಸಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ‘ನಮಗೆ ಒಳ್ಳೆಯ ಆಹಾರವನ್ನು ನೀಡುವುದಿಲ್ಲ. ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಅಶುದ್ಧ ನೀರು ಕುಡಿಯುವುದರಿಂದ ಚರ್ಮ ರೋಗಗಳು ಬಂದಿವೆ. ಔಷಧಗಳನ್ನು ಕೇಳಿದರೆ, ಎಕ್ಸಪೈರಿ ಔಷಧಗಳನ್ನು ನೀಡಲಾಗುತ್ತದೆ’, ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಹೇಳಿದರು.
ಈ ಬಗ್ಗೆ ಈಶ್ವರ ಖಂಡ್ರೆಯವರು ಪತ್ರಕರ್ತರೊಂದಿಗೆ ಮಾತನಾಡುವಾಗ, ನಾನು ಎಲ್ಲ ವಿದ್ಯಾರ್ಥಿನಿಯರನ್ನು ಖುದ್ದಾಗಿ ಭೇಟಿ ಮಾಡಿ ಅವರನ್ನು ವಿಚಾರಿಸಿದ್ದೇನೆ. ಆಹಾರ, ಹಾಸ್ಟೆಲ್ ಮತ್ತು ಶಿಕ್ಷಕರ ತನಿಖೆಗೆ ಆದೇಶಿಸಲಾಗಿದೆ. ಸಮಾಜ ಕಲ್ಯಾಣಾಧಿಕಾರಿ ಇಲಾಖೆ ಅಧಿಕಾರಿಗಳಿಗೆ ಶಾಲೆಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ. ಯಾವುದೇ ಅವ್ಯವಹಾರ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಸಮಾಜದ ತಲೆ ತಗ್ಗಿಸುವ ಇಂತಹ ಶಿಕ್ಷಕರನ್ನು ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! |